₹9,700 ಕೋಟಿ ವೆಚ್ಚ: ಬೆಂಗಳೂರಲ್ಲಿ 37.12 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ನಿರ್ಮಾಣ!
ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ. ಅಲ್ಲದೇ ಬೆಂಗಳೂರು ಮಾತ್ರವಲ್ಲ ಬೆಂಗಳೂರಿನ ಸಮೀಪದ ಜಿಲ್ಲೆಗೂ ಈ ಬಾರಿ ಭರ್ಜರಿ ಗುಡ್‌ನ್ಯೂಸ್ ಸಿಕ್ಕಂತೆ ಆಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಮಹತ್ವದ ಕ್ರಮವೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ತನ್ನ ಉತ್ಕೃಷ್ಟ ದರ್ಜೆಯ ಸೇವೆ ಮತ್ತು ಸೌಲಭ್ಯಕ್ಕೆ ಹೆಸರುವಾಸಿಯಾಗಿರುವ ನಮ್ಮ ಮೆಟ್ರೋ ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿದೆ. ನಗರದ ಕೊನೆಯ ಮೈಲಿವರೆಗೂ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿದ್ದು, ಮೆಟ್ರೋ ಜಾಲ ವಿಸ್ತರಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಹೇಳಿದ್ದಾರೆ.

ಮುಂದುವರಿದು ಈ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆಯಡಿ ಜೆ.ಪಿ ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿ, ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ 2 ಕಾರಿಡಾರ್‌ಗಳಲ್ಲಿ 37.12 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ನಿರ್ಮಾಣ, ಮೆಟ್ರೋ ವಯಾಡಕ್ಟ್ ಜೊತೆಗೆ ಎಲಿವೇಟೆಡ್ ರಸ್ತೆಯನ್ನು ₹9,700 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಗೂ ಗುಡ್‌ನ್ಯೂಸ್: ಇನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರ ಜಿಲ್ಲೆಗೂ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಯಡಿ ಲಕ್ಷ್ಮೀ ಸಾಗರ ಪಂಪ್ ಹೌಸ್ ನಿಂದ ಕೋಲಾರ ಜಿಲ್ಲೆಯ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗೆ ನಾವು ಹಿಂದಿನ ಸಲ ಅಧಿಕಾರದಲ್ಲಿದ್ದಾಗ ಕೈಗೊಂಡ ಯೋಜನೆಗಳು ಈ ಭಾಗದ ರೈತರ ಜೀವನ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. 250ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪ್ರತಿನಿತ್ಯ ಹರಿಸಲಾಗುತ್ತಿದೆ. ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆಯಡಿ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸಲಾಗುವುದು. ಮೊದಲನೇ ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ - ಚಿಕ್ಕಬಳ್ಳಾಪುರ ಕೆರೆಗಳನ್ನು ಯಶಸ್ವಿಯಾಗಿ ತುಂಬಿಸಲಾಗಿದೆ. ಈ ನೀರನ್ನು ಕುಡಿಯಲು ಬಳಸುವುದಿಲ್ಲ. ಕೆರೆ ತುಂಬಿಸಿದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಉತ್ತಮಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಂದುವರಿದು ಯೋಜನೆ ಬಗ್ಗೆ ಕೆಲವರು ಅಪಪ್ರಚಾರ ಮಾಡಿದರೂ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಬೆಳೆಗಳಿಗೆ, ದನಕರುಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ನಿರೂಪಿತವಾಗಿದೆ. ಕೆ.ಸಿ.ವ್ಯಾಲಿ ಎರಡನೇ ಹಂತ ಡಿಸೆಂಬರ್ ಅಂತ್ಯದ ಒಳಗೆ ಪೂರ್ಣಗೊಳ್ಳಲಿದ್ದು, ಇದರಿಂದ 272 ಕೆರೆಗಳನ್ನು ತುಂಬಿಸಲು ಸಾಧ್ಯವಿದೆ. ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ನದಿಗಳಲಿಲ್ಲದೆ ಇರುವುದರಿಂದ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದ್ದು, ₹446 ಕೋಟಿಗಳ ವೆಚ್ಚದಲ್ಲಿ ಇದನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.












Click it and Unblock the Notifications