Water Fine: ನೀರು ದುರ್ಬಳಕೆ ಮಾಡಿದ 22 ಕುಟುಂಬಗಳಿಗೆ ಬಿತ್ತು ದಂಡ
ಬೆಂಗಳೂರು, ಮಾರ್ಚ್ 25: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದರೂ ಸಹ ಕೆಲವು ನಿವಾಸಿಗಳು ಬುದ್ಧಿ ಕಲಿತಂತಿಲ್ಲ. ನೀರಿನ ಅನಗತ್ಯ ಬಳಕೆಯನ್ನು ನಿರ್ಬಂಧಿಸಿದ್ದರೂ ಸಹ ಜಲಮಂಡಳಿ ನಿಯಮ ಉಲ್ಲಂಘಿಸಿದ ಕುಟುಂಬಗಳಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ.
ಹೌದು, ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಜಲಮಂಡಳಿಯು ಕಾರು ತೊಳೆಯುವುದು ಮತ್ತು ತೋಟಗಾರಿಕೆಯಂತಹ ಅನಿವಾರ್ಯವಲ್ಲದ ಚಟುವಟಿಕೆಗಳಿಗೆ ಕುಡಿಯುವ ನೀರನ್ನು ಬಳಸಬಾರದು ಎಂದು ಸೂಚಿಸಿತ್ತು.

ಈ ಆದೇಶದ ಹೊರತಾಗಿಯು ನಿಯಮ ಮೀರಿ ಅಗತ್ಯೇತರ ಚಟುವಟಿಕೆಗಳಿಗೆ ಕುಡಿಯುವ ನೀರು ಬಳಸಿದ್ದ ಬೆಂಗಳೂರಿನ 22 ಕುಟುಂಬಗಳಿಗೆ ಜಲಮಂಡಳಿ ಅಧಿಕಾರಿಗಳು ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ರಾಜ್ಯದಲ್ಲಿ ತೀವ್ರ ಅಭಾವವಿರುವ ನೀರಿನ ಸಂರಕ್ಷಣೆಗಾಗಿ ನೀರು ಸರಬರಾಜು ಮಂಡಳಿಯ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿ ಕುಟುಂಬದ ಮೇಲೆ ತಲಾ ₹5,000 ದಂಡ ವಿಧಿಸಿದ್ದಾರೆ.
₹ 1.1 ಲಕ್ಷ ದಂಡ ಸಂಗ್ರಹ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಇದುವರೆಗೆ ನಿಯಮ ಉಲ್ಲಂಘಿಸಿದ 22 ಮನೆಗಳಿಂದ ₹ 1.1 ಲಕ್ಷ ದಂಡ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ನಗರದ ವಿವಿಧ ಪ್ರದೇಶಗಳಲ್ಲಿ ಸೂಚನೆ ಉಲ್ಲಂಘಿಸಿ ಕಾರು ತೊಳೆಯುವುದು, ತೋಟಗಾರಿಕೆ ಬಳಕೆಯಂತಹ ನಿರ್ಲಕ್ಷ್ಯದಿಂದಾಗಿ ಜಲಮಂಡಳಿ ದಂಡ ಸಂಗ್ರಹಿಸಲಾಗಿದೆ.
ಬೆಂಗಳೂರಿನಲ್ಲಿ ದಂಡ ಸಂಗ್ರಹವಾದ ಒಟ್ಟು ಪ್ರಮಾಣದ ಪೈಕಿ ಬೆಂಗಳೂರು ದಕ್ಷಿಣ ಪ್ರದೇಶದಲ್ಲಿ ಹೆಚ್ಚು ನಿಯಮ ಉಲ್ಲಂಘನೆ ಆಗಿದೆ ಎನ್ನಲಾಗಿದೆ. ಹೀಗಾಗಿ ಈ ಭಾಗದಲ್ಲಿ ಅಧಿಕ (80,000 ರೂ) ದಂಡ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮನರಂಜನೆಗಾಗಿ ಕುಡಿಯುವ ನೀರು ಬಳಸಬೇಡಿ
ಮಾರ್ಚ್ ತಿಂಗಳ ಆರಂಭದಲ್ಲೇ ಜಲಮಂಡಳಿಯು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಮಿತವ್ಯಯ ಬಳಕೆಗೆ ಶಿಫಾರಸು ಮಾಡಿತ್ತು. ವಾಹನಗಳನ್ನು ತೊಳೆಯಲು, ನಿರ್ಮಾಣ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಕೆ ಆಗದಂತೆ ನೋಡಿಕೊಳ್ಳಬೇಕು.
ಒಂದು ವೇಳೆ ಜಲಮಂಡಳಿಯ ನಿಯಮ ಉಲ್ಲಂಘಿಸುವುದು ಕಂಡು ಬಂದಲ್ಲಿ ಅಂತವರಿಗೆ 5000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿತ್ತು. ಪ್ರತಿ ಉಲ್ಲಂಘಿಸಿದವರಿಗೆ ಹೆಚ್ಚುವರಿಯಾಗಿ ₹500 ದಂಡು ವಸೂಲಿ ಮಾಡುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು. ಹೀಗಿದ್ದರೂ ನಗರದಲ್ಲಿ ಜಲಮಂಡಳಿ ನಿಯಮ ಉಲ್ಲಂಘಿಸಿದ ಪ್ರಕರಣಗಳು ವರದಿ ಆಗಿವೆ.
ನಲ್ಲಿಗಳಿಗೆ ಏರಿಯೇಟರ್ ಬಳಸದಂತೆ ಸೂಚನೆ
ಇನ್ನೂ ಹೋಳಿ ಆಚರಣೆ ವೇಳೆ ರೈನ್ಸ್ ಡಾನ್ಸ್, ಸ್ವಿಮ್ಮಿಂಗ್ ಫೂಲ್ ನಂತಹ ಕಾರ್ಯಕ್ರಮಗಳಿಗೆ, ಪಾರ್ಟಿಗಳಿಗೆ ಬೋರ್ ವೆಲ್ ನೀರನ್ನು ಬಳಸದಂತೆ ಸೂಚಿಸಿದೆ. ನೀರಿನ ಬಳಕೆಯನ್ನು ಕಡಿಮೆ ಮಾಡಲು ಏರೇಟರ್‌ಗಳನ್ನು ಸ್ಥಾಪಿಸಲು ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಕೈಗಾರಿಕೆಗಳನ್ನು ಶಿಫಾರಸು ಮಾಡಿದೆ.












Click it and Unblock the Notifications