ಬರೋಬ್ಬರಿ ₹65 ಲಕ್ಷದ ಪ್ಯಾಕೇಜ್ ತಿರಸ್ಕರಿಸಿದ ಬೆಂಗಳೂರು ಟೆಕ್ಕಿ, ಉದ್ಯೋಗಿ ಕೊಟ್ಟ ಕಾರಣಕ್ಕೆ ಮೆಚ್ಚುಗೆಗಳ ಸುರಿಮಳೆ
Bengaluru Techie: ಇತ್ತೀಚಿನ ದಿನಗಳಲ್ಲಿ ದೊಡ್ಡ-ದೊಡ್ಡ ಕಂಪನಿಗಳಲ್ಲಿ ಕೇವಲ ಶೇಕಡ 10ರಷ್ಟು ವೇತನ ಏರಿಕೆಗಾಗಿ ಕಂಪನಿ ತೊರೆಯುವ ನಿರ್ಧಾರ ತೆಗೆದುಕೊಳ್ಳುವವರನ್ನು ನೋಡಿಯೇ ಇರುತ್ತೇವೆ. ಆದರೆ, ಇದೀಗ ಬೆಂಗಳೂರಿನ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ಸಂಬಳದ ಜೊತೆಗೆ ಹೆಚ್ಚುವರಿಯಾಗಿ 20 ಲಕ್ಷ ರೂಪಾಯಿಯ ಬಡ್ತಿ ಆಫರ್ ಅನ್ನು ತಿರಸ್ಕರಿಸಿರುವ ವಿಚಿತ್ರ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವರ್ಷಕ್ಕೆ ಸಿಗುತ್ತಿದ್ದ ಹೆಚ್ಚುವರಿ 20 ಲಕ್ಷದ ಬಡ್ತಿ ಆಫರ್ ಅನ್ನು ಬದಿಗೊತ್ತಿದ್ದಾರೆ. ವರ್ಷಕ್ಕೆ ₹65 ಲಕ್ಷ ದುಡಿಯುವ ಅವಕಾಶ ಇದ್ದರೂ ಸಹ ಕುಟುಂಬದ ಜೊತೆಗಿನ ನೆಮ್ಮದಿಯ ಜೀವನಕ್ಕಾಗಿ ಅವರು ಕೈಗೊಂಡ ಈ ಅಪರೂಪದ ತೀರ್ಮಾನ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹಾಗೂ ಮೆಚ್ಚುಗೆಗೂ ಪಾತ್ರವಾಗಿದೆ.

65 ಲಕ್ಷ ವೇತನದ ಹುದ್ದೆ ತಿರಸ್ಕರಿಸಿದ ಉದ್ಯೋಗಿ
ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಶೇಕಡಾ 10ರಷ್ಟು ವೇತನ ಏರಿಕೆಗಾಗಿ ಕಂಪನಿ ಬದಲಾಯಿಸುವ ಉದ್ಯೋಗಿಗಳ ನಡುವೆ, ಬೆಂಗಳೂರಿನ 31 ವರ್ಷದ ಸಾಫ್ಟ್‌ವೇರ್ ಡೆವಲಪರ್ ತಮ್ಮ ವಾರ್ಷಿಕ ₹45 ಲಕ್ಷದ ಆಫರ್‌ಗೆ ಮತ್ತೆ ₹20 ಲಕ್ಷ ಹೆಚ್ಚುವರಿ ವೇತನ ನೀಡುವ ಪ್ರಮೋಷನ್ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಇದು ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಆಫರ್ ಸ್ವೀಕರಿಸಿದ್ದರೆ ಅವರ ವಾರ್ಷಿಕ ವೇತನ ₹65 ಲಕ್ಷ ರೂಪಾಯಿಗಿಂತಲೂ ಹೆಚ್ಚಾಗುತ್ತಿತ್ತು. ಆದರೆ, ಅವರು ಈ ಆಫರ್ ಅನ್ನು ತಿರಸ್ಕರಿಸಿದ್ದು, ಅವರ ಈ ನಿರ್ಧಾರ ಕೇಳಿ ಅವರ ತಂದೆಯೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ಯುಎಬಿಲಿಟಿ' (UAbility) ಸಂಸ್ಥೆಯ ಸಂಸ್ಥಾಪಕ ರೋಹನ್ ಧವನ್ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಈ ಕಥೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಗದ್ದಲ ಸೃಷ್ಟಿಸಿದೆ.
ಆಫರ್ ತಿರಸ್ಕರಿಸಲು ಕಾರಣವೇನು?
* ಹೆಚ್ಚುವರಿ ₹20 ಲಕ್ಷದೊಂದಿಗೆ ಬರುವ ಪ್ರಮೋಷನ್ ಕೇವಲ ಹಣ ಮಾತ್ರವಲ್ಲದೆ, ನೆಮ್ಮದಿ ಕೆಡಿಸುವ ಹಲವು ಷರತ್ತುಗಳನ್ನು ಒಳಗೊಂಡಿತ್ತು. ಅಮೆರಿಕ ಮೂಲದ ತಂಡದೊಂದಿಗೆ ವಾರದಲ್ಲಿ 4 ರಾತ್ರಿ ತಡರಾತ್ರಿವರೆಗೆ ಕಾನ್ಫರೆನ್ಸ್ ಕಾಲ್‌ಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿತ್ತು.
* ದೊಡ್ಡ ತಂಡದ ಜವಾಬ್ದಾರಿ ಹೊರಬೇಕಿದ್ದ ಅವರ ವೈಯಕ್ತಿಕ ವೇಳಾಪಟ್ಟಿ ಸಂಪೂರ್ಣವಾಗಿ ಕೆಲಸಕ್ಕೆ ಮೀಸಲಾಗುತ್ತಿತ್ತು ಮತ್ತು ಪ್ರಯಾಣಿಸುವುದು ಅನಿವಾರ್ಯವಾಗುತ್ತಿತ್ತು.
* ಅವರು ಮತ್ತು ಅವರ ಪತ್ನಿ ಮುಂದಿನ ವರ್ಷ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ, ವಾರದಲ್ಲಿ 5 ದಿನ ಬೆಳಗ್ಗೆ ಜಿಮ್ ಮಾಡುವ ಅಭ್ಯಾಸ ಮತ್ತು ಪ್ರತಿ ಬುಧವಾರ ಪೋಷಕರ ಜೊತೆ ರಾತ್ರಿ ಊಟ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ.
ತಂದೆಯ ಪ್ರಶ್ನೆಗೆ ಟೆಕ್ಕಿ ಕೊಟ್ಟ ಸ್ಪಷ್ಟನೆ ಏನು?
ಮಗ ಇಷ್ಟೊಂದು ದೊಡ್ಡ ಆಫರ್ ಬೇಡ ಎಂದಾಗ ತಂದೆ ತಕ್ಷಣ ಕರೆ ಮಾಡಿ, '₹20 ಲಕ್ಷ ಹೆಚ್ಚುವರಿ ಸಿಗುತ್ತಿದೆ, ನಿನಗೆ ಸಮಸ್ಯೆ ಏನಪ್ಪಾ?,' ಎಂದು ಅಚ್ಚರಿಯಿಂದ ಕೇಳಿದ್ದರು. 'ಆದರೆ ಹಣಕ್ಕಿಂತ 'ವರ್ಕ್-ಲೈಫ್ ಬ್ಯಾಲೆನ್ಸ್' (Work-Life Balance) ಮತ್ತು ವೈಯಕ್ತಿಕ ಜೀವನದ ಶಾಂತಿ ಅತ್ಯಂತ ಮುಖ್ಯ ಅಪ್ಪಾ,' ಎಂದು ಹೇಳುವ ಮೂಲಕ ಟೆಕ್ಕಿ ಹೇಳಿ ಗಮನ ಸಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಿಶ್ರಪ್ರತಿಕ್ರಿಯೆ
'ಆಫರ್ ಲೆಟರ್‌ನಲ್ಲಿ ನಿಮಗೆ ಎಷ್ಟು ಸಿಗುತ್ತದೆ ಎಂದು ಮಾತ್ರ ಬರೆದಿರುತ್ತಾರೆ, ಆದರೆ ನೀವು ಏನೆಲ್ಲಾ ಕಳೆದುಕೊಳ್ಳುತ್ತೀರಿ ಎಂದು ಬರೆದಿರುವುದಿಲ್ಲ,' ಎಂದು ರೋಹನ್ ಧವನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅನೇಕ ಉದ್ಯೋಗಿಗಳು ಈ ನಿರ್ಧಾರವನ್ನು ಬೆಂಬಲಿಸಿದ್ದು, ಹಣಕ್ಕಿಂತ ಮಾನಸಿಕ ನೆಮ್ಮದಿ ಹಾಗೂ ಕುಟುಂಬದ ಜೊತೆ ಕಳೆಯುವ ಸಮಯವೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications
