ಬೆಂಗಳೂರಿನಲ್ಲಿ ನಾನ್-KA ನೋಂದಣಿ ವಾಹನಗಳ ಸಂಖ್ಯೆ ಹೆಚ್ಚಳ; ರೂಲ್ಸ್ ವೈಲೇಷನ್, ಕ್ರಮಕ್ಕೆ ಹೆಚ್ಚಿದ ಒತ್ತಾಯ
ಬೆಂಗಳೂರು: ರಾಜಧಾನಿ ಬೆಂಗಳೂರು ಎಲ್ಲ ಭಾಷಿಗರಿಗೆ ಅನ್ನ ಹಾಕುತ್ತಿರುವ ಮಹಾನಗರ. ಆದರೆ ಇಲ್ಲಿಗೆ ಉದ್ಯೋಗವರಸಿ ಬರುವ ಅನ್ಯ ರಾಜ್ಯದವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹೊರ ರಾಜ್ಯಗಳ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದಲ್ಲದೇ, ಅವರಿಂದ ಸಂಚಾರ ನಿಯಮಗಳು ಉಲ್ಲಂಘನೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು, ಅಗತ್ಯ ಮಾರ್ಗಸೂಚಿ ಹೊರಡಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಹೊರರಾಜ್ಯದ ವಾಹನ ಸವಾರರ ಹಾವಳಿ, ನಿಯಮ ಪಾಲನೆ ಕುರಿತು 'ರಾಷ್ಟ್ರೀಯ ಸಾಮಾಜಿಕ ನ್ಯಾಯ ದಳ' ಅಸಮಾಧಾನ ಹೊರ ಹಾಕಿದೆ. ಬೆಂಗಳೂರಿನ ಹೊರರಾಜ್ಯಗಳ ವಾಹನಗಳಲ್ಲಿ ಹೆಚ್ಚಾಗಿ ದ್ವಿಚಕ್ರ ವಾಹನಗಳಿವೆ. ಸ್ಟಿಗ್ಗಿ, ಜೊಮ್ಯಾಟೊ, ಬ್ಲಿಂಕಿಟ್ ಮುಂತಾದ ಡೆಲಿವರಿ ಸಂಸ್ಥೆಗಳಲ್ಲಿ ಆರ್.ಟಿ.ಒ ನಿಯಮಗಳನ್ನು ಉಲ್ಲಂಘಿಸಿ ಇವುಗಳನ್ನು ಬಳಸುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಮುಖ್ಯಮಂತ್ರಿಗಳಿಗೆ ನ್ಯಾಯದಳ ರಾಜ್ಯಾಧ್ಯಕ್ಷ ಸ್ಕಂದಶರತ್ .ಆರ್. ಅವರು ಪತ್ರ ಬರೆದು ತಿಳಿಸಿದ್ದಾರೆ.

ಹೊರರಾಜ್ಯಗಳ ನೋಂದಣಿ (Non-KA Registration) ಹೊಂದಿರುವ ದ್ವಿಚಕ್ರ ವಾಹನಗಳ ಸಂಖ್ಯೆ ಮಿತಿಮೀರಿ ಹೆಚ್ಚಾಗುತ್ತಿರುವುದರ ಕಡೆಗೆ ತಮ್ಮ ಗಮನಹರಿಸಬೇಕು. ವಿಶೇಷವಾಗಿ ಸ್ವಿಗ್ಗಿ, ಜೊಮ್ಯಾಟೊ, ಬ್ಲಿಂಕಿಟ್ ಮತ್ತು ಜೆಪ್ಪೋ ಮುಂತಾದ ಇ-ಕಾಮರ್ಸ್ ಹಾಗೂ ಆಹಾರ ವಿತರಣಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೂರಾರು ಸವಾರರು ಹೊರರಾಜ್ಯದ ನೋಂದಣಿ ಸಂಖ್ಯೆಯುಳ್ಳ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಮುಕ್ತವಾಗಿ ಬಳಸುತ್ತಿದ್ದಾರೆ. ಇದು ಪ್ರಸ್ತುತ ಚಾಲ್ತಿಯಲ್ಲಿರುವ ಸಾರಿಗೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದ ಒಂದಷ್ಟು ಸಮಸ್ಯೆಗಳು ಎದುರಾಗುತ್ತಿವೆ.
ಆರ್.ಟಿ.ಒ ನಿಯಮಗಳ ಉಲ್ಲಂಘನೆ
ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 47ರ ಉಲ್ಲಂಘನೆ:
ನ್ಯಾಯ ದಳ ಪ್ರಕಾರ, 'ಕೇಂದ್ರ ಮೋಟಾರು ವಾಹನ ಕಾಯ್ದೆಯ ಅನ್ವಯ, ಹೊರ ರಾಜ್ಯದ ವಾಹನವನ್ನು ಮತ್ತೊಂದು ರಾಜ್ಯದಲ್ಲಿ ಸತತವಾಗಿ 12 ತಿಂಗಳಿಗಿಂತ ಹೆಚ್ಚು ಕಾಲ ಬಳಸಬೇಕಾದರೆ, ಸ್ಥಳೀಯ ಆರ್.ಟಿ.ಒ ಕಚೇರಿಯಲ್ಲಿ ಮರು-ನೋಂದಣಿ ಮಾಡಿಸಬೇಕು. ಹೊಸ ನೋಂದಣಿ ಸಂಖ್ಯೆ ಪಡೆಯುಉವುದ ಕಡ್ಡಾಯವಾಗಿದೆ. ಆದರೆ ಬೆಂಗಳೂರಿನಲ್ಲಿರುವ ಹೊರ ರಾಜ್ಯಗಳ ವಾಹನಗಳ ಮಾಲೀಕರು ಇದೆಲ್ಲ ಪಾಲಿಸುತ್ತಿಲ್ಲ. ಹೀಗಾಗಿ ಅನಧಿಕೃತ ಓಡಾಟ ಹೆಚ್ಚಾಗಿದ್ದು, ಅಪಘಾತವಾದಾಗ ಸಮಸ್ಯೆ ಆಗುತ್ತದೆ.
* ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯ ಉಲ್ಲಂಘನೆ- ರಾಜಸ್ವ ನಷ್ಟ
ಇತರ ರಾಜ್ಯಗಳ ವಾಹನಗಳು ಕರ್ನಾಟಕದಲ್ಲಿ ಜೀವಿತಾವಧಿ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಈ ಡೆಲಿವರಿ ವಾಹನಗಳು ಯಾವುದೇ ತೆರಿಗೆ ಪಾವತಿಸದೆ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಆಗುತ್ತಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟವಾಗುತ್ತದೆ.
* ವಾಣಿಜ್ಯ ಪರವಾನಗಿ ನಿಯಮಗಳ ಉಲ್ಲಂಘನೆ:
ಸರಕು ಸಾಗಣೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಬಳಸುವ ವಾಹನಗಳು ಆರ್.ಟಿ.ಒ ನಿಯಮಾವಳಿಗಳ ಪ್ರಕಾರ ವಾಣಿಜ್ಯ ನೋಂದಣಿ, ಕಮರ್ಷಿಯಲ್ ಇನ್ಸೂರೆನ್ಸ್ ಹೊಂದಿರಬೇಕು. ಆದರೆ, ಈ ಸಂಸ್ಥೆಗಳಲ್ಲಿ ವೈಯಕ್ತಿಕ ಬಳಕೆಯ ಹೊರರಾಜ್ಯದ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಕಾನೂನುಬಾಹಿರವಾಗಿ ಬಳಸಲಾಗುತ್ತಿದೆ.
* ಸಂಚಾರ ನಿಯಮ ಉಲ್ಲಂಘನೆ ಪತ್ತೆ, ಭದ್ರತಾ ಸಮಸ್ಯೆ:
ಹೀಗೆ ನಿಯಮ ಮೀರಿದ ಹೊರ ರಾಜ್ಯದ ವಾಹನಗಳು ಸಂಚಾರ ನಿಯಮ ಉಲ್ಲಂಘಿಸಿದಾಗ ಅಥವಾ ಅಪಘಾತ ಎಸಗಿ ಪರಾರಿಯಾದಾಗ, ಹೊರರಾಜ್ಯದ ಡೇಟಾಬೇಸ್ ಇರುವುದರಿಂದ ಬೆಂಗಳೂರು ಸಂಚಾರಿ ಪೊಲೀಸರಿಗೆ ಸ್ವಯಂಚಾಲಿತ ಇ-ಚಲನ್ ಕಳುಹಿಸಲು ಅಥವಾ ವಾಹನದ ಅಸಲಿ ಮಾಲೀಕರನ್ನು ಪತ್ತೆಹಚ್ಚಲು ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಸರ್ಕಾರದ ಆರ್ ಟಿಸಿ, ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿ ತಂಡವಾಗಿ ವಿವಿಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕೊಂಡರು.
ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು?
ವಿಶೇಷ ಜಂಟಿ ಕಾರ್ಯಾಚರಣೆ: ಬೆಂಗಳೂರಿನಾದ್ಯಂತ ಆರ್.ಟಿ.ಒ ಮತ್ತು ಸಂಚಾರ
ಆರಕ್ಷಕರು ಜಂಟಿಯಾಗಿ ಹೊರರಾಜ್ಯಗಳ ದ್ವಿಚಕ್ರ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿ, ನಿಯಮ ಉಲ್ಲಂಘಿಸಿದ ವಾಹನಗಳನ್ನು ವಶಪಡಿಸಿಕೊಳ್ಳಬೇಕು.
ಡೆಲಿವರಿ ಕಂಪನಿಗಳಿಗೆ ಕಡ್ಡಾಯ ಮಾರ್ಗಸೂಚಿ:
ಸ್ವಿಗ್ಗಿ, ಜೊಮ್ಯಾಟೊ, ಬ್ಲಿಂಕಿಟ್ ಮುಂತಾದ ಸಂಸ್ಥೆಗಳು ತಮ್ಮ ಆಪ್‌ಗಳಲ್ಲಿ ಸವಾರರನ್ನು ನೋಂದಾಯಿಸಿಕೊಳ್ಳುವಾಗ ಕಡ್ಡಾಯವಾಗಿ ಸ್ಥಳೀಯ (KA) ನೋಂದಣಿ ವಾಹನಗಳನ್ನು ಅಥವಾ ನಿಯಮಾನುಸಾರ ಕರ್ನಾಟಕದಲ್ಲಿ ತೆರಿಗೆ ಪಾವತಿಸಿ ಆರ್.ಟಿ.ಒ ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆದಿರುವ ದಾಖಲೆಗಳನ್ನು ಪರಿಶೀಲಿಸುವುದನ್ನು ಕಡ್ಡಾಯಗೊಳಿಸಬೇಕು.
ಸಂಸ್ಥೆಗಳ ಮೇಲೆ ದಂಡನೆ:
ಕಾನೂನುಬಾಹಿರವಾಗಿ ಹೊರರಾಜ್ಯಗಳ ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಡೆಲಿವರಿ ಆಪ್ ಆಧಾರಿತ ಕಂಪನಿಗಳ ವಿರುದ್ಧವೂ ಸಹ ಆರ್.ಟಿ.ಒ ನಿಯಮಾವಳಿಗಳ ಅಡಿಯಲ್ಲಿ ಭಾರಿ ದಂಡ, ಕಾನೂನು ಕ್ರಮ ಜರುಗಿಸಬೇಕು.
ಇನ್ನೂ ಕಾನೂನುಬಾಹಿರವಾಗಿ ಹೊರರಾಜ್ಯಗಳ ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಡೆಲಿವರಿ ಆಪ್ ಆಧಾರಿತ ಕಂಪನಿಗಳ ವಿರುದ್ಧವೂ ಸಹ ಆರ್.ಟಿ.ಒ ನಿಯಮಾವಳಿಗಳ ಅಡಿಯಲ್ಲಿ ಭಾರಿ ದಂಡ ಕ್ರಮ ಜರುಗಿಸಬೇಕು. ಇದರಿಂದ ನಗರದಲ್ಲಿ ಭದ್ರತೆ, ಸಂಚಾರ ಸುರಕ್ಷತೆ ಹೆಚ್ಚಾಗಲಿದೆ ಎಂದು ಅವರು ಆಗ್ರಹಿಸಿದ್ದಾರೆ.


Click it and Unblock the Notifications
