ಬೆಂಗಳೂರಿನಲ್ಲಿ ಗಗನಕ್ಕೇರಿದ ಸಕ್ಕರೆ ಬೆಲೆ: ಗ್ರಾಹಕರಿಗೆ ಸಿಹಿ ತಿನಿಸು, ಬೇಕರಿ ಉತ್ಪನ್ನಗಳ ದರ ಏರಿಕೆ ಬಿಸಿ
ಬೆಂಗಳೂರು: ಮುಂಬರುವ ಸಾಲು ಸಾಲು ಹಬ್ಬಗಳ ಸಂಭ್ರಮದ ನಡುವೆ, ಸಿಲಿಕಾನ್ ಸಿಟಿಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲು ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಕ್ಕರೆ ಬೆಲೆ ಗಣನೀಯವಾಗಿ ಏರಿಕೆ ಆಗುತ್ತಿದ್ದು, ಇದರ ನೇರ ಪರಿಣಾಮ ಬೇಕರಿ ಹಾಗೂ ಸಿಹಿ ತಿನಿಸುಗಳ ದರದ ಮೇಲೆ ಬೀಳುತ್ತಿದೆ.
ಕೇವಲ ಕೆಲವೇ ದಿನಗಳ ಅಂತರದಲ್ಲಿ ಸಕ್ಕರೆ ಬೆಲೆ ಕೆಜಿಗೆ 45 ರೂಪಾಯಿಯಿಂದ 75 ರೂಪಾಯಿಗೆ ಜಿಗಿದಿರುವುದು ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳನ್ನ ಆತಂಕಕ್ಕೀಡುಮಾಡಿದೆ.
ಆಗಸ್ಟ್ 27ರ ಮಾರುಕಟ್ಟೆ ವರದಿಯ ಪ್ರಕಾರ, ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಸಕ್ಕರೆ ದರ ಕೆಜಿಗೆ 65 ರೂಪಾಯಿಗೆ ತಲುಪಿದೆ. ಇನ್ನು ಸಣ್ಣ ಸಣ್ಣ ಅಂಗಡಿಗಳಲ್ಲಿ ಒಂದು ಕೆಜಿ ಸಕ್ಕರೆಗೆ 75 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ.

ಸಿಹಿ ತಿನಿಸುಗಳ ಅಂಗಡಿಗಳು ಹಾಗೂ ಬೇಕರಿಗಳಿಗೆ ಸಕ್ಕರೆಯೇ ಪ್ರಮುಖ ಕಚ್ಚಾವಸ್ತುವಾಗಿರುವ ಕಾರಣ ಮಾಲೀಕರು ಅನಿವಾರ್ಯವಾಗಿ ತಮ್ಮ ಉತ್ಪನ್ನಗಳ ಬೆಲೆಯನ್ನ ಹೆಚ್ಚಿಸಲು ಮುಂದಾಗಿದ್ದಾರೆ.
ಮಾರುಕಟ್ಟೆ ಮೂಲಗಳ ಪ್ರಕಾರ, ಸಿಹಿ ತಿನಿಸುಗಳು ಮತ್ತು ಬೇಕರಿ ಉತ್ಪನ್ನಗಳ ಬೆಲೆ ಪ್ರತಿ ಕೆಜಿಗೆ 10 ರಿಂದ 20 ರೂಪಾಯಿಯಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹಾಗೆಯೇ, ಜ್ಯೂಸ್ ಮತ್ತು ಇತರೆ ಪಾನೀಯಗಳ ಬೆಲೆಯಲ್ಲೂ ಪ್ರತಿ ಗ್ಲಾಸ್‌ಗೆ ಅಥವಾ ಬಾಟಲಿಗೆ 5 ರಿಂದ 10 ರೂಪಾಯಿಯಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.
ಸಕ್ಕರೆ ದರ ದಿಢೀರ್ ಹೆಚ್ಚಳಕ್ಕೆ ಪ್ರಮುಖ ಕಾರಣಗಳು
ಕೇವಲ ಕೆಲವು ದಿನಗಳ ಹಿಂದೆಯಷ್ಟೇ 45 ರೂಪಾಯಿಗೆ ಲಭ್ಯವಿದ್ದ ಸಕ್ಕರೆ ದರ ಈಗ ದಿಢೀರ್ ಏರಿಕೆಯಾಗಲು ಹಲವು ಕಾರಣಗಳಿವೆ. ಮೊದಲನೆಯದಾಗಿ, ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು ಕಬ್ಬು ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರ ಜೊತೆಗೆ, ಕಬ್ಬಿನ ಬೆಳೆಗೆ ಕಾಡುತ್ತಿರುವ ವಿವಿಧ ರೋಗಗಳು ಇಳುವರಿಯನ್ನ ಗಣನೀಯವಾಗಿ ತಗ್ಗಿಸಿವೆ.
ಮತ್ತೊಂದೆಡೆ, ಸಾರಿಗೆ ವೆಚ್ಚ ಹೆಚ್ಚಾಗಿರುವುದು ಕೂಡ ಸಕ್ಕರೆಯ ದರ ಏರಿಕೆಗೆ ಕಾರಣವಾಗಿದೆ. ಮುಂಬರುವ ಹಬ್ಬದ ಸೀಸನ್‌ನಲ್ಲಿ ಸಕ್ಕರೆಗೆ ಅಪಾರ ಬೇಡಿಕೆ ಸೃಷ್ಟಿಯಾಗಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ.
ಎಥೆನಾಲ್ ಉತ್ಪಾದನೆಯ ಆರೋಪ
ಸಕ್ಕರೆ ಬೆಲೆ ಏರಿಕೆ ವಿಚಾರವು ಇದೀಗ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದೆ. ರಾಜ್ಯದಲ್ಲಿ ಸಕ್ಕರೆ ಉತ್ಪಾದನೆಗೆ ಬಳಕೆಯಾಗಬೇಕಿದ್ದ ಕಬ್ಬನ್ನ, ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ ಎಂಬುದು ವಿರೋಧ ಪಕ್ಷಗಳ ಪ್ರಮುಖ ಆರೋಪ.
ಎಥೆನಾಲ್ ಉತ್ಪಾದನೆಗೆ ಕಬ್ಬು ಹೋಗುತ್ತಿರುವ ಕಾರಣ, ಸಕ್ಕರೆ ಕಾರ್ಖಾನೆಗಳಿಗೆ ಕಚ್ಚಾ ವಸ್ತುವಿನ ಕೊರತೆ ಎದುರಾಗಿದ್ದು, ಇದೇ ದರ ಹೆಚ್ಚಳಕ್ಕೆ ಕಾರಣ ಎಂದು ವಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿವೆ.
ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಆರ್ಥಿಕ ಹೊರೆ
ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿಯಂತಹ ದೊಡ್ಡ ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಸಕ್ಕರೆಯ ದರ ಹೀಗೆಯೇ ಏರುಗತಿಯಲ್ಲಿ ಸಾಗಿದರೆ, ಜನಸಾಮಾನ್ಯರಿಗೆ ಹಬ್ಬದ ಆಚರಣೆ ಮತ್ತಷ್ಟು ದುಬಾರಿಯಾಗಲಿದೆ. ಹಬ್ಬಗಳ ಸಂದರ್ಭದಲ್ಲಿ ಮನೆಗಳಲ್ಲಿ ಸಿಹಿ ಮಾಡುವುದು, ಸಂಬಂಧಿಕರಿಗೆ ಸ್ವೀಟ್ ಬಾಕ್ಸ್ ನೀಡುವುದು ವಾಡಿಕೆ. ಆದರೆ, ಬೆಲೆ ಏರಿಕೆಯು ಜನರ ಜೇಬಿಗೆ ಕತ್ತರಿ ಹಾಕಲಿದ್ದು, ಬೇಕರಿ ಹಾಗೂ ಸ್ವೀಟ್ ಶಾಪ್ ಮಾಲೀಕರಿಗೂ ವ್ಯಾಪಾರದ ಮೇಲೆ ಹೊಡೆತ ಬೀಳುವ ಆತಂಕ ಮೂಡಿಸಿದೆ.


Click it and Unblock the Notifications
