Bengaluru: GBA ಗುರುತಿಸಿದ ಕೇಂದ್ರಗಳಲ್ಲಿ ಮಾತ್ರ ಬೀದಿ ನಾಯಿಗಳಿಗೆ ಆಹಾರ: ಎಲ್ಲೆಂದರಲ್ಲಿ ಹಾಕಿದ್ರೆ ಬೀಳುತ್ತೆ ದಂಡ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿ ಮತ್ತು ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ಹಾಗೂ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ನಗರದಲ್ಲಿ ಎಲ್ಲೆಂದರಲ್ಲಿ, ರಸ್ತೆ ಬದಿಗಳಲ್ಲಿ ಅಥವಾ ಮನೆಗಳ ಮುಂದೆ ಬೀದಿ ನಾಯಿಗಳಿಗೆ ಆಹಾರ ಹಾಕುವುದಕ್ಕೆ ಕಡಿವಾಣ ಬೀಳಲಿದೆ. ಶ್ವಾನ ಪ್ರಿಯರು ಮತ್ತು ಸಾರ್ವಜನಿಕರ ನಡುವಿನ ನಿರಂತರ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ, ಜಿಬಿಎ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಲ್ಲಿ ಒಟ್ಟು 450 ಅಧಿಕೃತ 'ಆಹಾರ ಕೇಂದ್ರ'ಗಳನ್ನು ಗುರುತಿಸಲಾಗಿದೆ.
ಏನಿದು ಹೊಸ ನಿಯಮ?
ನಗರದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ವಿಚಾರದಲ್ಲಿ ಪದೇ ಪದೇ ಗಲಾಟೆಗಳು ನಡೆಯುತ್ತಿವೆ. ಕೆಲವರು ರಸ್ತೆ ಮಧ್ಯೆ, ಪಾದಚಾರಿ ಮಾರ್ಗಗಳಲ್ಲಿ ಅಥವಾ ಅಪಾರ್ಟ್ಮೆಂಟ್ ಗೇಟ್‌ಗಳ ಬಳಿ ಆಹಾರ ಹಾಕುತ್ತಾರೆ ಎಂಬ ದೂರುಗಳಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಬಿಎ, ನಾಯಿಗಳಿಗೆ ಆಹಾರ ನೀಡಲೆಂದೇ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿದೆ. ಈ ಸ್ಥಳಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಆಹಾರ ನೀಡುವುದು ಕಂಡುಬಂದರೆ ಅಂತಹವರ ವಿರುದ್ಧ ದಂಡ ವಿಧಿಸಲು ಮತ್ತು ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ವಲಯವಾರು ಕೇಂದ್ರಗಳ ವಿವರ:
ಜಿಬಿಎ ಅಧಿಕಾರಿಗಳು ಮತ್ತು ಪಶುಪಾಲನಾ ಇಲಾಖೆಯು ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ಪ್ರಕಾರ, ನಗರದ ವಿವಿಧ ವಲಯಗಳಲ್ಲಿ ಈ ಕೆಳಗಿನಂತೆ ಸ್ಥಳಗಳನ್ನು ಗುರುತಿಸಲಾಗಿದೆ:
1. ಬೆಂಗಳೂರು ಪೂರ್ವ : ಅತಿ ಹೆಚ್ಚು ಅಂದರೆ 150 ಕೇಂದ್ರಗಳು
2. ಬೆಂಗಳೂರು ಕೇಂದ್ರ : 90 ಕೇಂದ್ರಗಳು
3. ಬೆಂಗಳೂರು ಪಶ್ಚಿಮ: 85 ಕೇಂದ್ರಗಳು
4. ಬೆಂಗಳೂರು ಉತ್ತರ : 70 ಕೇಂದ್ರಗಳು
5. ಬೆಂಗಳೂರು ದಕ್ಷಿಣ : 68 ಕೇಂದ್ರಗಳು
ಈ ಗುರುತಿಸಲಾದ ಸ್ಥಳಗಳಲ್ಲಿ ಶೀಘ್ರದಲ್ಲೇ "ಇದು ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳ" ಎಂಬ ನಾಮಫಲಕಗಳನ್ನು ಅಳವಡಿಸಲಾಗುವುದು. ಆಹಾರ ನೀಡುವವರು ಈ ಜಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.
ಪ್ರಾಣಿ ಪ್ರಿಯರ ಆಕ್ಷೇಪವೇನು?
ಜಿಬಿಎಯ ಈ ನಡೆಗೆ ಪ್ರಾಣಿ ಹಕ್ಕು ಹೋರಾಟಗಾರರು ಮತ್ತು ಶ್ವಾನ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಾಯಿಗಳು ಪ್ರಾದೇಶಿಕ ಪ್ರವೃತ್ತಿಯನ್ನು (Territorial Nature) ಹೊಂದಿರುವ ಪ್ರಾಣಿಗಳು. ಅಂದರೆ, ಒಂದು ಏರಿಯಾದ ನಾಯಿ ಮತ್ತೊಂದು ಏರಿಯಾಕ್ಕೆ ಹೋಗುವುದಿಲ್ಲ ಅಥವಾ ಬೇರೆ ನಾಯಿಯನ್ನು ತನ್ನ ಏರಿಯಾಕ್ಕೆ ಬಿಟ್ಟುಕೊಡುವುದಿಲ್ಲ. ಹೀಗಿರುವಾಗ, ಎಲ್ಲೋ ಒಂದು ಕಡೆ 'ಫೀಡಿಂಗ್ ಸ್ಪಾಟ್' ಮಾಡಿ ಅಲ್ಲಿಗೆ ಎಲ್ಲಾ ನಾಯಿಗಳು ಬಂದು ಊಟ ಮಾಡಲಿ ಎಂದರೆ ಅದು ಅಸಾಧ್ಯದ ಮಾತು ಎಂದು ಅವರು ವಾದಿಸುತ್ತಿದ್ದಾರೆ.
"ಇದು ಇಂದಿರಾ ಕ್ಯಾಂಟೀನ್ ಅಲ್ಲ, ಮನುಷ್ಯರಂತೆ ನಾಯಿಗಳು ಹುಡುಕಿಕೊಂಡು ಹೋಗಿ ಊಟ ಮಾಡಲು ಸಾಧ್ಯವಿಲ್ಲ. ಒಂದೇ ಜಾಗದಲ್ಲಿ ಹಲವು ನಾಯಿಗಳು ಸೇರಿದರೆ ಅವುಗಳ ನಡುವೆ ಕಚ್ಚಾಟ (Dog Fights) ಹೆಚ್ಚಾಗುತ್ತದೆ. ಅಲ್ಲದೆ, ತಮ್ಮ ಏರಿಯಾ ಬಿಟ್ಟು ಬಾರದ ನಾಯಿಗಳು ಹಸಿವಿನಿಂದ ಬಳಲಿ, ಮತ್ತಷ್ಟು ಆಕ್ರೋಶಗೊಂಡು ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆಯೇ ಹೆಚ್ಚು" ಎಂದು ಪ್ರಾಣಿ ಹಕ್ಕು ಹೋರಾಟಗಾರರು ಎಚ್ಚರಿಸಿದ್ದಾರೆ. ವೈಜ್ಞಾನಿಕವಾಗಿ ಯೋಚಿಸದೆ ಕೇವಲ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿದಂತೆ ತೋರಿಸಲು ಅಧಿಕಾರಿಗಳು ಅವೈಜ್ಞಾನಿಕವಾಗಿ ಜಾಗ ಗುರುತಿಸಿದ್ದಾರೆ ಎಂಬುದು ಅವರ ಆರೋಪ.
ಒಂದೆಡೆ ಮಕ್ಕಳ ಮೇಲೆ ನಾಯಿಗಳ ದಾಳಿಯಿಂದ ಕಂಗಾಲಾಗಿರುವ ಪೋಷಕರು, ಮತ್ತೊಂದೆಡೆ ಮೂಕ ಪ್ರಾಣಿಗಳ ಹಸಿವು ನೀಗಿಸಲು ಪರದಾಡುತ್ತಿರುವ ಪ್ರಾಣಿ ಪ್ರಿಯರು. ಈ ಇಬ್ಬರ ನಡುವೆ ಸಮತೋಲನ ಕಾಪಾಡಲು ಜಿಬಿಎ ಈ ಮಧ್ಯಮ ಮಾರ್ಗವನ್ನು ಕಂಡುಕೊಂಡಿದೆ. ಆದರೆ, ಈ ಐಡಿಯಾ ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಿ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ, ಸಾರ್ವಜನಿಕರು ಮತ್ತು ಫೀಡರ್‌ಗಳು ಹೊಸ ನಿಯಮಗಳಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ದಂಡದ ಬಿಸಿ ಮುಟ್ಟುವುದಂತೂ ಖಚಿತ.












Click it and Unblock the Notifications