Bengaluru Traffic: ಬೇರೆ ದೇಶಗಳಿಗಿಂತ ಬೆಂಗಳೂರು ಟ್ರಾಫಿಕ್ ವ್ಯವಸ್ಥೆ ಹೇಗಿದೆ!: ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 19: ಸಿಲಿಕಾನ್ ಸಿಟಿ ಬೆಂಗಳೂರು ನಗರವು ಅನೇಕ ವಿಚಾರಗಳ ಜೊತೆಗೆ ಇಲ್ಲಿ ಟ್ರಾಫಿಕ್ ವಿಷಯವಾಗಿಯು ಆಗಾಗ ಮುನ್ನೆಲೆಗೆ ಬರುತ್ತದೆ. ವಿಶ್ವದ ಇತರ ನಗರಗಳ ಪೈಕಿ ಬೆಂಗಳೂರಿನ ಟ್ರಾಫಿಕ್ ದಟ್ಟಣೆಗೆ ಅಗ್ರಸ್ಥಾನ ಇದೆ. ರಸ್ತೆಗುಂಡಿ ಜೊತೆಗೆ ಇಲ್ಲಿನ ಸಂಚಾರ ಸಮಸ್ಯೆಗಳಿಂದಲೂ ಸುದ್ದಿಯಾಗುವ ಬೆಂಗಳೂರಿನ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಬೆಂಗಳೂರು ನಗರ ಸಂಚಾರ ಪೊಲೀಸ್ ಹಾಗೂ ಹೋಂಡಾ ಇಂಡಿಯಾ ಫೌಂಡೇಶನ್ ರವರ ಸಹಯೋಗದಲ್ಲಿ 50 ಸಂಚಾರ ಗಸ್ತು ವಾಹನಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು. ದೇಶದ ಮುಂಬೈ, ಕೋಲ್ಕತ್ತಾ, ದೆಹಲಿ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಸಂಚಾರ ಸುವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದರು.

ದೊಡ್ಡ ಕಂಪನಿಗಳು, ಕೈಗಾರಿಕೆಗಳು ಸಾರ್ವಜನಿಕರಿಗೆ ಉಪಯೋಗ ಅಗುವ ಕೆಲಸ ಮಾಡಬೇಕು. ತಮ್ಮ ಲಾಭದಲ್ಲಿ ಶೇಕಡಾ 2ರಷ್ಟು ಖರ್ಚು ಮಾಡಬೇಕು ಎಂಬ ನಿಯಮ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಕಂಪನಿಗಳು ಕೆಲಸ ಮಾಡುತ್ತಿವೆ. ಹೋಂಡಾ ಸಂಸ್ಥೆಯವರು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ 1.30 ಕೋಟಿ ರೂ. ವೆಚ್ಚದಲ್ಲಿ 50 ಗಸ್ತು ವಾಹನಗಳನ್ನು ನೀಡುವ ಮೂಲಕ ತಮ್ಮ ಬದ್ಧತೆಯನ್ನು ತೋರಿದ್ದಾರೆ. ಈ ದ್ವಿಚಕ್ರ ವಾಹನಗಳು ಟ್ರಾಫಿಕ್ ನಿಯಂತ್ರಿಸಲು ಪೊಲೀಸರಿಗೆ ಉಪಯೋಗ ಆಗುತ್ತವೆ ಎಂದು ಹೇಳಿದರು.
ಸರ್ಕಾರವು ಗಮನದಲ್ಲಿಟ್ಟುಕೊಂಡು ಪ್ರತಿವರ್ಷ ನೂರಾರು ವಾಹನಗಳನ್ನು ಖರೀದಿಸಿ, ನೀಡಲಾಗುತ್ತದೆ. ಈ ವರ್ಷ 500 ವಾಹನಗಳನ್ನು ಖರೀದಿಸಲಾಗಿದೆ. ಈ ಹಿಂದೆ ಪೊಲೀಸ್ ಅಧಿಕಾರಿಗಳ ನಿಯೋಗವನ್ನು ಲಂಡನ್‌ಗೆ ಕರೆದೊಯ್ಯಲಾಗಿತ್ತು. ಲಂಡನ್ ಮೆಟ್ರೋ ಪೊಲೀಸರು ಕಮಾಂಡ್ ಸೆಂಟರ್‌ನ ಕಾರ್ಯವೈಖರಿಯನ್ನು ಪರಿಚಯಿಸಿದ್ದರು. ಅಪಘಾತ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ಅನುಕೂಲವಾಗುವಂತೆ ನಿರ್ಮಿಸಿದ್ದರು.
ಬೆಂಗಳೂರಲ್ಲಿ ಕಮಾಂಡ್ ಸೆಂಟರ್
ಬೆಂಗಳೂರು ನಗರದಲ್ಲಿ 26 ಕೋಟಿ ರೂಪಾಯಿ ಖರ್ಚು ಮಾಡಿ ಬೆಂಗಳೂರು ನಗರದಲ್ಲಿ ಕಮಾಂಡ್ ಸೆಂಟರ್ ನಿರ್ಮಿಸಲಾಗಿದೆ. ಸಾರ್ವಜನಿಕರ ಯಾವುದೇ ರೀತಿಯ ತುರ್ತು ಕರೆಗಳಿಗೆ ಪೊಲೀಸರು 9 ನಿಮಿಷದಲ್ಲಿ ಸ್ಪಂದಿಸುತ್ತಾರೆ ಎಂದು ಅವರು ವಿವರಿಸಿದರು.
ಬೆಂಗಳೂರು ನಗರ ಸಂಚಾರ ಪೊಲೀಸರು 'ಬಿಟಿಪಿ ಅಸ್ತ್ರಂ ಇ-ಆಕ್ಸಿಡೆಂಟ್' ಹೊಸ ಆವಿಷ್ಕಾರವನ್ನು ಪರಿಚಯಿಯಿಸಲಾಗಿದೆ.
ಅಪಘಾತದ ಸಂದರ್ಭದಲ್ಲಿ ಯಾರು ಸ್ಪಂದಿಸುವುದಿಲ್ಲ. ಅಲ್ಲದೇ, ವಿಮೆ ಪಡೆದುಕೊಳ್ಳಲು ಕಷ್ಟವಾಗುತ್ತಿದೆ. ಇದರ ಒತ್ತಡವನ್ನು ಕಡಿಮೆ ಮಾಡಲು ಬಿಟಿಪಿ ಅಸ್ತ್ರಂ ಆ್ಯಪ್‌ನಲ್ಲಿ ಇ-ಆಕ್ಸಿಡೆಂಟ್ ಮೂಲಕ ರಿಪೋರ್ಟ್ ಮಾಡಿದರೆ ನೆರವಾಗುತ್ತದೆ ಎಂದರು.
ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್ ಹಿಡಿಯುವ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿದೆ. ಒಂದೇ ಪ್ರಕರಣದಲ್ಲಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಿದ್ದಾರೆ. ನಮ್ಮ ಪೊಲೀಸರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಡ್ರಗ್ಸ್ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ. ರಸ್ತೆ ಗುಂಡಿ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.












Click it and Unblock the Notifications