Bengaluru: ಬೆಂಗಳೂರಿನಲ್ಲಿ ಬರಿದಾದ 3,000 ಬೋರ್‌ವೆಲ್‌ಗಳು; ನೀರಿನ ಸಮಸ್ಯೆ ಮತ್ತಷ್ಟು ಗಂಭೀರ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಲೇ ಇದೆ. ನಗರದಲ್ಲಿ ಸುಮಾರು 3000 ಬೋರ್‌ವೆಲ್‌ಗಳು ಬತ್ತಿಹೋಗಿವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
ಬೆಂಗಳೂರು ನಿವಾಸಿಗಳು ನೀರಿನ ಕೊರತೆಯಿಂದ ಬಳಲುತ್ತಿದ್ದು, ಸಮಸ್ಯೆಯನ್ನು ಪರಿಹರಿಸಲು ಕರ್ನಾಟಕ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಆದರೆ ಇದು ಸುಲಭವಾಗಿ ಬಗೆ ಹರಿಯುವಂತೆ ಕಾಣುತ್ತಿಲ್ಲ.

ಪರಿಸ್ಥಿತಿಯ ಲಾಭ ಪಡೆದಿರುವ ಖಾಸಗಿ ನೀರಿನ ಟ್ಯಾಂಕರ್ ಮಾಫಿಯಾ, ಕರಾಳ ದಂಧೆಯಲ್ಲಿ ತೊಡಗಿದೆ. ಟ್ಯಾಂಕರ್ ನೀರಿನ ಬೆಲೆ ₹3000 ದವರೆಗೆ ಮಾರಾಟ ಮಾಡಲಾಗುತ್ತಿದೆ. ಐಟಿ ನಗರದಲ್ಲಿನ ನೀರಿನ ಕೊರತೆಯು ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ ವರವಾಗಿ ಪರಿಣಮಿಸಿದೆ. ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಮಾರ್ಚ್ 7 ರೊಳಗೆ ನೋಂದಣಿ ಮಾಡದಿದ್ದರೆ ಅಂತಹ ನೀರಿನ ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರ ಖಾಸಗಿ ಆಪರೇಟರ್‌ಗಳಿಗೆ ಎಚ್ಚರಿಕೆ ನೀಡಿದೆ.
ಜನರ ಸಮಸ್ಯೆ ಕೇಳೊದ್ಯಾರು?
ನಾವು ಒಂದು ನೀರಿನ ಟ್ಯಾಂಕರ್ ಗೆ ₹1600-2000. ನೀಡಬೇಕು. ನಮಗೆ ಬೇರೆ ನೀರಿನ ಮೂಲವಿಲ್ಲ. ಕುಡಿಯಲು ಕೂಡ ನೀರಿಲ್ಲ. ಮುಂಬರುವ ಬೇಸಿಗೆಯಲ್ಲಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಮಗೆ ಕಾವೇರಿ ಸಂಪರ್ಕದ ಪೈಪ್‌ಗಳಿವೆ, ಆದರೆ ನೀರಿಲ್ಲ ಎಂದು ಬೆಂಗಳೂರು ನಿವಾಸಿಯೊಬ್ಬರು ದೂರಿದ್ದಾರೆ.
ಸರ್ಕಾರದ ಕ್ರಮಗಳೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರವು ತಾಲ್ಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುತ್ತದೆ ಮತ್ತು ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡುತ್ತದೆ ಎಂದು ಘೋಷಿಸಿದ್ದಾರೆ.
ರಾಜ್ಯದ 98 ತಾಲೂಕುಗಳಲ್ಲಿ ಕನಿಷ್ಠ 412 ಪಂಚಾಯಿತಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. 175 ಗ್ರಾಮಗಳಲ್ಲಿ 204 ನೀರಿನ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಒಟ್ಟು 3,500 ನೀರಿನ ಟ್ಯಾಂಕರ್‌ಗಳಲ್ಲಿ 219 ಟ್ಯಾಂಕರ್‌ಗಳು ಮಾತ್ರ ಅಧಿಕಾರಿಗಳಲ್ಲಿ ನೋಂದಣಿಯಾಗಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಾರ್ಚ್ 7ರ ಗಡುವಿನೊಳಗೆ ಇತರರು ನೋಂದಣಿ ಮಾಡಿಕೊಳ್ಳಬೇಕು ಇಲ್ಲದಿದ್ದರೆ ರಾಜ್ಯ ಸರ್ಕಾರ ಅವುಗಳನ್ನು ವಶಪಡಿಸಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದುವರೆಗೆ ಕಾರ್ಯನಿರ್ವಹಿಸದ ಎಲ್ಲಾ ಕುಡಿಯುವ ನೀರಿನ ಕೇಂದ್ರಗಳನ್ನು ತಕ್ಷಣ ಕಾರ್ಯಗತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೃಷಿ ಮತ್ತು ವಾಣಿಜ್ಯ ಬಳಕೆಗೆ ಬಳಕೆಯಲ್ಲಿರುವ ಎಲ್ಲಾ ಬೋರ್‌ವೆಲ್‌ಗಳನ್ನು ನೋಂದಣಿ ಮಾಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಬೆಂಗಳೂರಿನಲ್ಲಿ 3000 ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿಹೋಗಿವೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.
ಶಿವಕುಮಾರ್ ನೀರನ್ನು ಜವಾಬ್ದಾರಿಯುತವಾಗಿ ಬಳಸಬೇಕು ಮತ್ತು ತೋಟಗಳಿಗೆ ಮತ್ತು ಕಾರು ತೊಳೆಯಲು ಕುಡಿಯುವ ನೀರನ್ನು ಬಳಸದಂತೆ ಜನತೆಗೆ ಮನವಿ ಮಾಡಿದ್ದಾರೆ.












Click it and Unblock the Notifications