Bengaluru: ಮೇ 10ರಂದು ಮತದಾನ ಮಾಡಿ ಈ ಹೋಟೆಲ್‌ನಲ್ಲಿ ಉಚಿತ ಉಪಹಾರ, ತಂಪುಪಾನಿಯ ಸೇವಿಸಿ: ಸಿನಿಮಾ ಟಿಕೆಟ್ ಪಡೆಯಿರಿ
ಬೆಂಗಳೂರು, ಮೇ 06: ಕರ್ನಾಟಕದ ರಾಜ್ಯ ವಿಧಾನಸಭಾ ಚುನಾವಣೆ ಕಾವು ಹೆಚ್ಚುತ್ತಿರುವ ಹೊತ್ತಿನಲ್ಲಿ ಇಲ್ಲೊಂದು ಹೋಟೆಲ್ ಮತದಾನ ಮಾಡಿ ಬೆಳಲ್ಲಿನ ಶಾಹಿ ಗುರುತು ತೋರಿಸಿದವರಿಗೆ 'ಕಾಂಪ್ಲಿಮೆಂಟ್ರಿ ಬ್ರೇಕ್ ಫಾಸ್ಟ್' ನೀಡಲು ಮುಂದಾಗಿದೆ. ಮೇ 10ರಂದು ನೀವು ಸಹ ಬೆಂಗಳೂರಿನ ಈ ಹೋಟೆಲ್ ನಲ್ಲಿ ಉಚಿತವಾಗಿ ಉಪಹಾರದ ಜೊತೆಗೆ ತಂಪು ಪಾನೀಯ ಸಹ ಸವಿಯಬಹುದು. ಅಲ್ಲದೇ ಯುವ ಮತದಾರರಿಗೆ ಸಿನಿಮಾ ಟಿಕೆಟ್ ಸಹ ನೀಡಲಾಗುವುದು ಎಂದು ತಿಳಿಸಲಾಗಿದೆ.
ಹೌದು...ನಂಬಲು ಅಸಾಧ್ಯವೆನಿಸಿದರೂ ಇದು ಸತ್ಯ. ಮೇ 10 ರಂದು ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರಯುಕ್ತ ಒಂದೇ ಹಂತದಲ್ಲಿ 224 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಸಂಬಂಧ ಮತದಾನ ಉತ್ತೇಜಿಸುವ ಸಲುವಾಗಿ ಬೆಂಗಳೂರಿನ 'ಹೋಟೆಲ್ ನಿಸರ್ಗಾ ಗ್ರ್ಯಾಂಡ್' ಮತದಾರರಿಗೆ ಉಚಿತ ತಿಂಡಿ, ತಂಪು ಪಾನೀಯದ ಆಫರ್ ನೀಡಿದೆ.

ರಾಜಧಾನಿ ಬೆಂಗಳೂರಿನ ವೈಎಂಸಿಎ ಕಾಂಪೌಂಡ್, ನೃಪತುಂಗ ರಸ್ತೆಯಲ್ಲಿನ ಆರ್‌ಬಿಐ ಬಳಿ ಇರುವ 'ಹೋಟೆಲ್ ನಿಸರ್ಗಾ ಗ್ರ್ಯಾಂಡ್' ಮಾಲೀಕರು ಮತ್ತು ವ್ಯವಸ್ಥಾಪಕರು ಮತದಾರರಿಗೆ ಈ 'ಕಾಂಪ್ಲಿಮೆಂಟ್ರಿ ಬ್ರೇಕ್ ಫಾಸ್ಟ್' ನೀಡಲು ನಿರ್ಧರಿಸಿದ್ದಾರೆ. ಈ ಸಂಬಂಧ ಅವರು ದೊಡ್ಡದೊಂದು ಬ್ಯಾನರ್ ಮಾಡಿಸಿ ಬರೆದು ತಮ್ಮ ಹೋಟೆಲ್ ಮುಂಭಾಗದಲ್ಲಿ ಅಳವಡಿಸಿದ್ದಾರೆ.
ಮತದಾರರಿಗೆ ಉಚಿತವಾಗಿ ಏನೇನು ಸಿಗಲಿದೆ
ಈ ಬ್ಯಾನರ್‌ನಲ್ಲಿ 'ಕರ್ನಾಟಕ ವಿಧಾನಸಭಾ ಚುನಾವಣೆ 2023 ಹಿನ್ನೆಲೆ ಮೇ 10ರಂದು ಮತದಾನ ಮಾಡಿ ಬಂದು ಬೆರಳಲ್ಲಿನ ಶಾಹಿ ಗುರುತು ತೋರಿಸುವವರಿಗೆ ಬೆಣ್ಣೆ ದೋಸೆ, ಮೈಸೂರುಪಾಕ್ ಮತ್ತು ತಂಪು ಪಾನೀಯವನ್ನು ಮತದಾನ ಉತ್ತೇಜನಕ್ಕಾಗಿ ಉಚಿತವಾಗಿ ನೀಡಲಾಗುವುದು' ಎಂದು ತಿಳಿಸಿದೆ.
ಅಲ್ಲದೇ '100 ಹೊಸ ಯುವ ಮತದಾರರಿಗೆ ಉಚಿತವಾಗಿ ಸಿನಿಮಾವೊಂದರ ಟಿಕೆಟ್ ನೀಡಲಾಗುವುದು. ಇದು ಸಾಮಾಜಿಕ ಕಳಕಳಿ ಉಳ್ಳ ರಾಜಕೀಯೇತರ ಕಾರ್ಯಕ್ರಮವಾಗಿದೆ. ಮತದಾನ ನಮ್ಮ ಹಕ್ಕು ಚಲಾಯಿಸಿ-ಸಮೃದ್ಧ ಭಾರತ ನಿರ್ಮಿಸಿ' ಎಂದು ತಿಳಿಸಿದೆ. ತಮ್ಮ ಹೋಟೆಲ್‌ಗೆ ಆಗಮಿಸುವಂತೆ ಸರ್ವರನ್ನು ಸ್ವಾಗತಿಸಿ ಬ್ಯಾನರ್ ಹಾಕಿದೆ.

ಮುಂದಿನ ಐದು ವರ್ಷಗಳ ರಾಜ್ಯ ಭವಿಷ್ಯಕ್ಕಾಗಿ ಮತದಾನದ ಮಹತ್ವ ಕುರಿತು ಹಾಗೂ ಮತದಾನವನ್ನು ತನ್ನದೇ ಆದ ವಿಶೇಷ ರೀತಿಯಲ್ಲಿ ಉತ್ತೇಜಿಸುತ್ತಿರುವ ಈ ನಿಸರ್ಗಾ ಗ್ರ್ಯಾಂಡ್ ಹೋಟೆಲ್‌ಗೆ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ಹರಿದು ಬರುತ್ತಿದೆ.












Click it and Unblock the Notifications