ವೆಂಟಿಲೇಟರ್ ಸಮಸ್ಯೆ : ಬದುಕಿ ಬರಲಿಲ್ಲ ಆಕಾಶ್, ಆನಂದ್
ಬೆಂಗಳೂರು, ಡಿ.13 : ವೆಂಟಿಲೇಟರ್ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದ ಇಬ್ಬರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಮೂರೂವರೆ ವರ್ಷದ ಮಗು ಆಕಾಶ್‌ಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಮೃತಪಟ್ಟರೆ, ಮೂರ್ಛೆ ರೋಗದಿಂದ ಬಳಲುತ್ತಿದ್ದ ಆನಂದ್ (8) ಸಂಜೆ ಮೃತಪಟ್ಟಿದ್ದಾನೆ. ವೆಂಟಿಲೇಟರ್ ಇಲ್ಲ ಎಂಬ ಕಾರಣಕ್ಕೆ ಇಬ್ಬರು ಮಕ್ಕಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಲಾಗಿತ್ತು. [ವೆಂಟಿಲೇಟರ್ ಸಮಸ್ಯೆ, ಮಕ್ಕಳ ಪರದಾಟ]

ಬೆಂಗಳೂರಿನ ನಿಮ್ಹಾನ್ಸ್, ಇಂದಿರಾ ಗಾಂಧಿ, ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು ಮಂಗಳವಾರ ರಾತ್ರಿ ಮಕ್ಕಳನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಆಂಬ್ಯುಲೆನ್ಸ್‌ನಲ್ಲಿ ಅಲೆದಾಡಿಸಿದ್ದರು. ಮಾಧ್ಯಮಗಳು ಮಧ್ಯ ಪ್ರವೇಶಿಸಿದ ನಂತರ ವಾಣಿ ವಿಲಾಸ ಆಸ್ಪತ್ರೆಯವರು ಮಗುವನ್ನು ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಿದ್ದರು.
ಆರೋಗ್ಯ ಸಚಿವರ ಭೇಟಿ : ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಶುಕ್ರವಾರ ರಾತ್ರಿ ವಾಣಿವಿಲಾಸ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯ ಅಧಿಕ್ಷಕ ಡಾ. ಗಂಗಾಧರ್ ಬಿ. ಬೆಳವಾಡಿ ಜೊತೆ ಚರ್ಚಿಸಿದ ಸಚಿವರು ಆಸ್ಪತ್ರೆಯಲ್ಲಿರುವ ಬೆಡ್, ಐಸಿಯು ಹಾಗೂ ವೆಂಟಿಲೇಟರ್ ಬಗ್ಗೆ ಮಾಹಿತಿ ಪಡೆದರು.
ಆಸ್ಪತ್ರೆಯಲ್ಲಿ ವೆಂಟಿಲೇಟರ್ ಲಭ್ಯವಿತ್ತೋ ಇಲ್ಲವೋ? ಎಂಬುದರ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಲು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಜೊತೆ ಚರ್ಚಿಸಿರುವುದಾಗಿ ತಿಳಿಸಿದ ಖಾದರ್, ಸಮಿತಿಯ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.












Click it and Unblock the Notifications