ಟನಲ್ ರಸ್ತೆ ಯೋಜನೆ ಬೆಂಗಳೂರು ಟ್ರಾಫಿಕ್‌ಗೆ ಔಷಧನಾ, ಹೊಸ ತಲೆನೋವಾ?: ಡಿಕೆಶಿಗೆ ನಾಗರಿಕರ ಪ್ರಶ್ನೆ
ಬೆಂಗಳೂರು: ಸಂಚಾರ ದಟ್ಟಣೆಗೆ ಕುಖ್ಯಾತಿ ಪಡೆದ ಬೆಂಗಳೂರಿನಲ್ಲಿ ವಾಹನ ಸವಾರರು ಭಯಪಟ್ಟುಕೊಂಡೆ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಸರ್ಕಾರ ನಗರದ ಹಾಲಿ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸುವ ಬದಲು, ಜನರು ವಿರೋಧಿಸುತ್ತಿರುವ ಹೊಸ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ಶೋಚನೀಯ ಸ್ಥಿತಿಯಲ್ಲಿರುವ ನಗರದ ರಸ್ತೆಗಳು ದುರಸ್ತಿ ಎದುರು ನೊಡುತ್ತಿವೆ. ಮಳೆಗಾಲದಲ್ಲಿ ಸಂಚಾರ ಹೇಗೆ ಎಂಬ ಚಿಂತೆ ಕಾಡುತ್ತಿದ್ದು, ಸುಗಮ ಸಂಚಾರಕ್ಕೆ ಸರ್ಕಾರ ಅಭಯ ನೀಡಬೇಕೆಂದು ವಾಹನ ಸವಾರರು, ಪ್ರಯಾಣಿಕರಿಗೆ ಒತ್ತಾಯಿಸಿದ್ದಾರೆ.
ಬೆಂಗಳೂರಿನ ರಸ್ತೆಗಳ ಸ್ಥಿತಿ ಈಗ ಶೋಚನೀಯವಾಗಿದೆ. ಅದರಲ್ಲೂ ಮಳೆ ಬಂದರೆ ವಾಹನ ಸವಾರರು ಜೀವ ಭಯದಲ್ಲೇ ಓಡಾಡಬೇಕಿದೆ. ಈ ಸಮಸ್ಯೆಗಳ ನಡುವೆ ಹೊಸ ಯೋಜನೆ ಚರ್ಚೆಗೆ ಬಂದಿದೆ. ಪರಿಸರವಾದಿಗಳ ವಿರೋಧದ ನಡುವೆಯು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ಬರೋಬ್ಬರಿ 17 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಬಗ್ಗೆ ಟೆಂಡರ್ ಕರೆದಿದ್ದು, ಅದನ್ನು ಖಾಸಗಿ ಕಂಪನಿಗೆ ನೀಡಿ ಫೈನಲ್ ಮಾಡಲಾಗಿದೆ. ಡಿಕೆಶಿ ಅವರು ಸಿಎಂ ಆದ ಬೆನ್ನಲ್ಲೆ ಯೋಜನೆಗೆ ವೇಗ ದೊರೆತಿದೆ.

17,000 ಕೋಟಿ ರೂ ಯೋಜನೆಗೆ ಆಕ್ಷೇಪ
ಯೋಜನೆಗೆ ಆರಂಭಿಕ ಹಂತದಲ್ಲಿ 17,000 ಕೋಟಿ ರೂಪಾಯಿ ಒದಗಿಸಲಾಗುತ್ತದೆ. ಯೋಜನೆ ಸಂಪೂರ್ಣವಾಗಿ ಜಾರಿಯಾಗುವ ಹೊತ್ತಿಗೆ 18,000 ರಿಂದ 40,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ನಗರದ ಕೆರೆಗಳ ಅಂತರ್ಜಲ, ಸಸ್ಯ ಕಾಶಿ ಲಾಲ್ ಬಾಗ್ ಉದ್ಯಾನಕ್ಕೆ ಆಪತ್ತು ಉಂಟಾಗಬಹುದು. ಇಂತಹ ಕೆಲವು ಕಾರಣಗಳಿಂದ ಈ ಯೋಜನೆಗೆ ಪರಿಸರವಾದಿಗಳು, ತಜ್ಞರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೆ ನಗರ ವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಾಲಿ ರಸ್ತೆಗಳು, ರಸ್ತೆ ಗುಂಡಿಗಳು, ಕೈಗೆತ್ತಿಕೊಂಡ ಅನೇಕ ಮೂಲಸೌಕರ್ಯ ಯೋಜನೆಗಳು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಈ ಮಧ್ಯೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಹೊಸ ಯೋಜನೆ ಜಾರಿ ಅನಗತ್ಯ ಎಂದು ನೂತನ ಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಜನ ಕಿಡಿ ಕಾರಿದ್ದಾರೆ.
ಸುರಂಗ ಮಾರ್ಗಕ್ಕೆ ಟೆಂಡರ್ ಅಂತಿಮವಾಗುತ್ತಿದ್ದಂತೆ ಪರಿಸರವಾದಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕ ವಿರೋಧವಿದ್ದ ಯೋಜನೆಗಳನ್ನು ರದ್ದುಪಡಿಸಿದ್ದರು. ಆದರೆ ಡಿಕೆ ಶಿವಕುಮಾರ್ ವಾಣಿಜ್ಯ ಮತ್ತು ಆಧುನಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ದಶಕದಿಂದ ಪೂರ್ಣಗೊಳ್ಳದ ಈಜೀಪುರ ಮೇಲ್ಸೇತುವೆ
ರಾಜ್ಯ ಸರ್ಕಾರದ ಈ ಹಿಂದಿನ ಯೋಜನೆಗಳು ವಿಫಲವಾಗಿವೆ. ಹೆಬ್ಬಾಳ ಮತ್ತು ಕೆ.ಆರ್. ಸರ್ಕಲ್ ಮೇಲ್ಸೇತುವೆಗಳು ಇನ್ನೂ ಸಮಸ್ಯೆಯಾಗಿಯೇ ಉಳಿದಿವೆ. ಈಜೀಪುರ ಮೇಲ್ಸೇತುವೆ ಕಾಮಗಾರಿ ಕಳೆದೊಂದು ದಶಕದಿಂದ ನಡೆಯುತ್ತಲೇ ಇತ್ತು. ಇನ್ನೂ ಪೂರ್ಣಗೊಳಿಸಲು ಸರ್ಕಾರದ ಕೈಲಿ ಆಗಿಲ್ಲ. ಮೆಟ್ರೋ ಯೋಜನೆಗಳು, ಹೊಸ ಮಾರ್ಗ ಲೋಕಾರ್ಪಣೆಗಳು ಸಹ ವಿಳಂಬವಾಗುತ್ತಿವೆ. ಒಟ್ಟಾರೆ ವಾಹನ ಸವಾರರು ಇದೆಲ್ಲ ಕಾರಣಗಳಿಂದ ಪರಿತಪಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಹಾಲಿ ಸಮಸ್ಯೆಗಳನ್ನು ಬಗೆಹರಿಸದೇ ಹೊಸ ಯೋಜನೆಗಳಿಗೆ ಕೈ ಹಾಕುವುದು ಸರಿಯಲ್ಲ. ಸಾವಿರಾರು ಕೋಟಿ ವೆಚ್ಚದ ಯೋಜನೆಗಳನ್ನು ಕೈಗೊಂಡು ಅದು ಅರ್ಧಕ್ಕೆ ಹಳ್ಳ ಹಿಡಿದರೆ ಕಥೆ ಏನು? ನಮ್ಮ ತೆರಿಗೆ ದುಡ್ಡು ನಿರುಪಯುಕ್ತವಾಗುತ್ತದೆ. ಸಮಸ್ಯೆಗಳಲ್ಲಿ ಬೇಯುವುದೂ ತಪ್ಪುವುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬಿಡದಿಯಲ್ಲಿ ಹೊಸ ಟೌನ್‌ಶಿಪ್ ಗೆ ವಿರೋಧ
ಬಿದದಿಯ ಫಲವತ್ತಾದ ಭೂಮಿಯಲ್ಲಿ ಹೊಸ ಟೌನ್‌ಶಿಪ್ ನಿರ್ಮಾಣಕ್ಕೂ ಸರ್ಕಾರ ಕೈ ಹಾಕಿದೆ. ಯೋಜನೆಯ ಆರಂಭಿಕ ಕೆಲಸಗಳಿಗೆ ಕೈ ಹಾಕುತ್ತಿದ್ದಂತೆ ಸ್ಥಳೀಯ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ಸಹ ಮಾಡುತ್ತಿದ್ದಾರೆ. ರೈತರಿಗೆ ಆಧಾರವಾಗಿರುವ ಫಲವತ್ತಾದ ಭೂಮಿಯಲ್ಲಿ ಯೋಜನೆ ಅನುಷ್ಠಾನ ಬೇಡ ಎಂದು ಆಗ್ರಹಿಸುತ್ತಿದ್ದಾರೆ. ಸರ್ಕಾರ ಇದಕ್ಕೆ ಖ್ಯಾರೆ ಎಂದಿಲ್ಲ, ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಈ ಮೂಲಕ ಸರ್ಕಾರ ಸಾರ್ವಜನಿಕರ ವಿರೋಧದ ನಡುವೆಯೂ ಯೋಜನೆ ಮುಂದುವರಿಸಲು ಪಣತೊಟ್ಟಂತೆ ಕಾಣುತ್ತಿದೆ ಅಂತಲೂ ಸಾರ್ವಜನಿಕರು ಸರ್ಕಾರದ ನಡೆ ಖಂಡಿಸುತ್ತಿದ್ದಾರೆ
ರಸ್ತೆಗಳ ಅಭಿವೃದ್ಧಿಗೆ 2,000 ಕೋಟಿ ರೂ
ಬೆಂಗಳೂರು ರಸ್ತೆಗಳ ಅಭಿವೃದ್ಧಿಗೆಂದು ಸರ್ಕಾರ 2,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಆದರೆ ಯಾವೊಂದು ಮೂಲ ಸಮಸ್ಯೆಗಳು ಪರಿಹಾರವಾಗದೇ ಹಾಗೆಯೇ ಉಳಿದಿವೆ. ಚೆನ್ನೈನ ರಸ್ತೆಗಳೊಂದಿಗೆ ಹೋಲಿಸಿದರೆ ಬೆಂಗಳೂರಿನ ರಸ್ತೆಗಳು ಕಳಪೆಯಾಗಿವೆ. ಮೂಲ ಸೌಕರ್ಯಗಳು ಯಾವಾಗ ಸುಧಾರಣೆಯಾಗುತ್ತವೆ ಎಂಬುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಜನರು ಅಕ್ಕಪಕ್ಕದ ಹೈದರಾಬಾದ್, ಚೆನ್ನೈ ನಗರಗಳಿಗೆ ಹೋಲಿಕೆ ಮಾಡಿ ಬೆಂಗಳೂರಿನ ಬಗ್ಗೆ ಅಸಮಾಧನ ಹೊರ ಹಾಕುತ್ತಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಖಾತೆ ನಿರ್ವಹಿಸಿದ್ದ ಡಿಕೆ ಶಿವಕುಮಾರ್ ಅವರು ಇದೀಗ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಸಿಎಂ ಆಗಿರುವ ಅವರಿಗೆ ಬೆಂಗಳೂರಿನ ಸಮಸ್ಯೆಗಳು ಕಾಣುತ್ತಿಲ್ಲವೇ. ಹಾಲಿ ಸಮಸ್ಯೆಗಳಿಗೆ ಮುಕ್ತಿ ಸಿಗುವುದು ಯಾವಾಗ ಎಂದು ಜನ ಆಗ್ರಹಿಸುತ್ತಿದ್ದಾರೆ.













Click it and Unblock the Notifications