Heavy Rain: ವಾಯುಭಾರ ಕುಸಿತ ಹಿನ್ನಲೆ: ಬೆಂಗಳೂರಿನಲ್ಲಿ ಭಾರೀ ಮಳೆ
ಬೆಂಗಳೂರು, ಆಗಸ್ಟ್ 27: ಬೆಂಗಳೂರು ಮಹಾನಗರದ ಹಲವೆಡೆ ಇಂದು ಧಾರಾಕಾರ ಮಳೆಯಾಗಿದೆ. ಮಳೆರಾಯನ ಆಗಮನದಿಂದ ಗಣೇಶ ಚತುರ್ಥಿಯ ಸಂಭ್ರಮದಲ್ಲಿದ್ದ ಸಿಲಿಕಾನ್ ಸಿಟಿ ಜನತೆಗೆ ತಂಪಾಗಿದೆ. ಆದರೆ, ಹಬ್ಬದ ಸಡಗರವನ್ನ ಎಂಜಾಯ್ ಮಾಡಲು ಹೊರಗಡೆ ಬಂದಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರ, ಲಾಲ್ಬಾಗ್, ಶಾಂತಿನಗರ, ಜಯನಗರ, ವಿಜಯನಗರ, ಜೆ.ಪಿ.ನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಸದಾಶಿವನಗರ, ಹೆಬ್ಬಾಳ, ಬಸವನಗುಡಿ, ಬನಶಂಕರಿ, ಚಂದ್ರಲೇಔಟ್, ಕೋರಮಂಗಲ, ಕೋಣನಕುಂಟೆ ಸೇರಿದಂತೆ ಹಲವು ಭಾಗದಲ್ಲಿ ಭಾರೀ ಮಳೆಯಾಗಿದೆ.
ಇನ್ನೂ ವಿಧಾನಸೌಧ, ಕುಮಾರಕೃಪಾ ರಸ್ತೆ, ರೇಸ್ ಕೋರ್ಸ್, ವಿಂಡ್ಸರ್ ಮ್ಯಾನರ್, ಕಾರ್ಪೋರೇಶನ್ ಸರ್ಕಲ್ನ ಸುತ್ತಮುತ್ತ ಕೂಡ ಜೋರು ಮಳೆಯಾಯಿತು. ದಿಢೀರನೆ ಮಳೆ ಬಂದಿದ್ದರಿಂದ ಜನರು ಬಸ್ ನಿಲ್ದಾಣ, ಅಂಗಡಿಗಳ ಎದುರು ಕೆಲ ಗಂಟೆ ಆಸರೆ ಪಡೆದರು. ಇನ್ನು, ಛತ್ರಿ ಹಿಡಿದು ಜನರು ಓಡಾಡುತ್ತಿರುವ ದೃಶ್ಯಗಳು ಕಂಡುಬಂದವು. ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆ ಬಂದಿರುವುದರಿಂದ ನೀರು ರಸ್ತೆ ಮೇಲೆ ನಿಂತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಇನ್ನೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು, ಬೆಂಗಳೂರಿನ ಯಶವಂತಪುರ, ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ, ಮೆಜೆಸ್ಟಿಕ್, ವಿಧಾನಸೌಧ, ಜೆ.ಪಿ.ನಗರ, ರಿಚ್‌ಮಂಡ್ ವೃತ್ತ, ಟೌನ್‌ಹಾಲ್ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ಸಂಭವವಿದೆ.
ಇನ್ನೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಆಗಸ್ಟ್.30ರವರೆಗೆ ರಾಜ್ಯಾಧ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಆಗಸ್ಟ್.30ರವರೆಗೆ ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಳನಾಡು ಜಿಲ್ಲೆಗಳಲ್ಲಿ ಆಗಸ್ಟ್.28ರವರೆಗೆ ಗುಡುಗು, ಗಾಳಿ ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳ ಕಾಲ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ. ತಲುಪುವ ಸಾಧ್ಯತೆಯಿದ್ದು, ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಜೋರಾದ ಗಾಳಿಯೊಂದಿಗೆ ಮಳೆ ತೀವ್ರಗೊಳ್ಳಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ವರುಣ ಆರ್ಭಟಿಸಿದ್ದಾನೆ. ಇದರ ನಡುವೆ ಬೀದರ್ ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications