ಬೆಂಗಳೂರಿನಲ್ಲಿ ಸೀರಿಯಲ್ ಕಿಲ್ಲರ್? 3 ತಿಂಗಳಲ್ಲಿ 3 ಮಹಿಳೆಯರ ಕೊಳೆತ ಶವಗಳು ಪತ್ತೆ- ಇನ್ನೂ ದೊರೆಯದ ಸರಣಿ ಹಂತಕನ ಸುಳಿವು
ಕೇವಲ ಮೂರು ತಿಂಗಳ ಅವಧಿಯಲ್ಲಿ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಮೂವರು ಮಹಿಳೆಯ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದು ಸರಣಿ ಹಂತಕನ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರು, ಮಾರ್ಚ್ 14: ಕೇವಲ ಮೂರು ತಿಂಗಳ ಅವಧಿಯಲ್ಲಿ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಮೂವರು ಮಹಿಳೆಯ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಬೆಂಗಳೂರು ಪೊಲೀಸರು ಈ ಪೈಶಾಚಿಕ ಕೊಲೆಗಳ ಮಾದರಿಯನ್ನು ಪರಿಶೀಲಿಸಿದ್ದಾರೆ. ಇದು ಸರಣಿ ಹತ್ಯೆಯ ಮಾದರಿಯಲ್ಲಿದ್ದು, ಸರಣಿ ಹಂತಕನ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಸಿಕ್ಕ ಮೂರನೇ ಮಹಿಳೆಯ ಶವ
ಸೋಮವಾರ ಬೆಳಗ್ಗೆಯಿಂದ ಬೆಂಗಳೂರಿನ ರೈಲು ಟರ್ಮಿನಲ್ ಅಲ್ಲಿ ಕೊಳೆತ ದೇಹದ ದುರ್ವಾಸನೆ ಹರಡಿಕೊಂಡಿತ್ತು. ಇದರ ಹಿಂದಿನ ಕಾರಣವನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಅಧಿಕಾರಿಗಳು ಪತ್ತೆಹಚ್ಚುವಲ್ಲಿ ಸಫಲರಾಗಿದ್ದಾರೆ. ಅವರು ಮಹಿಳೆಯ ಶವವನ್ನು ಪತ್ತೆ ಹಚ್ಚಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಸಿಕ್ಕ ಮೂರನೇ ಮಹಿಳೆಯ ಶವ ಇದಾಗಿದೆ. ಹೀಗಾಗಿ, ಅಧಿಕಾರಿಗಳು ತೀವ್ರ ಗೊಂದಲಕ್ಕೊಳಗಾಗಿದ್ದಾರೆ. ಆದರೆ, ಅಪರಾಧದ ಮೂಲವನ್ನು ಕಂಡುಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
|
ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರಿಗೆ ಕರೆ
ಸೋಮವಾರ ಸಂಜೆಯ ಹೊತ್ತಿಗೆ, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲಿನ ಪಕ್ಕದಲ್ಲಿದ್ದ ಡ್ರಮ್‌ನಲ್ಲಿ ಅಧಿಕಾರಿಗಳು ಮಹಿಳೆಯ ಶವವನ್ನು ಪತ್ತೆ ಹಚ್ಚಿದರು. ಹರಡಿಕೊಂಡಿದ್ದ ದುರ್ವಾಸನೆಯ ಮೂಲವೇ ಡ್ರಮ್ ಎಂದು ಅಧಿಕಾರಿಗಳು ನಿರ್ಧರಿಸಿದರು. ಆ ನಂತರ ಆರ್‌ಪಿಎಫ್ ಅಧಿಕಾರಿಗಳು ಅದನ್ನು ಸೀಲ್ ಮಾಡಿ ರಾತ್ರಿ 7.30 ರ ಸುಮಾರಿಗೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರಿಗೆ ಕರೆ ಮಾಡಿದರು.
ಬೆಂಗಳೂರು ಪೊಲೀಸ್ ವರಿಷ್ಠಾಧಿಕಾರಿ (ರೈಲ್ವೇ) ಡಾ. ಸೌಮ್ಯಲತಾ ಎಸ್‌ಕೆ ಸೇರಿದಂತೆ ರೈಲ್ವೆ ಪೊಲೀಸ್‌ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಡ್ರಮ್ ಅನ್ನು ಹುಡುಕಾಡಿದಾಗ ಮಹಿಳೆಯ ಕೊಳೆತ ದೇಹ ಪತ್ತೆಯಾಗಿದೆ.
ಫೋರೆನ್ಸಿಕ್ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾದರಿ ಸಂಗ್ರಹಿಸಿದ್ದಾರೆ ಎಂದು ಡಾ.ಸೌಮ್ಯಲತಾ ತಿಳಿಸಿದ್ದಾರೆ. ಸ್ನಿಫರ್ ಡಾಗ್ ಸ್ಕ್ವಾಡ್ ಅನ್ನು ಸಹ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಯಶವಂತಪುರ ರೈಲು ನಿಲ್ದಾಣದ ಡ್ರಮ್‌ನಲ್ಲಿ ಮಹಿಳೆ ಶವ
ಜನವರಿ 4 ರಂದು ಯಶವಂತಪುರ ರೈಲು ನಿಲ್ದಾಣದ ಡ್ರಮ್‌ನಲ್ಲಿ ಮಹಿಳೆಯೊಬ್ಬರ ಶವ ಇದೇ ರೀತಿ ಕೊಳೆತ ಸ್ಥಿತಿಯಲ್ಲಿ ಪೊಲೀಸರಿಗೆ ಪತ್ತೆಯಾಗಿತ್ತು. ಅದಕ್ಕೂ ಮೊದಲು, ಡಿಸೆಂಬರ್ 6, 2022 ರಂದು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 06527 (ಬಂಗಾರಪೇಟೆ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್) ಕಂಪಾರ್ಟ್‌ಮೆಂಟ್‌ನಲ್ಲಿ ಮತ್ತೊಂದು ಮಹಿಳೆಯ ಶವ ಪತ್ತೆಯಾಗಿತ್ತು.

ಮೂವರೂ ಮಹಿಳೆಯರು 30ರ ಹರೆಯದವರು
ಮೂವರೂ ಮಹಿಳೆಯರು 30ರ ಹರೆಯದವರು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಎಲ್ಲಾ ಕೊಲೆಗಳಲ್ಲಿ ಸರಣಿ ಕೊಲೆಗಾರ ಭಾಗಿಯಾಗಿದ್ದಾನೆಂದು ಶಂಕಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರ ಮೂಲವನ್ನು ಪತ್ತೆ ಹಚ್ಚಲು ಜಾಲ ಬೀಸಿದ್ದಾರೆ. ಸುಳಿವು ಬಿಟ್ಟು ಹೋಗದ ಕೊಲೆಗಾರರನ್ನು ಪತ್ತೆ ಹಚ್ಚುವುದು ಇನ್ನಷ್ಟು ಕಷ್ಟಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಎಂವಿಟಿ ಮತ್ತು ಯಶವಂತಪುರ ಠಾಣೆಗಳಲ್ಲಿ ಪತ್ತೆಯಾದ ಶವಗಳನ್ನು ಉಲ್ಲೇಖಿಸಿ ಮಾತನಾಡಿದ ಸೌಮ್ಯಲತಾ ಅವರು, 'ಎರಡು ಕೊಲೆಗಳ ನಡುವಿನ ಸಾಮ್ಯತೆಯನ್ನು ನಾವು ತನಿಖೆ ಮಾಡುತ್ತೇವೆ' ಎಂದು ಭರವಸೆ ನೀಡಿದ್ದಾರೆ.
ಡ್ರಮ್ ಯಾರು, ಯಾವಾಗ ಇಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಈ ಹಿಂದೆಯು ಸರಣಿ ಕೊಲೆಗಳು
ಬೆಂಗಳೂರಿನಲ್ಲಿ ಈ ಹಿಂದೆಯು ಸರಣಿ ಕೊಲೆಗಳು ನಡೆದಿವೆ. ಉಮೇಶ್ ರೆಡ್ಡಿಯಂತಹ ಕುಖ್ಯಾತ ಹಂತಕರು ಹಲವು ಮಹಿಳೆಯರನ್ನು ಅತ್ಯಾಚಾರ ಮಾಡಿ, ಹತ್ಯೆಗೈದಿದ್ದ ಪ್ರಕರಣ ದೇಶದಾದ್ಯಂತ ಸುದ್ದಿ ಮಾಡಿತ್ತು. ಆತ 18 ಮಹಿಳೆಯರನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. 9 ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದಾನೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕನಿಷ್ಠ 20 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯವು 2009 ರಲ್ಲಿ ರೆಡ್ಡಿಗೆ ಮರಣದಂಡನೆ ವಿಧಿಸಿದೆ. 2011 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಈ ನಿರ್ಧಾರವನ್ನು ಎತ್ತಿಹಿಡಿದಿದೆ. ರೆಡ್ಡಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ ನಂತರ, ಸುಪ್ರೀಂ ಕೋರ್ಟ್ 2022 ರಲ್ಲಿ ಅವರ ಮರಣದಂಡನೆಯನ್ನು 30 ವರ್ಷಗಳ ಶಿಕ್ಷೆಗೆ ಪರಿವರ್ತಿಸಿದೆ.












Click it and Unblock the Notifications