12 ಗಂಟೆಗಳ ಕಾಲ ಸ್ಪೈಸ್‌ಜೆಟ್ ವಿಮಾನದಲ್ಲಿ ಲಾಕ್ ಆದ ಪ್ರಯಾಣಿಕರು!
ಬೆಂಗಳೂರು ಜುಲೈ 6: ಸ್ಪೈಸ್‌ಜೆಟ್ ಏರ್‌ಲೈನ್ ವಿಮಾನದಲ್ಲಿ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಬರೋಬ್ಬರಿ 12ಕ್ಕೂ ಅಧಿಕ ಗಂಟೆಗಳ ಕಾಲ ಪ್ರಯಾಣಿಕರು ಲಾಕ್ ಆದ ಘಟನೆ ದೆಹಲಿಯಲ್ಲಿ ನಡೆದಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಸುರಕ್ಷಿತವಾಗಿ ಬಂದು ಇಳಿಯುತ್ತಿದ್ದಂತೆ ಪ್ರಯಾಣಿಕರು ಸ್ಪೈಸ್‌ಜೆಟ್ ಏರ್ ಲೈನ್ಸ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಲಾಕ್ ಆಗಿ ಪ್ರಯಾಣಿಕರು ಹಸಿವಿನಿಂದ ಪರದಾಡಿದ್ದಾರೆ. ಜುಲೈ 5ರ ಶುಕ್ರವಾರ ದೆಹಲಿಯಿಂದ ಬೆಂಗಳೂರಿಗೆ ಸಂಜೆ 7.40 ಗಂಟೆಗೆ ಟೇಕಾಫ್ ಆಗಬೇಕಿದ್ದ ಸ್ಪೈಸ್ ಜೆಟ್ ಏರ್‌ಲೈನ್ಸ್‌ನ ವಿಮಾನ SG 8151ನ ಸಿಬ್ಬಂದಿಯಿಂದ ಈ ಎಡವಟ್ಟು ಆಗಿದೆ. ಇದರಿಂದಾಗಿ ಪ್ರಯಾಣಿಕರು ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದಾರೆ.

ವಿಮಾನದ ಪೈಲೆಟ್ ಬರದಿರುವುದೇ ಇಷ್ಟು ಅವಾಂತರಕ್ಕೆ ಕಾರಣ ಎಂದು ತಿಳಿದುಬಂದಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಸುಮಾರು 60 ಪ್ರಯಾಣಿಕರು ಸತತ 12 ಗಂಟೆಗೂ ಅಧಿಕ ಸಮಯಗಳ ಕಾಲ ವಿಮಾನದೊಳಗೆ ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
ಊಟ ನೀರು ಇಲ್ಲದೆ ಕೆಲ ಪ್ರಯಾಣಿಕರು ಅಸ್ವಸ್ಥರಾದ ದೃಶ್ಯಗಳು ಕಂಡು ಬಂದಿದೆ. ದೆಹಲಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಬೇಕಿದ್ದ ವಿಮಾನ ಗಂಟೆಗಳು ಕಳೆದರು ಹೊರಟಿಲ್ಲ. ಬರೋಬ್ಬರಿ 12 ಗಂಟೆ ಒಂದು ಇಡೀ ರಾತ್ರಿ ಪ್ರಯಾಣಿಕರು ಕಳೆದಿದ್ದಾರೆ. ಪೈಲಟ್ ಬಂದ ಬಳಿಕೆ ವಿಮಾನ ಟೇಕಾಫ್ ಆಗಿದೆ.
ತಾಂತ್ರಿಕ ದೋಷ ಎಂದು ಶುಕ್ರವಾರ ಸಂಜೆಯಿಂದ ಬೆಳಗ್ಗಿನವರೆಗೂ ದೆಹಲಿ ಏರ್‌ಪೋರ್ಟ್‌ನಲ್ಲೇ ವಿಮಾನವನ್ನು ನಿಲ್ಲಿಸಿ ಪ್ರಯಾಣಿಕರನ್ನು ಹೊರಗೆ ಬಿಡದೆ ಎಡವಟ್ಟು ಮಾಡಿದ್ದಾರೆ. ವಿಮಾನದಲ್ಲಿ ಲಾಕ್ ಆದ 60 ಕ್ಕೂ ಅಧಿಕ ಪ್ರಯಾಣಿಕರಿದ್ದು ಅದರಲ್ಲಿ ವಿದೇಶದಿಂದ ಬಂದವರು, ವೃದ್ಧರು, ಮಕ್ಕಳು, ಸೇರಿದಂತೆ ಮಹಿಳೆಯರು ಸಹಿತ ಇದ್ದು ಸಂಕಷ್ಟಕ್ಕೆ ಸಿಲುಕಿದ್ದರು.
ಏರ್ ಲೈನ್ಸ್ ನ ನಿರ್ಲಕ್ಷ್ಯ ಹಾಗೂ ಸಿಬ್ಬಂದಿ ವರ್ತನೆಯಿಂದ ರೊಚ್ಚಿಗೆದ್ದ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ ಕೆಲ ಪ್ರಯಾಣಿಕರ ಮೊಬೈಲ್ ಕಿತ್ತುಕೊಂಡು ಹೊಡೆದು ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ.
ಅಲ್ಲದೇ ಪ್ರಯಾಣಿಕರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡದೆ ಬೇಜವಾಬ್ದಾರಿ ಮೆರೆದಿದ್ದು, ಬೆಳಗ್ಗಿನವರೆಗೆ ಪ್ರಯಾಣಿಕರು ಹಸಿವಿನಿಂದ ಪರದಾಡಿದರು. ಪ್ರಯಾಣಿಕರು ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಫ್ಲೈಟ್ ಟಿಕೆಟ್ ಖರೀದಿಸಿದರೂ ಸಮರ್ಪಕ ಸೇವೆ ಸೀಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದು ಸ್ಪೈಸ್‌ಜೆಟ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸಲಿಗೆ ಆ ಫ್ಲೈಟ್‌ನಲ್ಲಿ ಪೈಲಟ್ ಅವರೇ ಇರಲಿಲ್ಲ ಅನ್ನೋದು ಗೊತ್ತಾಗಿದೆ. ಸಿಬ್ಬಂದಿಗಳು ತಾಂತ್ರಿಕ ದೋಷ ಎಂದು ಸಮಾಜಾಯಿಷಿ ನೀಡಿದ್ದಾರೆಂದು ತಿಳಿದು ಬಂದಿದೆ. ಬೆಳಗ್ಗೆ ಏಳು ಗಂಟೆಗೆ ಪೈಲಟ್ ಬಂದ ಬಳಿಕ ವಿಮಾನ ಟೇಕಾಫ್ ಆಗಿದೆ.












Click it and Unblock the Notifications