Suburban Rail Project: 2ನೇ ಕಾರಿಡಾರ್‌ನಲ್ಲಿ 12 ಇಪಿಸಿ ರೈಲು ನಿಲ್ದಾಣ, ಟೆಂಡರ್ ಆಹ್ವಾನ, 2025ಕ್ಕೆ ರೈಲುಗಳ ಪೂರೈಕೆ
ಬೆಂಗಳೂರು, ಆಗಸ್ಟ್ 11: ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆ (Bengaluru Suburban Rail Project) ಕಾಮಗಾರಿಗಳು ವಿವಿಧ ಹಂತಗಳಲ್ಲಿ ನಡೆದಿವೆ. ಇನ್ನೂ ಕೆಲವೆಡೆ ಭೂ ಒತ್ತುವರಿ ಬಾಕಿ ಇದೆ. ಯೋಜನೆ ಕಾರಿಡಾರ್ -2ರಲ್ಲಿ ಬರುವ 12 ನಿಲ್ದಾಣಗಳನ್ನು EPC ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಸಂಬಂಧ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಆ.31ರಂದು ಮುಗಿಯಲಿದೆ ಎಂದು ಕೈಗಾರಿಕೆ ಸಚಿವ ಎಂಬಿ.ಪಾಟೀಲ್ ತಿಳಿಸಿದರು.
ಬೆಂಗಳೂರಿನ ಲಿಂಗರಾಜಪುರ, ಶಾಂಪುರ, ಹೆಬ್ಬಾಳ ಹಾಗೂ ಯಶವಂತಪುರಗಳಲ್ಲಿ ಭರದಿಂದ ಸಾಗಿರುವ ಉಪನಗರ ರೈಲು ಯೋಜನೆಯ ಕಾಮಗಾರಿಗಳನ್ನು ಸ್ವತಃ ಸಚಿವರು ಖುದ್ದು ಪರಿಶೀಲಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿ, ಕಾಮಗಾರಿ ವಿವರ ನೀಡಿದರು.

ಉಪನಗರ ರೈಲು ಯೋಜನೆ ಕಾರಿಡಾರ್-4 ರ ವ್ಯಾಪ್ತಿಯ ಸಿವಿಲ್ ಕಾಮಗಾರಿಗಳಿಗೆ ಕೂಡ ಟೆಂಡರ್ ಮುಗಿದಿದೆ. ಸದ್ಯದಲ್ಲೇ ಈ ಕಾಮಗಾರಿಗಳನ್ನು ಬಿಡ್‌ದಾರರಿಗೆ ವಹಿಸಲಾಗುವುದು. 2025ರ ಅಕ್ಟೋಬರ್‍ನಿಂದ ಯೋಜನೆಯ ಮೊದಲ 10 ರೈಲುಗಳ ಪೂರೈಕೆ ಕೂಡ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ತುಂಡು ಗುತ್ತಿಗೆಗೆ ಅವಕಾಶ ಇಲ್ಲ
ರೈಲ್ವೆ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡುತ್ತಿರುವ ಆರೋಪಗಳ ಬಗ್ಗೆ ಸಚಿವರು ಉತ್ತರಿಸಿದರು. ತುಂಡು ಗುತ್ತಿಗೆಗಳಿಗೆ ನಿಯಮಗಳಲ್ಲಿ ಅವಕಾಶವೇ ಇಲ್ಲ. ಒಂದು ವೇಳೆ ಗುತ್ತಿಗೆದಾರರು ಅಂತದ್ದೇನಾದರು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯೋಜನೆಗೆ ಈ ವರ್ಷ ₹1,000 ಕೋಟಿ ಮೀಸಲು
ಬೆಂಗಳೂರು ಉಪನಗರ ರೈಲು ಯೋಜನೆಗೆ ಒಟ್ಟು 15,767 ಕೋಟಿ ರೂ. ವೆಚ್ಚವಾಗುತ್ತಿದೆ. 2013ರ ಬಜೆಟ್‌ನಲ್ಲಿ ಅಂದಿನ ಮತ್ತು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ SPV (ಸ್ಪೆಷಲ್ ಪರ್ಪಸ್ ವೆಹಿಕಲ್) ಘೋಷಿಸಿದ್ದಾರೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 1,000 ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಉಳಿದಂತೆ ಜರ್ಮನಿಯ ಕೆಎಫ್‌ಡಬ್ಲ್ಯು, ಯೂರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮತ್ತು ಲಕ್ಸಂಬರ್ಗ್‌ನಿಂದ ಒಟ್ಟು 7,438 ಕೋಟಿ ರೂ.ಗಳನ್ನು ಸಾಲ ಪಡೆಯಲಾಗುವುದು. ಇದಕ್ಕಾಗಿ ಬರುವ ಡಿಸೆಂಬರ್‍ನಲ್ಲಿ ಸಹಿ ಹಾಕಲಾಗುವುದು. ಇದಾದ ನಂತರ ಕಾರಿಡಾರ್ 1 ಮತ್ತು 3ರ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುವುದು ಎಂದರು.
ಇನ್ನೂ ಕಾರಿಡಾರ್ -2 ಯೋಜನೆಗೆ ಒಟ್ಟು 157 ಎಕರೆ ಭೂಮಿಯನ್ನು ನೈರುತ್ಯ ರೈಲ್ವೆಯಿಂದ ಗುತ್ತಿಗೆಗೆ ಪಡೆದುಕೊಂಡಿದ್ದೇವೆ. ಮಿಕ್ಕಂತೆ ಹಳಿ ಹಾಕಲು 5.11 ಎಕರೆ ಖಾಸಗಿ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಯೋಜನೆಗೆ 7.73 ಎಕರೆ ಸರಕಾರಿ ಜಮೀನು ಅಗತ್ಯವಿದೆ. ಇದರಲ್ಲಿ 2.72 ಎಕರೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ.
ಉಪನಗರ ರೈಲು ಯೋಜನೆಯನ್ನು ಚಿಕ್ಕಬಳ್ಳಾಪುರ, ಮೈಸೂರು, ಮಾಗಡಿ, ತುಮಕೂರು, ಗೌರಿಬಿದನೂರು, ಕೋಲಾರ ಮತ್ತು ಹೊಸೂರುಗಳಿಗೆ ವಿಸ್ತರಿಸುವ ಚಿಂತನೆಯಲ್ಲಿದ್ದೇನೆ. ಇದರ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲು ಈ ಹಿಂದೆಯೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇದು ಕಾರ್ಯಗತವಾದರೆ ಉಪನಗರ ರೈಲು ಯೋಜನೆಯು ಹಾಲಿ 148 ಕಿಲೋ ಮೀಟರ್‌ನಿಂದ 452 ಕಿಲೋ ಮೀಟರ್ ವರೆಗೆ ಹಿಗ್ಗಲಿದೆ ಎಂದು ತಿಳಿಸಿದರು.












Click it and Unblock the Notifications