Bengaluru rain: ವಿವಿಧೆಡೆ ಸೋಮವಾರ ಬಿರುಸಿನ ಮಳೆ, ನ.8ರ ತನಕ ಹವಾಮಾನ ವರದಿ ಇಲ್ಲಿದೆ
ಬೆಂಗಳೂರು, ನವೆಂಬರ್ 06: ವಾತಾವರಣದಲ್ಲಿ ನಿರಂತರವಾಗಿ ಬದಲಾಗುತ್ತಿರುವ ವೈಪರಿತ್ಯಗಳ ಪ್ರಭಾವದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹಿಂಗಾರು ಮಳೆ ಚುರುಕಾಗಿದೆ. ಈ ಪೈಕಿ ಬೆಂಗಳೂರಿನ ಸೋಮವಾರವು ಮಳೆ ಮುಂದುವರಿದಿದೆ. ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಇಂದು ಸಂಜೆ ಮಳೆ ದಾಖಲಾಗಿದೆ. ನವೆಂಬರ್ 8ರವರೆಗೆ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಗರದಲ್ಲಿ ಕಳೆದೊಂದು ವಾರದಿಂದ ಮಬ್ಬು ವಾತಾವರಣ ಜೊತೆಗೆ ಆಗಾಗ ಜೋರು ಮಳೆ ಆಗುತ್ತಿದೆ. ಸೋಮವಾರವು ನಗರದ ಬಹುತೇಕ ಕಡೆಗಳಲ್ಲಿ ಬಿರುಸಿನ ಮಳೆ ಆಗಿದೆ. ಆರ್‌ಆರ್ ನಗರ ವಲಯ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದೆ. ಕೆಲವು ಭಾಗಗಳಲ್ಲಿ ಹಗುರ ಮಳೆ ಆಗಿದ್ದು, ತಡರಾತ್ರಿಯು ಅಲ್ಲಲ್ಲಿ ಚದುರಿದಂತೆ ಮಳೆ ಆಗುವ ಲಕ್ಷಣಗಳು ಇವೆ ಎಂಬ ಮುನ್ಸೂಚನೆ ಲಭ್ಯವಾಗಿದೆ.

ಸಂಜೆ 06 ಗಂಟೆ ಹೊತ್ತಿಗೆ ರಾಜರಾಜೇಶ್ವರಿ ನಗರ 36 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಬಸವನಗುಡಿಯಲ್ಲಿ 30 ಮಿ.ಮೀ, ಕಮ್ಮನಹಳ್ಳಿ 27.5ಮಿ.ಮೀ, ಕೆಂಗೇರಿ 26.5 ಮಿ.ಮೀ, ವಿಶ್ವನಾಥ್ ನಾಗೇನಹಳ್ಳಿ 24.5 ಮಿ.ಮೀ, ಕುಶಾಲನಗರ 24 ಮಿ.ಮೀ, ಜಕ್ಕೂರು(1) 22ಮಿ.ಮೀ, ರಾಜರಾಜೇಶ್ವರಿ ನಗರ (1) 21ಮಿ.ಮೀ, ಹೆರೋಹಳ್ಳಿ 19ಮಿ.ಮೀ, ಉತ್ತರಹಳ್ಳಿ 18ಮಿ.ಮೀ, ಪೀಣ್ಯ ಕೈಗಾರಿಕೆ ಪ್ರದೇಶ 18ಮಿ.ಮೀ, ನಾಗಪುರ 15.5ಮಿ.ಮೀ, ನಂದಿನಿ ಬಡಾವಣೆ 15ಮಿ.ಮೀ, ಯಲಹಂಕ 13ಮಿ.ಮೀ. ಮತ್ತು ಬಸವನಪುರದಲ್ಲಿ 12ಮಿ.ಮೀ ಮಳೆ ಆಗಿದೆ. ಇನ್ನು ಕೆಲವು ಕಡೆಗಳಲ್ಲಿ ತುಂತುರು ಮಳೆ ಆಗಿದೆ.
ಸೋಮವಾರ ಬೆಳಗ್ಗೆಯಿಂದಲೇ ಮಬ್ಬು ವಾತಾವರಣ ಜೊತೆಗೆ ತೇವಾಂಶ ಭರಿತ ವಾತಾವರಣ ಕಂಡು ಬಂತು. ಮಧ್ಯಾಹ್ನ ಬಳಿಕ ಅಲ್ಲಲ್ಲಿ ಮಳೆ ಆರಂಭವಾಯಿತು. ಇದೇ ವಾತಾವರಣ ಇಂದಿನಿಂದ ಮೂರು ದಿನ ಮುಂದುವರಿಯಲಿದೆ.
ಬುಧವಾರವರೆಗೆ ನಿತ್ಯವು ಗುಡುಗು ಮಿಂಚು ಸಹಿತ ಬಿರುಸು ಮಳೆ ಆಗಲಿದೆ. ಮೂರು ದಿನ ಬಳಿಕ ಮಳೆಯಲ್ಲಿ ತುಸು ಇಳಿಕೆ ಕಂಡು ಬರಲಿದೆ. ನವೆಂಬರ್ 12ರವೆಗೆ ತುಂತುರು ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರದ ತಾಪಮಾನ: ರಾಜ್ಯದ ಹವಾಮಾನ ವರದಿ
ಈ ಅವಧಿಯಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ 29ರಿಂದ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20ರಿಂದ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆಗಳು ಇವೆ. ಇದರ ಹೊರತು ಸದ್ಯಕ್ಕೆ ಯಾವುದೇ ಗಂಭೀರ ರೂಪದ ಲಕ್ಷಣಗಳು ಇಲ್ಲ ಎಂದು ಮುನ್ಸೂಚನಾ ವರದಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕದ ದಕ್ಷಿಣ ಒಳನಾಡು ಸೇರಿದಂತೆ ಕರಾವಳಿ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರರಿಂದ ನಾಲ್ಕು ದಿನ ಧಾರಾಕಾರ ಮಳೆ ಆಗಲಿದೆ. ಈಗಾಗಲೇ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಸಮುದ್ರ ತೀರ ಪ್ರದೇಶದಲ್ಲಿ ಗಾಳಿ ವೇಗ ಹೆಚ್ಚಳ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇದೇ ವೇಳೆ ಉತ್ತರ ಒಳನಾಡಿನ ಒಂದೆರಡು ಕಡೆ ತುಂತುರು ಮಳೆ ಆಗಲಿದೆ.












Click it and Unblock the Notifications