Rain Alert: ಬೆಂಗಳೂರಿಗೆ ಏಪ್ರಿಲ್ 3, 5 ಮತ್ತು 6 ರಂದು ಭಾರೀ ಮಳೆ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 01: ಬೆಂಗಳೂರಿನಾದ್ಯಂತ ಉರಿ ಬಿಸಿಲು ಮುಂದುವರೆದಿದ್ದು, ಈ ಮಧ್ಯೆ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಪೂರ್ವ ಮುಂಗಾರು ಮಳೆ ಮುಂದಿನ ಮೂರು ದಿನ ನಗರದಲ್ಲಿ ಅಬ್ಬರಿಸಲಿದೆ. ಏಪ್ರಿಲ್ ಮೊದಲ ವಾರವೇ ಬೆಂಗಳೂರಿಗೆ ಪೂರ್ವ ಮುಂಗಾರು ಮಳೆ ತಂಪೆರೆಯಲಿದೆ. ನಾಳೆ ಬುಧವಾರವೇ ವ್ಯಾಪಕ ಮಳೆ ಬರಲಿದೆ ಎಂಬ ಮುನ್ಸೂಚನೆ ಇದೆ.
ಸಿಲಿಕಾನ್ ಸಿಟಿಯಲ್ಲಿ ಜನರು ಅಧಿಕ ಬಿಸಿಲಿಗೆ ತತ್ತರಿಸಿದ್ದಾರೆ. ಏಪ್ರಿಲ್ 2, 5 ಮತ್ತು 6 ರಂದು ಮೂರು ದಿನಗಳ ಕಾಲ ನಗರಾದ್ಯಂತ ಉಷ್ಣ ಅಲೆ ಮಧ್ಯೆ ಗುಡುಗು ಸಹಿತ ವ್ಯಾಪಕ ಮಳೆ ಬರಲಿದೆ. ಮೂರು ದಿನವು ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಬಿಸಿಲು ಕಂಡು ಬಂದರೆ ಸಂಜೆ ನಂತರ ದಿಢೀರ್ ಮಬ್ಬು ಕವಿದು, ಜೋರಾಗಿ ತಂಪು ಗಾಳಿ ಬೀಸಲಿದೆ. ಕೆಲವೆಡೆ ಸಣ್ಣ ಪ್ರಮಾಣದ ಮಳೆ ಯಾದರೆ, ಮತ್ತೆ ಹಲವು ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಂಭವವಿದೆ.

ಹವಾಮಾನ ಇಲಾಖೆ ಪ್ರಕಾರ, ಮಳೆ ಬರುವ ಈ ಮೂರು ದಿನಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಈ ತಾಪಮಾನದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎನ್ನಲಾಗಿದೆ. ಸಂಜೆ ನಂತರ ವಾತಾವರಣದಲ್ಲಿ ತೀವ್ರ ರೂಪದಲ್ಲಿ ಬದಲಾವಣೆ ಆಗುತ್ತದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ನಿಗದಿತ ಈ ಮೂರು ದಿನಗಳ ಮಳೆ ಮಧ್ಯ ಎರಡು ದಿನ ಅಂದರೆ ಏಪ್ರಿಲ್ 3 ಮತ್ತು 4ರಂದು ಮಳೆ ಬರುವಂತಹ ವಾತಾವರಣ ಇದ್ದರೂ ಸಹಿತ ಒಣಹವೆಯೇ ಮುಂದುವರಿಯಲಿದೆ. ಮುಂದಿನ ಎರಡು ತಿಂಗಳು ಮೇ ಮತ್ತು ಜೂನ್ ವರೆಗೆ ನಗರದಲ್ಲಿ ಇದೇ ರೀತಿಯ ಮಳೆ, ಬಿಸಿಲಿನ ವಾತಾವರಣ ಕಂಡು ಬರಲಿದೆ.

ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯಗಳ ಕಾರಣದಿಂದಾಗಿ ಪೂರ್ವ ಮುಂಗಾರು ಮಳೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಇದರೊಂದಿಗೆ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಯಾಗಿರುವ ಬೆಂಗಳೂರು ನಗರದಲ್ಲೂ ಮಳೆ ವ್ಯಾಪಕವಾಗಿ ಸುರಿಯುವ ಲಕ್ಷಣಗಳು ಇವೆ.
11 ಜಿಲ್ಲೆಗಳಿಗೆ ಜೋರು ಮಳೆ
ರಾಜ್ಯದ ಒಳನಾಡು ಜಿಲ್ಲೆಗಳು, ಕರಾವಳಿ ಹಾಗೂ ಕೆಲವು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದಾರು ದಿನಗಳ ಕಾಲ ವ್ಯಾಪಕ ಮಳೆ ಬರಲಿದೆ. ಮುಂದಿನ ಐದು ದಿನಗಳಲ್ಲಿ ಮೂರು ದಿನ ರಾಜ್ಯದ 11 ಜಿಲ್ಲೆಗಳಿಗೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಉಳಿದ ಜಿಲ್ಲೆಗಳಲ್ಲಿ ಎಂದಿನಂತೆ ಒಣಹವೆ, ಶುಷ್ಕ ವಾತಾವರಣ ಕಂಡು ಬರಲಿದೆ. ಈ ಮೂಲಕ ಅರ್ಧ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಆರ್ಭಟ ಕಂಡು ಬರಲಿದೆ.












Click it and Unblock the Notifications