Rain: ಹನೂರಲ್ಲಿ ಮಳೆಯ ರೌದ್ರಾವತಾರ; ನದಿಯಂತಾ ಹಳ್ಳ-ಕೊಳ್ಳಗಳು, ಸೆಪ್ಟೆಂಬರ್ ನಲ್ಲಿ ಗರಿಷ್ಠ ಮಳೆ ದಾಖಲು
ಹನೂರು: ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಮತ್ತೆ ಸಕ್ರಿಯವಾಗಿದ್ದು, ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯದಿಕ ಮಳೆ ದಾಖಲಾಗಿದೆ. ಇಲ್ಲಿನ ಹನೂರು ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ಕಳೆದ ಕೆಲವು ವರ್ಷಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. 2026 ಸೆಪ್ಟೆಂಬರ್‍ನಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ. ನೆನ್ನೆಯ ಭಾರೀ ಮಳೆಗೆ ಹಳ್ಳ, ಕೊಳ್ಳಗಳು ಉಕ್ಕಿ ಹರಿದಿದ್ದು, ಅಡಿಗಳಷ್ಟು ಎತ್ತರದಲ್ಲಿ ನೀರು ಪ್ರವಾಹದ ರೀತಿ ಹರಿದು ನದಿ ಸೇರಿದೆ. ಇದರ ವಿಡಿಯೋಗಳು ವೈರಲ್ ಆಗುತ್ತಿವೆ.
ಹನೂರು ಭಾಗದಲ್ಲಿ ಕಳೆದ ಕೆಲವು ವರ್ಷಗಳಲ್ಲೇ ಇಷ್ಟು ಜೋರಾಗಿ ಮಳೆ ಆಗಿರಲಿಲ್ಲ. ನೆನ್ನೆಯ ಮಳೆಗೆ ಅತ್ಯಧಿಕ ಪ್ರಮಾಣದಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಪ್ರಕಾರ, ಹನೂರು ಪಟ್ಟಣದಲ್ಲಿ ಈ ಸೆಪ್ಟೆಂಬರ್ ತಿಂಗಳಲ್ಲಿಯೇ 350 ಮಿ.ಮೀ. ಮಳೆಯಾಗಿದೆ; ಇದು ಇಲ್ಲಿನ ವಾರ್ಷಿಕ ಮಳೆಯ ಪ್ರಮಾಣದ ಸುಮಾರು 50 ರಿಂದ 60ರಷ್ಟು ಅಧಿಕ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಗುಡುಗು ಮಿಂಚು ಸಹಿತ ಕೆಲವು ಗಂಟೆ ಸುರಿದ ಮಳೆಗೆ ಪಿ.ಜಿ. ಪಾಳ್ಯ ಪ್ರದೇಶದ ತಟ್ಟೆಹಳ್ಳದ ತೊರೆಯು ಉಡುತೊರೆಹಳ್ಳದ ಕಡೆಗೆ ಹರಿದಿದೆ. ನದಿ ಉಕ್ಕಿ ಹರಿದಂತೆ ಮಳೆ ನೀರು ಮುಂದೆ ಸಾಗಿ, ಮೇಕೆದಾಟುವಿನ ಕೆಳಭಾಗದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಹನೂರು ಭಾಗದ ಎಲ್ಲಾ ತೊರೆಗಳು ಬಿಳಿಗುಂಡ್ಲುವಿನ ಕಡೆಗೆ ಹರಿಯುತ್ತದೆ. ಅಲ್ಲಿಂದ ಮುಂದೆ ಮೆಟ್ಟೂರು ಅಣೆಕಟ್ಟನ್ನು ತಲುಪುತ್ತದೆ. ಸದ್ಯ ಈ ಮಳೆಯಿಂದ ಕಾವೇರಿ ನದಿ ಹಾಗೂ ಉಪನದಿಗಳಲ್ಲಿ ಒಳಹರಿವು ಹೆಚ್ಚಿಸಿದೆ.
ಪಟ್ಟಣದ ಪ್ರಮುಖ ಸೇತುವೆ ಅರ್ಧಭಾಗಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಉಕ್ಕಿ ಹರಿದಿದ್ದು ಕಂಡು ಬಂದಿದೆ. ಗಿಡ ಗಂಟಿಗಳು, ಕೊಳ್ಳಗಳ ಪಕ್ಕ ಮಣ್ಣು ಎಲ್ಲವು ಕೊಚ್ಚು ಹೋಗಿವೆ. ಅಷ್ಟರ ಮಟ್ಟಿಗೆ ಮಳೆ ಸುರಿದಿದೆ.
ರಾಜ್ಯದ ಈ ಜಿಲ್ಲೆಗಳಲ್ಲಿ ಸುರಿದ ಜೋರು ಮಳೆ
ನೆನ್ನೆ ಚಾಮರಾಜನಗರ ಜಿಲ್ಲೆಯ ಎಂ.ಎಂ. ಹಿಲ್ಸ್ 9 ಸೆಂಟಿ ಮೀಟರ್, ಬೆಂಗಳೂರು ಎಚ್‌ಎಎಲ್ ಎಪಿ ವೀಕ್ಷಣಾಲಯ (ಬೆಂಗಳೂರು ನಗರ ಜಿಲ್ಲೆ) 7 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ
ಚಿತ್ರದುರ್ಗ ವೀಕ್ಷಣಾಲಯ 6, ತುಮಕೂರಿನ ಕುಣಿಗಲ್ 5, ಜಿಕೆವಿಕೆ ಬೆಂಗಳೂರು 5, ಬೆಂಗಳೂರು KIAL 4 ಸೆಂಟಿ ಮೀಟರ್, ಚಾಮರಾಜನಗರದಲ್ಲಿ 4 ಸೆಂಟಿ ಮೀಟರ್, ಟಿ ಜಿ ಹಳ್ಳಿ (ಬೆಂಗಳೂರು ನಗರ ಜಿಲ್ಲೆ ) 4, ಚನ್ನಗಿರಿ (ದಾವಣಗೆರೆ ಜಿಲ್ಲೆ) 3, ಹಿರಿಯೂರು ಎಚ್‌ಎಂಎಸ್ (ಚಿತ್ರದುರ್ಗ ಜಿಲ್ಲೆ) 3, ಕಿಬ್ಬನಹಳ್ಳಿ (ತುಮಕೂರು ಜಿಲ್ಲೆ) 3, ನೆಲಮಂಗಲ (ಬೆಂಗಳೂರು ಗ್ರಾಮಾಂತರ) 3, ವೈ ಎನ್ ಹೊಸಕೋಟೆ (ಜಿಲ್ಲೆ ತುಮಕೂರು) 3, ಬೆಳ್ಳೂರು (ಜಿಲ್ಲೆ, ಮಂಡ್ಯ ನಗರ) 2 ಸೆಂಟಿ ಮೀಟರ್ ಮಳೆ ದಾಖಲಾಗಿದೆ.
ರಾಜ್ಯದ ಮಳೆ ಮುನ್ಸೂಚನೆ
ಕರ್ನಾಟಕದ ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಮಳೆ ದುರ್ಬಲವಾಗಿದೆ. ದಕ್ಷಿಣ ಒಳನಾಡಿನಲ್ಲಿ ಮಳೆಗಾಲ ಅಂತ್ಯಕ್ಕೆಮಳೆ ಮತ್ತೆ ಚುರುಕಾಗಿದೆ. ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಒಳನಾಡಿನ ಬೆಂಗಳೂರು ಸೇರಿ ವಿವಿಧ ಭಾಗಗಳಲ್ಲಿ ಚುರುಕಿನ ಮಳೆ ಆಗಲಿದೆ. ಬೆಂಗಳೂರಿನಲ್ಲಿ ಇಂದು ಮಂಗಳವಾರ ಬೆಳಗ್ಗೆ ಅಲ್ಲಲ್ಲಿ ಜೋರು ಮಳೆ ಆಗಿದೆ. ಈ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


Click it and Unblock the Notifications
