ಬೆಂಗಳೂರು ಮಾನ ಹರಾಜು: ಸೋಮವಾರ ಬಿಜೆಪಿ ಪ್ರತಿಭಟನೆ
ಬೆಂಗಳೂರು, ಮಾರ್ಚ್ 09: ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲದೇ ಜನರ ಪರದಾಡುತ್ತಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಕುಂಭಕರ್ಣನ ನಿದ್ರೆ ಮಾಡುತ್ತಿದೆ. ಸರ್ಕಾರದ ಆಡಳಿತ ವೈಫಲ್ ವಿರುದ್ಧ ಕರ್ನಾಟಕ ಬಿಜೆಪಿಯು ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಎಲ್ಲಿ ನೋಡಿದರೂ ಎಣ್ಣೆ ಅಂಗಡಿಗಳು ತೆರೆದಿರುತ್ತವೆ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿವೆ. ರಾಜ್ಯದಲ್ಲಿ ಬೀಯರ್ ಇದೆ, ನೀರಿಲ್ಲ ಎಂಬ ಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ ಎಂದರು.

ಬರಗಾಲದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗೆ ಇಳಿಯಲಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನು ಸರ್ಕಾರ ಹರಾಜು ಹಾಕಲಾಗಿದೆ ಎಂದು ಅವರು ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.
ಸಮಸ್ಯೆ ಮುಚ್ಚಿಡುತ್ತಿರುವ ಸರ್ಕಾರ
ರಾಜ್ಯ ಸರ್ಕಾರದಲ್ಲಿ ಹಣ ಕೊರತೆ ಇರುವುದರಿಂದಲೇ ಬರ ಘೋಷಣೆಗೆ ಮೀನ ಮೇಷ ಎಣಿಸಿದರು. ಜೊತೆಗೆ ಪರಿಹಾರ ನೀಡುವುದನ್ನು ಮುಂದೂಡಿದರು. ಹಳ್ಳಿಗಳಲ್ಲಿ ಜನರು ವಲಸೆ ಹೋಗುತ್ತಿದ್ದರೂ ಅದನ್ನು ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ಇಂತಹ ಎಲ್ಲ ಸಮಸ್ಯೆಗಳನ್ನು ಮುಚ್ಚಿಡುವ ಕೆಲಸ ಸರ್ಕಾರ ಮಾಡುತ್ತಿದೆ.
ಬೆಂಗಳೂರಿನಲ್ಲಿ ಸೃಷ್ಟಿಯಾದ ಜಲಕ್ಷಾಮ, ಇಲ್ಲಿನ ಬೇಸಿಗೆಯ ಸ್ಥಿತಿಗತಿಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲೂ ಸುದ್ದಿಗಳು ಬರುತ್ತಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಮರ್ಯಾದೆಯನ್ನು ಸರ್ಕಾರ ಹರಾಜು ಹಾಕಿದೆ. ಸರ್ಕಾರದ ಆಡಳಿತ ವೈಫಲ್ಯದಿಂದ ಇಷ್ಟೆಲ್ಲ ಆಗಿದ್ದು, ಅದರ ವಿರುದ್ಧ ನಾವು ಪ್ರತಿಭಟಿಸಲಿದ್ದೇವೆ ಎಂದು ಕಿಡಿ ಕಾರಿದರು.

ಶೇ.60 ರಷ್ಟು ಬೋರ್‌ವೆಲ್ ಖಾಲಿ
ಬೆಂಗಳೂರಿಗೆ ಐಟಿ ಸಿಟಿ, ಬಿಟಿ ಸಿಟಿ ಎಂಬ ಹೆಸರಿದ್ದು, ಎಲ್ಲ ದೇಶಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಕಾವೇರಿ ನೀರನ್ನು ಮೈತ್ರಿಕೂಟದ ಸದಸ್ಯರಾದ ತಮಿಳುನಾಡಿನ ಸಿಎಂಗೆ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಶೇ.60 ರಷ್ಟು ಬೋರ್‌ವೆಲ್ ಖಾಲಿಯಾಗಿದೆ.
ಕಾವೇರಿ ಪೂರೈಕೆಯಲ್ಲಿ ಶೇ.30 ರಷ್ಟು ನೀರನ್ನು ಕಡಿತಗೊಳಿಸಿದ್ದಾರೆ. ಡೆಡ್ ಸ್ಟೋರೇಜ್ ಹೊರತುಪಡಿಸಿ ಕಾವೇರಿಯಲ್ಲಿ 8 ಟಿಎಂಸಿ ನೀರು ಉಳಿದಿದೆ. ಬಿಸಿಲು ಹೆಚ್ಚಿರುವುದರಿಂದ ಅದು ಇನ್ನಷ್ಟು ಖಾಲಿಯಾಗಲಿದೆ. ರೈತರು ಕೃಷಿಗೆ ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ.
ಬೆಂಗಳೂರಿನಲ್ಲಿ ಲಂಗು ಲಗಾಮಿಲ್ಲದೆ ಟ್ಯಾಂಕರ್‌ಗಳು ಓಡಾಡುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆರ್.ಅಶೋಕ್ ಆರೋಪಿಸಿದರು.
ಖಾಸಗಿ ಬೋರ್‌ವೆಲ್ ಸರ್ಕಾರ ಸುಪರ್ದಿಗೆ ಆಗ್ರಹ
ಯಾವುದೇ ಖಾಸಗಿ ಬೋರ್‌ವೆಲ್‌ನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಅದನ್ನು ಮಾಡಲು ಸರ್ಕಾರಕ್ಕೆ ಮನಸ್ಸಿಲ್ಲದಿರುವುದರಿಂದ ಟ್ಯಾಂಕರ್‌ಗಳು ಕಾಳ ಸಂತೆ ಸೃಷ್ಟಿಸಿವೆ. ಕಲುಷಿತ ನೀರನ್ನು ಜನರಿಗೆ ನೀಡುತ್ತಿದ್ದರೂ ಆರೋಗ್ಯ ಇಲಾಖೆ ಏನೂ ಕ್ರಮ ಕೈಗೊಳ್ಳದೆ ಸತ್ತುಹೋಗಿದೆ. ಎಲ್ಲಿಯೂ ತಪಾಸಣೆ ಮಾಡುತ್ತಿಲ್ಲ. ಯಾವ ಬೋರ್‌ವೆಲ್‌ನಲ್ಲಿ ಎಷ್ಟು ಕಲುಷಿತ ಅಂಶ ಇದೆ ಎಂಬುದನ್ನು ತಪಾಸಣೆ ಮಾಡುತ್ತಿಲ್ಲ ಎಂದು ಅವರು ವಿವರಿಸಿದರು.
ಕಾವೇರಿಗಾಗಿ ಈಗಲೂ ಪ್ರತಿಭಟನೆ
ಜನರು ಬಿಂದಿಗೆ ಹಿಡಿದುಕೊಂಡು ರಸ್ತೆಗೆ ಬಂದಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಹೆಚ್ಚುವರಿ ನೀರನ್ನು ಪಂಪ್ ಮಾಡಬೇಕು. ಖಾಸಗಿ ಬೋರ್‌ವೆಲ್‌ಗಳನ್ನು ಬಿಬಿಎಂಪಿ ವಶಕ್ಕೆ ಪಡೆದು ಕ್ರಮ ವಹಿಸಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಒಂದು ಕಡೆ ಬಾಂಬ್ ಭೀತಿ, ಮತ್ತೊಂದು ಕಡೆ ನೀರಿನ ಆತಂಕವಿದೆ. ಬರಗಾಲದ ಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ಕಾವೇರಿ ನೀರನ್ನು ಉಳಿಸಿಕೊಳ್ಳಲು ಸರಿಯಾಗಿ ವಾದವನ್ನು ಮಾಡಿಲ್ಲ. ರೈತರು ಈಗಲೂ ಕಾವೇರಿಗಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ತಿಳಿಸಿದರು.












Click it and Unblock the Notifications