Bengaluru Traffic: ವಾಹನ ಸವಾರರ ಅನುಕೂಲಕ್ಕಾಗಿ ವೆಬ್‌ಸೈಟ್ ಆರಂಭ; ಮಾಹಿತಿ, ವಿವರ
ಬೆಂಗಳೂರು ವಾಹನ ಸವಾರರ ಅನುಕೂಲಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ವೆಬ್‌ಸೈಟ್ ಆರಂಭಿಸಿದೆ. ಮೊದಲಿದ್ದ ವೆಬ್‌ಸೈಟ್ ಅನ್ನೇ ಮರುವಿನ್ಯಾಸಗೊಳಿಸಿದ್ದು, ಟ್ರಾಫಿಕ್ ಸಂಬಂಧಿತ ಸೇವೆಗಳಿಗಾಗಿ ನಾಗರಿಕರು ಸುಲಭವಾಗಿ ಬಳಸುವಂತೆ ವಿನ್ಯಾಸ ಮಾಡಲಾಗಿದೆ. ಮರುವಿನ್ಯಾಸಗೊಳಿಸಿದ ವೆಬ್‌ಸೈಟ್ ಅನ್ನು ಶುಕ್ರವಾರ ಅಧಿಕೃತವಾಗಿ ಆರಂಭಿಸಲಾಗಿದೆ.
https://btp.karnataka.gov.in ವೆಬ್‌ಸೈಟ್‌ನಲ್ಲಿ ಹಲವು ಆಯ್ಕೆಗಳನ್ನು ನೀಡಲಾಗಿದ್ದು, ಬೆಂಗಳೂರಿನ ವಾಹನ ಸವಾರರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ನ್ಯಾವಿಗೇಷನ್, ಇಂಟರ್ಫೇಸ್, ಟ್ರಾಫಿಕ್ ನಿರ್ವಹಣೆ ಮತ್ತು ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮಾಡಲು ಕೂಡ ಇದರಲ್ಲಿ ಅವಕಾಶ ನೀಡಲಾಗಿದೆ.

ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರದಿಂದ ಅಭಿವೃದ್ಧಿಪಡಿಸಲಾಗಿದೆ. ಹಳೆಯ ವೆಬ್‌ಸೈಟ್ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದ್ದು, ಸುಲಭ ಮತ್ತು ಸುಗಮ ಡಿಜಿಟಲ್ ಅನುಭವ ನೀಡುವಂತೆ ಮರುವಿನ್ಯಾಸ ಮಾಡಲಾಗಿದೆ.
ಹೊಸ ವೆಬ್‌ಸೈಟ್‌ನಲ್ಲಿ ಏನೆಲ್ಲಾ ಇದೆ?
ಟ್ರಾಫಿಕ್ ಪೊಲೀಸ್ ಇಲಾಖೆ ಪ್ರಕಾರ, ಹೊಸ ವೈಬ್‌ಸೈಟ್‌ನಲ್ಲಿ ಮೂರು ಪ್ರಮುಖ ವಿಭಾಗಗಳಿವೆ. ಟ್ರಾಫಿಕ್ ಮ್ಯಾನೇಜ್‌ಮೆಂಟ್, ಎನ್‌ಫೋರ್ಸ್‌ಮೆಂಟ್ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುತ್ತದೆ. ನಗರದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು, ಟ್ರಾಫಿಕ್ ಬಗ್ಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲು ವೆಬ್‌ಸೈಟ್ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
"ವೆಬ್‌ಸೈಟ್‌ನಲ್ಲಿ ಬಳಕೆದಾರರು ಸಂಚಾರ ನಿಯಮ ಉಲ್ಲಂಘನೆಗಳನ್ನು ವರದಿ ಮಾಡಲು, ದೂರು ನೋಂದಾಯಿಸಲು ಮತ್ತು ಸಲಹೆಗಳನ್ನು ನೀಡಲು ಅವಕಾಶ ಮಾಡಿಕೊಂಡಲಾಗಿದೆ. ವೆಬ್‌ಸೈಟ್ ಮೂಲಕ ಸಂಚಾರ ನಿಯಮ ಉಲ್ಲಂಘನೆ ದಂಡಗಳನ್ನು ಕೂಡ ಪಾವತಿ ಮಾಡಬಹುದು. ಅಥವಾ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡದ ಬಗ್ಗೆ ಸವಾರರಿಗೆ ಆಕ್ಷೇಪಣೆ ಇದ್ದರೆ ಅದರ ಬಗ್ಗೆ ಕೂಡ ದೂರು ನೀಡಬಹುದು."
ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ಎಲ್ಲೆಲ್ಲಿ ರಸ್ತೆಗಳನ್ನು ಮುಚ್ಚಲಾಗಿದೆ ಎನ್ನುವ ಮಾಹಿತಿಯನ್ನು ಅಪ್‌ಡೇಟ್ ಮಾಡುವುದರಿಂದ ನಗರದ ಸಂಚಾರ ದಟ್ಟಣೆ ಬಗ್ಗೆ ವಾಹನ ಸವಾರರು ಮಾಹಿತಿ ಪಡೆಯಬಹುದು ಎಂದು ನಗರದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ ಎನ್ ಅನುಚೇತ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ನ್ಯಾವಿಗೇಟ್ ಬೆಂಗಳೂರು
ನ್ಯಾವಿಗೇಟ್ ಬೆಂಗಳೂರು ಎನ್ನುವ ಆಯ್ಕೆ ನೀಡಲಾಗಿದ್ದು ನಗರದಲ್ಲಿ ಯಾವ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಾಗಿದೆ. ಎಲ್ಲೆಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಯಾವ ರಸ್ತೆಯಲ್ಲಿ ವಾಹನ ಕೆಟ್ಟು ನಿಂತಿದೆ. ಯಾವ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ, ಯಾವ ರಸ್ತೆಗಳು ಸಂಚರಿಸಲು ಕೆಟ್ಟದಾಗಿವೆ ಎನ್ನುವ ಮಾಹಿತಿಯನ್ನು ಪಡೆಯಬಹುದಾಗಿದೆ. ಇದನ್ನು ಅನುಸಾರ ವಾಹನ ಸವಾರರು ಮಾರ್ಗವನ್ನು ನಿರ್ಧರಿಸಬಹುದಾಗಿದೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಗುಂಡಿ ಬಿದ್ದಿರುವ ರಸ್ತೆಗಳು, ಸಮಯಕ್ಕೆ ಸರಿಯಾಗಿ ಮುಗಿಯದ ರಸ್ತೆ ಕೆಲಸಗಳು, ಮಳೆಗಾಲದಲ್ಲಿ ತುಂಬಿ ಹರಿಯುವ ರಸ್ತೆಗಳು ಸಂಚಾರಿ ಪೊಲೀಸರಿಗೆ ದೊಡ್ಡ ಸವಾಲಾಗಿದೆ.












Click it and Unblock the Notifications