ಬೆಂಗಳೂರಿಗರಿಗೆ ಟ್ರಾಫಿಕ್ ಶಾಪ, ವರ್ಷಕ್ಕೆ 7 ಲಕ್ಷ ಗಂಟೆ ವ್ಯರ್ಥ: ಆರ್ಥಿಕ ಸಮೀಕ್ಷೆಯಲ್ಲಿ ನಗರ ನರಕದ ಉಲ್ಲೇಖ
ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಜನ ಹೈರಾಣಾಗಿದ್ದು, ನಿತ್ಯವೂ ವಾಹನ ಸವಾರರು ಪರದಾಡುವ ಪರಿಸ್ಥಿತಿ ಇದೆ. ಇದೀಗ ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಮತ್ತೊಂದು ಆಘಾತಕಾರಿ ವರದಿ ಬಂದಿದೆ.
ಕೇಂದ್ರ ಸರ್ಕಾರವು ಮಂಡಿಸಿರುವ ಆರ್ಥಿಕ ಸಮೀಕ್ಷೆಯಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ವಿಶೇಷ ಉಲ್ಲೇಖ ಮಾಡಲಾಗಿದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಮೂಲಸೌಕರ್ಯ ಕೊರತೆ ಹಾಗೂ ಜನಸಂಖ್ಯೆ ಹೆಚ್ಚಳವೂ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿದ್ದು, ಇದು ಉತ್ಪಾದಕತೆ, ಆರ್ಥಿಕ ಬೆಳವಣಿಗೆ ಹಾಗೂ ನಾಗರಿಕರ ಜೀವನಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖ ಮಾಡಲಾಗಿದೆ. ಈಚೆಗೆ ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿತ್ತು. ನೆದರ್ಲೆಂಡ್ಸ್ ಮೂಲದ ಟಾಮ್‌ಟಾಮ್ ಎನ್ನುವ ಸಂಸ್ಥೆಯು ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ (Traffic Index) ವರದಿಯಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಉಲ್ಲೇಖ ಮಾಡಲಾಗಿತ್ತು.

ಇದೀಗ ಕೇಂದ್ರ ಸರ್ಕಾರವು ಮಂಡಿಸಿರುವ ಆರ್ಥಿಕ ಸಮೀಕ್ಷೆಯಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಉಲ್ಲೇಖಿಸಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹವ್ಯಾಸಿ ಬರಹಗಾರ ಕೃಷ್ಣಭಟ್ ಅವರ ಅಭಿಪ್ರಾಯ ಇಲ್ಲಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೇಂದ್ರದ ಆರ್ಥಿಕ ಸಮೀಕ್ಷೆ ವರದಿಯ ಮೇಲೆ ಕಣ್ಣಾಡಿಸಿದಾಗ ಕಂಡುಬಂದ ಕೆಲವು ಅಂಶಗಳು:
1. ಬೆಂಗಳೂರಿನ ಸರಾಸರಿ ಪ್ರತಿ ವ್ಯಕ್ತಿ ವರ್ಷಕ್ಕೆ 117 ತಾಸು ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ಕಳೆಯುತ್ತಾರೆ.
2. ಟ್ರಾಫಿಕ್‌ನಿಂದಾಗಿ ಬೆಂಗಳೂರಿನ ಜನರ ಒಟ್ಟು 7.07 ಲಕ್ಷ ಪ್ರೊಡಕ್ಟಿವ್ ಗಂಟೆಗಳು ನಷ್ಟವಾಗುತ್ತಿವೆ. ಇದರ ವೆಚ್ಚ ಅಂದಾಜು 11.7 ಬಿಲಿಯನ್ ರೂಪಾಯಿ. ಅಂದರೆ, ಇವರು ಒಂದು ವೇಳೆ ಟ್ರಾಫಿಕ್‌ನಲ್ಲಿ ನಿಲ್ಲದೇ ಕೆಲಸ ಮಾಡಿರುತ್ತಿದ್ದರೆ ಇಷ್ಟು ಮೌಲ್ಯದ ಉತ್ಪನ್ನ ತಯಾರಿಸುತ್ತಿದ್ದರು.
3. ಬೆಂಗಳೂರು ಇಷ್ಟು ದೊಡ್ಡ ತಂತ್ರಜ್ಞಾನದ ಕೇಂದ್ರವಾದರೂ ದೆಹಲಿ ಹಾಗೂ ಮುಂಬೈಗೆ ಹೋಲಿಸಿದರೆ ಮೂಲಸೌಕರ್ಯದಲ್ಲಿ ಅಗತ್ಯವಿದ್ದಷ್ಟು ಹೂಡಿಕೆ ಮಾಡಲಿಲ್ಲ ಹಾಗೂ ತಂತ್ರಜ್ಞಾನ ಕಂಪನಿಗಳು ಬೆಂಗಳೂರಿನ ಮೇಲೆ ಹೆಚ್ಚು ಕೇಂದ್ರೀಕರಿಸಿವೆ.
4. ಗೃಹಲಕ್ಷ್ಮಿ ಸ್ಕೀಮ್‌ನಿಂದಾಗಿ ತಕ್ಷಣಕ್ಕೆ ಜನರಿಗೆ ಆರ್ಥಿಕ ನೆರವು ಸಿಗುತ್ತದೆಯಾದರೂ, ಅಗತ್ಯ ಮೂಲಸೌಕರ್ಯ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಕುಟುಂಬದ ಆದಾಯದ 11 ರಿಂದ 87 ಶೇ. ವರೆಗೆ ಸರ್ಕಾರ ಉಚಿತ ಹಣ ವಿತರಣೆ ಮಾಡುತ್ತಿದೆ.
5. ಸಂಬಳ ಹಾಗೂ ಸಬ್ಸಿಡಿಗಳನ್ನೆಲ್ಲ ಇತರೆ ವೆಚ್ಚಗಳ ಅಡಿಯಲ್ಲಿ ಸೇರಿಸಿದ್ದರಿಂದ ಆಯವ್ಯಯದಲ್ಲಿ ಪಾರದರ್ಶಕತೆ ಇಲ್ಲ.
6. ಆರೆಂಜ್ ಎಕಾನಮಿ ಬೆಳವಣಿಗೆಯಲ್ಲಿ ಅಡ್ಡಿ ಇದೆ. ಅಂದರೆ, ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಸ್ಥಳವಿಲ್ಲ. ವಿದೇಶಿ ಕಲಾಕಾರರಿಗೆ ಹಣ ಪಾವತಿ ಮಾಡುವುದಕ್ಕೆ ವಿಪರೀತ ನಿರ್ಬಂಧಗಳಿವೆ.
7. ಎಥೆನಾಲ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಮುಸುಕಿನ ಜೋಳ ಬೆಳೆ ಹೆಚ್ಚಳವಾಗಿದ್ದು, ಇತರ ಬೆಳೆ ಕಡಿಮೆಯಾಗಿದೆ. ಇದರಿಂದ ರಾಜ್ಯದ ಆಹಾರ ಭದ್ರತೆಗೆ ಅಡ್ಡಿಯಾಗಿದೆ.
8. ನಗರದಲ್ಲಿ ಬಳಸಿದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಇದರಿಂದ, ಹೊಸ ಸಿಹಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ.












Click it and Unblock the Notifications