ಬೆಂಗಳೂರು ಬೋರ್‌ವೆಲ್ ನಿರ್ವಹಣೆಗೆ ಟೆಕ್ನಾಲಜಿ ಟಚ್! 6,000 ಕೊಳವೆಬಾವಿಗಳಿಗೆ IoT ಅಳವಡಿಕೆ: BWSSB
ಬೆಂಗಳೂರು: ಬೆಂಗಳೂರು ಜಲಮಂಡಳಿಯ ಕೊಳವೆಬಾವಿಗಳ ನಿರ್ವಹಣೆಯನ್ನು ಹೆಚ್ಚು ವೈಜ್ಞಾನಿಕ ಮತ್ತು ದತ್ತಾಂಶ ಆಧಾರಿತವಾಗಿಸುವ ನಿಟ್ಟಿನಲ್ಲಿ BWSSB ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 2027ರ ಮಾರ್ಚ್ ಅಂತ್ಯದೊಳಗೆ 6,000 ಕೊಳವೆಬಾವಿಗಳಿಗೆ ಐಒಟಿ (Internet of Things) ಸಾಧನಗಳನ್ನು ಅಳವಡಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳ ಅವರು ಮಂಗಳವಾರ ತಿಳಿಸಿದರು.
ಜಲಮಂಡಳಿ ವ್ಯಾಪ್ತಿಯ ಸುಮಾರು 16 ಸಾವಿರ ಕೊಳವೆಬಾವಿಗಳಲ್ಲಿ ಈಗಾಗಲೇ 1,800 ಕೊಳವೆಬಾವಿಗಳಿಗೆ ಐಒಟಿ ಸಾಧನಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಕೊಳವೆ ಬಾವಿಯಲ್ಲಿನ ನೀರಿನ ಆಳ, ನೀರೆತ್ತುವಿಕೆಯ ಪ್ರಮಾಣ ಹಾಗೂ ಪಂಪ್ ಕಾರ್ಯನಿರ್ವಹಿಸುವ ಅವಧಿಯಂತಹ ಪ್ರಮುಖ ಮಾಹಿತಿಯನ್ನು ರಿಯಲ್‌ಟೈಮ್‌ನಲ್ಲಿ ದಾಖಲಿಸಿ ಕೇಂದ್ರ ವ್ಯವಸ್ಥೆಗೆ ರವಾನಿಸಲಾಗುತ್ತಿದೆ ಎಂದು ವಿವರಿಸಿದರು.

ಈ ಮಾಹಿತಿಯನ್ನು ಎರಡು ಪ್ರತ್ಯೇಕ ಡ್ಯಾಶ್‌ಬೋರ್ಡ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಮುಂದಿನ ಹಂತದಲ್ಲಿ ಈ ವ್ಯವಸ್ಥೆಯನ್ನು SCADA ವ್ಯವಸ್ಥೆಯೊಂದಿಗೂ ಸಂಯೋಜಿಸುವ ಮೂಲಕ ಕೊಳವೆಬಾವಿಗಳ ಕಾರ್ಯ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಗಾ ವಹಿಸುವ ಉದ್ದೇಶ ಹೊಂದಲಾಗಿದೆ.
ಐಒಟಿ ಸಾಧನಗಳ ಅಳವಡಿಕೆ ಪ್ರಯೋಜನಗಳು
ನೀರಿಲ್ಲದ ಸಂದರ್ಭದಲ್ಲೂ ಮೋಟಾರ್‌ಗಳನ್ನು ನಿರಂತರವಾಗಿ ಓಡಿಸುವುದು, ಪಂಪ್‌ಸೆಟ್‌ಗಳನ್ನು ಅಗತ್ಯಕ್ಕಿಂತ ಹೆಚ್ಚು ಸಮಯ ಬಳಸುವುದು ಹಾಗೂ ಸಮಸ್ಯೆಗಳನ್ನು ತಡವಾಗಿ ಗುರುತಿಸುವುದರಿಂದ ಕೊಳವೆಬಾವಿಗಳು ಪದೇಪದೇ ತಾಂತ್ರಿಕ ದೋಷಕ್ಕೆ ಒಳಗಾಗುತ್ತಿವೆ. ಐಒಟಿ ಆಧಾರಿತ ಮೇಲ್ವಿಚಾರಣೆಯಿಂದ ಸಮಸ್ಯೆಯನ್ನು ಮುಂಚಿತವಾಗಿಯೇ ಗುರುತಿಸಿ, ತಾಂತ್ರಿಕ ಹಾನಿ ಮತ್ತು ಅನಗತ್ಯ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಡಾ. ಮಂಜುಳ ಅವರು ಹೇಳಿದ್ದಾರೆ.
ತಾಂತ್ರಿಕ ಸಮಸ್ಯೆ, ನಿರ್ವಹಣೆ ವೆಚ್ಚ ನಿಯಂತ್ರಣ
ಐಒಟಿ ಸಾಧನಗಳ ಅಳವಡಿಕೆಯಿಂದ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಕೊಳವೆಬಾವಿಗಳನ್ನು ಗುರುತಿಸುವುದು, ಮೋಟಾರ್‌ಗಳ ಅನಗತ್ಯ ಕಾರ್ಯಾಚರಣೆಯನ್ನು ತಡೆಯುವುದು, ಪದೇಪದೇ ಮೋಟಾರ್ ಸುಡುವಂತಹ ತಾಂತ್ರಿಕ ಸಮಸ್ಯೆಗಳನ್ನು ಕಡಿಮೆ ಮಾಡುವುದು ಹಾಗೂ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸುವುದು ಸಾಧ್ಯವಾಗಲಿದೆ ಎಂದರು.
ಇಷ್ಟು ಮಾತ್ರವಲ್ಲದೇ ವಿವಿಧ ಪ್ರದೇಶಗಳಲ್ಲಿನ ಕೊಳವೆಬಾವಿಗಳ ನೀರಿನ ಮಟ್ಟ ಮತ್ತು ಬಳಕೆಯ ಮಾದರಿಯ ಕುರಿತು ನಿರಂತರ ದತ್ತಾಂಶ ಲಭ್ಯವಾಗುವುದರಿಂದ ಅಂತರ್ಜಲದ ಸ್ಥಿತಿಯನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು, ಬಳಿಕ ಸುಸ್ಥಿರ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಉಳಿದ ಕೊಳವೆಬಾವಿಗಳಿಗೆ ಐಓಟಿ ಸಾಧನಗಳನ್ನು ಅಳವಡಿಸುವ ಕಾರ್ಯವನ್ನು ಹಂತಹಂತವಾಗಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


Click it and Unblock the Notifications
