Bengaluru Water: ಕಾವೇರಿ ನೀರಿನ ಅವಲಂಬನೆ ತಪ್ಪಿಸಬಹುದೇ? ತಜ್ಞರು ಕೊಟ್ಟ ಪ್ರಮುಖ ಸೂತ್ರಗಳಿವು..

ಬೆಂಗಳೂರು: ಬೆಂಗಳೂರಿಗರಿಗೆ ಪ್ರತಿ ಬಾರಿ ಬೇಸಿಗೆಯಲ್ಲೂ ನೀರಿನ ಚಿಂತೆ ಕಾಡುತ್ತದೆ. ಈ ವರ್ಷ ಮಳೆ ಕೊರತೆ ಆಗಿದ್ದು, ಬರಗಾಲ ಛಾಯೆ ಎಲ್ಲೆಡೆ ಆವರಿಸಿದೆ. ಹಿಂಗಾರು ಮಳೆ ಕೈ ಕೊಟ್ಟರೆ ಕುಡಿಯಲು ನೀರಿನ ಗತಿ ಏನು? ಎಂಬ ಆಲೋಚನೆ ಈಗಲೇ ಶುರುವಾಗಿದೆ. ತಜ್ಞರ ಪ್ರಕಾರ, ನಾಗರಿಕರು ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡರೆ ಜನಸಂಖ್ಯೆ ಹೆಚ್ಚಾದರೂ ಭವಿಷ್ಯದಲ್ಲಿ ಕಾವೇರಿ ನೀರಿನ ಮೇಲಿನ ಸಂಪೂರ್ಣ ಅವಲಂಬನೆ ತಪ್ಪಿಸಬಹುದು. ಅಷ್ಟೇ ಏಕೆ ಕೋಟಿಗಟ್ಟಲೇ ಹಣ ಸುರಿದು ಜಾರಿಗೆ ತರಲು ಉದ್ದೇಶಿಸಿರುವ ಮೇಕೆದಾಟು ಯೋಜನೆ (Mekedatu Project) ಸಹ ಬೇಕಾಗುವುದಿಲ್ಲ!

ಬೆಂಗಳೂರು ಜನರಿಗೆ ಕುಡಿಯುಲು ತಿಂಗಳಿಗೆ ಸುಮಾರು 2.3 ಟಿಎಂಸಿ ಮತ್ತು ವಾರ್ಷಿಕವಾಗಿ 24-27 ಟಿಎಂಸಿ ಕಾವೇರಿ ನೀರು ಬೇಕಾಗುತ್ತದೆ. ಇದಕ್ಕಾಗಿ ಕಾವೇರಿ ಜಲಾಶಯವನ್ನು ಅವಲಂಬಿಸಿದ್ದೇವೆ. ಸುಮಾರು 100 ಕಿಲೋ ಮೀಟರ್ ದೂರದಿದ್ದ BWSSB ನೀರು ಸರಬರಾಜು ಮಾಡುತ್ತದೆ. ಆದರೆ ಮಳೆ ಕೊರತೆ ಆದ ವರ್ಷದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ರಾಜಧಾನಿಯಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗುತ್ತದೆ. ಇದಕ್ಕೆ ಪರಿಹಾರವೇನು...? ಈ ಬಗ್ಗೆ ತಜ್ಞರು ನೀಡಿದ ಪರಿಹಾರೋಪಾಯಗಳು ಯಾವುವು?. ಅವುಗಳನ್ನು ಚಾಚೂ ತಪ್ಪದೇ ಜನರು ಹಾಗೂ ಸರ್ಕಾರ ಪಾಲಿಸಿದರೆ ಕಾವೇರಿ ಮೇಲಿನ ಅವಲಂಬನೆ, ಒತ್ತಡ, ಭವಿಷ್ಯ ನೀರಿನ ಬಿಕ್ಕಟ್ಟು ಆತಂಕ ದೂರವಾಗುತ್ತದೆ.

Bengaluru Water Crisis

ಹೇಗಿದ್ದ ಬೆಂಗಳೂರು ಹೇಗಾಗಿದೆ?

ಬೆಂಗಳೂರಿನಲ್ಲಿ ಹಸಿರು, ಕೆರೆಗಳ ಪ್ರಮಾಣ ದಶಕಗಳಿಂದ ದಶಕಕ್ಕೆ ಕಡಿಮೆಯಾಗಿದೆ. ಬಿದ್ದ ಮಳೆ ನೀರು ಇಂಗುತ್ತಿಲ್ಲ. ಕೆರೆಗಳು ಹೂಳು ತುಂಬಿಕೊಂಡಿವೆ. ಅದೆಷ್ಟೋ ಕೆರೆಗಳನ್ನು ರಾಜಕಾರಣಿಗಳು, ರಿಯಲ್ ಎಸ್ಟೇಜ್ ಕ್ಷೇತ್ರದವರು ಗುಳುಂ ಮಾಡಿದ್ದಾರೆ. ಇನ್ನೂ ಮಳೆ ಕಡಿಮೆ ಆದರಂತೂ ಅಂತರ್ಜಲ ಪ್ರಮಾಣ ತೀವ್ರವಾಗಿ ಕುಸಿಯುತ್ತದೆ. ಇದಕ್ಕೆ ಪರಿಹಾರವೆಂಬಂತೆ ನಾವು ಹಸಿರು ಹೊದಿಕೆ (Green Cover) ಹೆಚ್ಚಿಸಬೇಕು, ಕಟ್ಟಡಗಳಿಗೆ ನಿಯಮಗಳಂತೆ ಮಳೆ ನೀರು ಕೊಯ್ಲುನ್ನು (Rain Water Harvesting) ಕಡ್ಡಾಯವಾಗಿ ಜಾರಿಗೊಳಿಸಬೇಕು. ಕೆರೆಗಳ ಪುನಶ್ಚೇತನಕ್ಕೆ (Lake Rejuvenation) ಸರ್ಕಾರ ಆದ್ಯತೆ ನೀಡಬೇಕು.

ಬೆಂಗಳೂರು ಬೋರ್‌ವೆಲ್ ನಿರ್ವಹಣೆಗೆ ಟೆಕ್ನಾಲಜಿ ಟಚ್! 6,000 ಕೊಳವೆಬಾವಿಗಳಿಗೆ IoT ಅಳವಡಿಕೆ: BWSSB
ಶಾಶ್ವತವಾಗಿ ನೀರಿನ ಸಮಸ್ಯೆ ಇಲ್ಲವಾಗಿಸಲು ಸ್ಥಳೀಯವಾಗಿ ಸಾಕಷ್ಟು ಅವಕಾಶಗಳು ಇವೆ. ಈ ಕುರಿತು IISc ಹಿರಿಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಅವರು ಮತ್ತು ಪರಿಸರವಾದಿ ವಿಶ್ವನಾಥ್ ಇವರು 'ಒನ್‌ ಇಂಡಿಯಾ ಕನ್ನಡದ' ಜೊತೆ ಮಾತನಾಡಿದ್ದಾರೆ.

ಶೇ.65 ರಷ್ಟು ಕಾಡು ನಾಶ!; ಡಾ.ಟಿ.ವಿ.ರಾಮಚಂದ್ರ

ಹವಾಮಾನ ವೈಪರೀತ್ಯದಿಂದ ಬದಲಾವಣೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲೂ ನೀರಿನ ಸಮಸ್ಯೆ ಆಗುತ್ತಿದೆ. ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ತಗ್ಗುತ್ತಲೇ ಇದೆ. ಕಾಡುಗಳು ಪ್ರಮಾಣ ಕಡಿಮೆಯಾದಂತೆಲ್ಲ ನೀರಿನ ಸಮಸ್ಯೆ ದೀರ್ಘಕಾಲಕ್ಕೆ ವಿಸ್ತರಿಸುತ್ತಾ ಬಂದಿದೆ. 1965 ರಿಂದ ಇವತ್ತಿಗೆ ಹೋಲಿಸಿದರೆ ಶೇ.65 ರಷ್ಟು ಕಾಡು ಕಳೆದುಕೊಂಡಿದ್ದೇವೆ. ಕಾಡಿನ ಅವನತಿಯಿಂದ ನೀರು ಕಡಿಮೆ ಆಗಿ, ರೈತರು ಬೆಳೆ ಬೆಳೆಯುವುದು, ಕೃಷಿ ಅದಾಯ ಕಡಿಮೆ ಆಗುತ್ತಿದೆ ಎಂದು ಹಿರಿಯ ವಿಜ್ಞಾನಿ ಟಿ.ವಿ.ರಾಮಚಂದ್ರ ಅವರು ವಿವರಿಸಿದರು.

Bengaluru Water Crisis

750-800 ಮಿ.ಮೀ. ಮಳೆ ನೀರು ಸಂಗ್ರಹಿಸಲು 2 ಕ್ರಮ

ಬೆಂಗಳೂರಿನ ವಿಷಯಕ್ಕೆ ಬರುವುದಾದರೆ ಇಲ್ಲಿ ವಾರ್ಷಿಕ ಸುಮಾರು 750-800 ಮಿಲಿ ಮೀಟರ್‍ ಮಳೆ ಆಗುತ್ತದೆ. ಈ ನೀರನ್ನು ಎರಡು ಹಂತಗಳಲ್ಲಿ ಶೇಖರಿಸಿಕೊಳ್ಳಬಹುದು. ಒಂದು 'ಮನೆಯ ಮೇಲ್ಛಾವಣಿಯ ಮಳೆನೀರು ಕೊಯ್ಲು' (Rooftop Rain Harvest) ಮತ್ತೊಂದು 'ಮಳೆ ನೀರು ಕೊಯ್ಲು'.

ಇದರಲ್ಲಿ ಮನೆ ಮೇಲೆ ಬೀಳುವ ಮಳೆ ನೀರನ್ನು ಸಂಪ್‌ಗೆ ಹರಿಯುವಂತೆ ಮಾಡಿ ಸಂಗ್ರಹಿಸಬಹುದು. ಇದರಿಂದ ವಾರ್ಷಿಕವಾಗಿ 15 ಟಿಎಂಸಿ ನೀರು ಸಂಗ್ರಹಿಸಬಹುದು. ಇನ್ನೂ ಮಳೆ ನೀರು ಕೊಯ್ಲು ಅಳವಡಿಕೆಯಿಂದ ಅಂತರ್ಜಲ ಹೆಚ್ಚಾಗುತ್ತದೆ ಎಂದರು.

ಕೆರೆಗಳ ಪುನಶ್ಚೇತನದಿಂದ ತಾಪ ಇಳಿಕೆ, ಅಂತರ್ಜಲ ವೃದ್ಧಿ

ಈ ಹಿಂದೆ ಸಾರಕ್ಕಿ ಕೆರೆ ಪುನಃಶ್ಚೇತಗೊಳಿಸಿದ ಬಳಿಕ 100 ಅಡಿ ಅಂತರ್ಜಲ ಹೆಚ್ಚಳವಾಗಿತ್ತು. ಸುತ್ತಮುತ್ತ ಕಿಲೋ ಮೀಟರ್ ಗಳ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿದ್ದಲ್ಲದೇ ಆ ಭಾಗದಲ್ಲಿ ಗರಿಷ್ಠ ತಾಪಮಾನವು ಇತರ ಪ್ರದೇಶಗಳಿಗಿಂತ ಸುಮಾರು 3ರಷ್ಟು ಕಡಿಮೆ ದಾಖಲಾಗಿದ್ದಕ್ಕೆ ಸಾಕ್ಷ್ಯವಿದೆ. ರಾಜ್ಯ ಸರ್ಕಾರ ನಗರದಲ್ಲಿರುವ 216 ಕೆರೆಗಳ ಪುನಶ್ಚೇತನ ಮಾಡಿದರೆ ನೀರಿಗಾಗಿ ಮೇಕೆದಾಟು ಯೋಜನೆಯೇ ಬೇಕಾಗುವುದಿಲ್ಲ. ಜೊತೆಗೆ 'ಕಾವೇರಿ' ಅವಲಂಬನೆಯು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.

ತ್ಯಾಜ್ಯ ನೀರಿನಿಂದ 16 ಟಿಎಂಸಿ ನೀರು ಲಭ್ಯ

ಇನ್ನೂ ನಗರದಲ್ಲಿ ಉತ್ಪಾದನೆಯಾಗುವ 18 ಟಿಎಂಸಿ ತ್ಯಾಜ್ಯ ನೀರನ್ನು ಸಂಸ್ಕರಿಸಿದರೆ 16 ಟಿಎಂಸಿ ಲಭ್ಯವಾಗುತ್ತದೆ. ಅದನ್ನು ಕೆರೆಗಳಿಗೆ ಹರಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ಇಂತಹ ಯೋಜನೆ ಸಾಕಾರಗೊಳಿಸಲು, ಸರ್ಕಾರಿ ನಿವೇಶನ, ದೊಡ್ಡ ಮನೆ, ಕಟ್ಟಡಗಳಲ್ಲಿ ಕಡ್ಡಾಯ ಮಳೆ ನೀರು ಕೊಯ್ಲು ಕಾನೂನು ಕಾರ್ಯಗತಗೊಳಿಸಲು ದಕ್ಷ ಅಧಿಕಾರಿಗಳು ಬೇಕು. ಕಾನೂನು ಪಾಲಿಸದವರಿಂದ ದುಡ್ಡು ಪಡೆದು ಅನುಮತಿ ನೀಡುವ ಅಧಿಕಾರಿಗಳು ಇಂದು ಹೆಚ್ಚಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಹಸಿರು ಕಡಿಮೆ, ಕಾಂಕ್ರೀಟ್ ದರ್ಬಾರು!

1970ರ ದಶಕದಲ್ಲಿ ಬೆಂಗಳೂರಿನಲ್ಲಿ ಶೇ.68ರಷ್ಟು ಹಸಿರು ಹೊದಿಕೆ ಇತ್ತು. ಆಗ ಕಟ್ಟಡಗಳು, ಕಾಂಕ್ರೀಟ್ ಪ್ರಮಾಣ ಕೇವಲ 8ರಷ್ಟಿತ್ತು. ಇಂದು ತದ್ವಿರುದ್ಧವಾಗಿದ್ದು ಶೇ.87ರಷ್ಟು ಕಾಂಕ್ರೀಟ್ ಆವರಿಸಿದ್ದು, ಹಸಿರಿನ ಪ್ರಮಾಣ ಶೇ.3ಕ್ಕೆ ಕುಸಿದಿದೆ. ಹಸಿರು ಹೆಚ್ಚಳ ಜ್ಞಾನ, ಅರಿವು ನಾಗರಿಕರಲ್ಲಿ ಇರಬೇಕು. ಮೇಕೆದಾಟು ಯೋಜನೆ ಜಾರಿಯಾದಲ್ಲಿ ಸಾವಿರಾರು ಎಕ್ರೆ ಕಾಡು ಕಳೆದುಕೊಳ್ಳುತ್ತೇವೆ. ಅದರ ಬದಲು ಕೆರೆ ಪುನಃಶ್ಚೇತನ ಮಾಡಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ಅರಣ್ಯವು ಉಳಿಯುತ್ತದೆ ಎಂದರು.

ಅಂತರ್ಜಲ ರಿಚಾರ್ಜ್ ಅಗತ್ಯ: ವಿಶ್ವನಾಥ್

ನಗರದಲ್ಲಿ 1.4 ಕೋಟಿ ಜನಸಂಖ್ಯೆ ಇದ್ದು, ಮಳೆ ನೀರು ಕೊಯ್ಲು ಸಂಖ್ಯೆ 2 ಲಕ್ಷವಷ್ಟೇ ಇದೆ. ಬೆಂಗಳೂರು ಜಲಮಂಡಳಿಯು 30x40 ಕ್ಕೂ ಅಧಿಕ ಅಳತೆಯ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಬೇಕು. ಹಾಲಿ ರೈನ್ ಹಾರ್ವೆಸ್ಟ್‌ಗಳನ್ನು ಸಕಾಲಕ್ಕೆ ನಿರ್ವಹಿಸಬೇಕು. ಸರ್ಕಾರ ಈ ಬಗ್ಗೆ ಜಾಗೃತಿ ಮಾಡಿಸಬೇಕು. ನಗರದ ಕೊಳವೆ ಬಾವಿಗಳಿಂದ ನಿತ್ಯ 800 ದಶ ಲಕ್ಷ ಲೀಟರ್ ನೀರು ಎತ್ತಲಾಗುತ್ತದೆ. ಆದರೆ ಅದನ್ನು ರೀಜಾರ್ಚ್ ಮಾಡುವುದನ್ನೇ ಮರೆತಿದ್ದೇವೆ. ಇನ್ನೂ ಕೆರಗಳ ಪುನಶ್ಚೇತನಗೊಳಿಸಬೇಕು. ಹಾಗಾದಲ್ಲಿ ಒಂದು ಕೆರೆಯು ದಿನಕ್ಕೆ 7-8 ದಶಲಕ್ಷ ಲಿಟರ್ ನಷ್ಟು ಅಂತರ್ಜಲ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ ಎಂದು ವಿಶ್ವನಾಥ್ ಅವರು ತಿಳಿಸಿದರು.

ಈ ವರ್ಷ ಬೆಂಗಳೂರಿಗೆ ಬೇಕಾದಷ್ಟು ನೀರಿದೆ

ಈ ವರ್ಷ ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಆಗುವುದು ಅನುಮಾನ. ಯಾಕೆಂದರೆ ಹೇಮಾವತಿ, ಕೆಆರ್ ಎಸ್, ಕಬಿನಿ, ಹಾರಂಗಿ ಡ್ಯಾಂನಲ್ಲಿ ಸದ್ಯಕ್ಕಿರುವ ನೀರು ಮುಂದಿನ ಜೂನ್ ವರೆಗೆ ಸಾಕಾಗುತ್ತದೆ. ಮಾಸಿಕ 2.3 ಟಿಎಂಸಿ ನೀರು ಅಗತ್ಯವಿದೆ. ನಾಲ್ಕು ಜಲಾಶಯಗಳಲ್ಲಿ 16.6 ಟಿಎಂಸಿ ನೀರು ಸಂಗ್ರಹ ಸದ್ಯಕ್ಕಿದೆ. ಅದು ಮುಂದಿನ ಏಳೆಂಟು ತಿಂಗಳಿಗೆ ಆಗುತ್ತದೆ. ಆದರೆ ಆ ನೀರನ್ನು ಸಮರ್ಪಕವಾಗಿ ಕಾಪಾಡಿಕೊಳ್ಳುವ ಹೊಣೆ ನಮ್ಮ ಮೇಲಿದೆ ಎಂದರು.

ಸಂಕಷ್ಟ ಬಂದಾಗಲೇ ನೀರಿನ ಬೆಲೆ ತಿಳಿಯೋದು

ಜನರು ಇದ್ದಲ್ಲಿಗೆ ಕಾವೇರಿ ನೀರು ಸಿಗುತ್ತದೆ, ಹೀಗಾಗಿ ಅನೇಕರಿಗೆ ನೀರಿನ ಬೆಲೆ ಗೊತ್ತಿಲ್ಲ. ನೀರು ಸಿಗದ ಪ್ರದೇಶಗಳಲ್ಲಿ ಮಳೆ ನೀರು ಕೊಯ್ಲು, ಮಳೆ ನೀರು ಸಂಗ್ರಹದ ಬಗ್ಗೆ ಹೆಚ್ಚಿನ ಅರಿವಿದೆ. ಈ ಕುರಿತು ಅಭಿಯಾನ ನಡೆಸಬೇಕು. ರೈನ್ ಹಾರ್ವೆಸ್ಟ್ ಮಾಡದವರ ಮೇಲೆ ದಂಡ ಹೇರಬೇಕು. ಈಗಾಗಲೇ ರೈನ್ ಹಾರ್ವೆಸ್ಟ್ ಅಳವಡಿಸಿಕೊಂಡವರನ್ನು ಮಾದರಿಯಾಗಿ ಪರಿಗಣಿಸಿ, ಅದರ ಕುರಿತು ಅಭಿಯಾನ ಕೈಗೊಂಡರೆ ಮಾತ್ರವೇ ಬೆಂಗಳೂರಿನಲ್ಲಿ ನೀರಿನ ಲಭ್ಯತೆ ಹೆಚ್ಚಾಗುತ್ತದೆ, ಕಾವೇರಿ ಮೇಲಿನ ಅವಲಂಬನೆ ಕಡಿಮೆ ಆಗುತ್ತದೆ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+