ನಮ್ಮ ಮೆಟ್ರೋ ಪ್ರಯಾಣಿಕರು, ಪಾದಾಚಾರಿ, ಸವಾರರಿಗೆ ಬೆಂಗಳೂರು ದಕ್ಷಿಣ ಪಾಲಿಕೆಯಿಂದ ಗುಡ್‌ನ್ಯೂಸ್
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ, ಪಾದಾಚಾರಿ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮಹತ್ವ ಕ್ರಮ ಕೈಗೊಳ್ಳುತ್ತಿದೆ. ರಾಜಕಾಲುವೆ ಹೂಳು ತೆಗೆಯುವುದು, ಸರ್ವೇ ಮತ್ತು ಮೆಟ್ರೋ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ, ಸೂಕ್ತ ಕ್ರಮ ಜರುಗಿಸುವಂತೆ ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಜೆ.ಪಿ.ನಗರ 4ನೇ ಹಂತದ ಮೆಟ್ರೋ ನಿಲ್ದಾಣದ ಬಳಿ ಆಯುಕ್ತ ಕೆ. ಎನ್. ರಮೇಶ್ ಅವರು ಗುರುವಾರ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಜೆ.ಪಿ. ನಗರ 4ನೇ ಹಂತದ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳು, ಪಾದಚಾರಿ ಮಾರ್ಗ ಹಾಗೂ ವೈಷ್ಣವಿ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಹಾದು ಹೋಗುವ ಮಳೆನೀರು ಕಾಲುವೆ (SWD) ಖುದ್ದು ಪರಿಶೀಲಿಸಿ, ಅಗತ್ಯ ಸೂಚನೆ ನೀಡಿದರು.

ಮೆಟ್ರೋ ನಿಲ್ದಾಣ ಬಳಿ ಫುಟ್‌ಪಾತ್ ವಿಸ್ತರಣೆಗೆ ಕ್ರಮ
ಮೆಟ್ರೋ ನಿಲ್ದಾಣದ ಬಳಿ ಸುಗಮ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ನಿರ್ದೇಶನ
ಗ್ರೇಟರ್ ಬೆಂಗಳೂರು ಸಚಿವ ಕೃಷ್ಣ ಬೈರೇಗೌಡ ಅವರು ಇತ್ತೀಚೆಗೆ ನಿರ್ದೇಶಿಸಿದ್ದರು. ಇಲ್ಲಿನ ಮೆಟ್ರೋ ನಿಲ್ದಾಣದಿಂದ ಹೊರ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಪಾದಚಾರಿ ಮಾರ್ಗವನ್ನು ಮತ್ತಷ್ಟು ವಿಸ್ತರಿಸಿ ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.
ಮುಖ್ಯ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ, ಸರ್ವಿಸ್ ರಸ್ತೆಯ ಕಡೆಗೆ ವಿಭಜಕ ಅಳವಡಿಸಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ವ್ಯವಸ್ಥಿತ ನಿಲುಗಡೆಗೆ ಸ್ಥಳ ನಿಗದಿಪಡಿಸುವಂತೆ ಬಿಎಂಆರ್‌ಸಿಎಲ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರು ಹೇಳಿದರು.
ರಾಜಕಾಲುವೆ ಸೇತುವೆಗಿರುವ ಮೆಟ್ಟಿಲು, ಸಂಚಾರಕ್ಕೆ ಅಡಚಣೆ
ಬನ್ನೇರುಘಟ್ಟ ರಸ್ತೆಯ ರಾಯಲ್ ಓಕ್ ಶೋರೂಮ್ ಪಕ್ಕದ ರಸ್ತೆಯ ಮಾರ್ಗದಲ್ಲಿ ಬರುವ ರಾಜ ಕಾಲುವೆ ಸೇತುವೆಗೆ ಅನಧಿಕೃತ ವ್ಯಕ್ತಿಗಳು ಮೆಟ್ಟಿಲುಗಳನ್ನು ನಿರ್ಮಿಲಾಗಿದೆ. ಇದರಿಂದ ವಾಹನ ಸಂಚಾರಕೆ ಅಡೆ ತಡೆ ಉಂಟಾಗಿದ್ದು ಕೂಡಲೇ ತೆರವುಗೊಳಿಸಿ ಇಳಿಜಾರು ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದುವರೆದು, ಕಟ್ಟೆ ಮುನೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಖಾಲಿ ಪ್ರದೇಶದಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸುಂತೆ ತಿಳಿಸಿದರು.
ಮೂಲ ರಾಜಕಾಲುವೆ ಮಾರ್ಗದ ಸರ್ವೇ
ವೈಷ್ಣವಿ ಅಪಾರ್ಟ್‌ಮೆಂಟ್ ಮತ್ತು ಕಲ್ಯಾಣಿ ಮ್ಯಾಗ್ನಮ್ ಎದುರಿಗೆ ಸಾರಕ್ಕಿ ಕೆರೆ ಕಡೆಯಿಂದ ರಾಜಕಾಲುವೆಯಲ್ಲಿ ಬರುವ ನೀರು ಮಡಿವಾಳ ಕೆರೆಗೆ ಹರಿದು ಹೋಗುವ ಈ ಮಾರ್ಗದಲ್ಲಿ ಕಾಲುವೆ ಮುಚ್ಚಲಾಗಿದೆ. ಅಲ್ಲಿ ಸ್ಲ್ಯಾಬ್ ನಿಂದ ಕವರ್ ಮಾಡಲಾಗಿದೆ. ಕೃತಕ ತಿರುವು ನೀಡಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಕಂದಾಯ ಇಲಾಖೆಯ ದಾಖಲೆಗಳ ಅನುಸಾರ ರಾಜ ಕಾಲುವೆಯ ನೈಜ ಹರಿವಿನ ಜಾಗ ಸೇರ್ವೆ ನಡೆಸಬೇಕು.
ಅಡೆತಡೆ ತೆರವು, ಹೂಳೆತ್ತಲು ಕಟ್ಟುನಿಟ್ಟಿನ ಕ್ರಮ
ರಾಜಕಾಲುವೆಯ ಒಳಭಾಗದಲ್ಲಿ ಕಟ್ಟಡ ತ್ಯಾಜ್ಯ, ಘನತ್ಯಾಜ್ಯ ಸಿಲುಕಿ ತ್ಯಾಜ್ಯ ನೀರು ನಿಂತು ದುರ್ವಾಸನೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ರೇನ್‌ಬೋ ಆಸ್ಪತ್ರೆ ಹಿಂಭಾಗ ಮತ್ತು ಕಾಂಪೌಂಡ್ ಗೋಡೆ ಇರುವ ಜಾಗದಲ್ಲಿ ಹೂಳೆತ್ತುವ ಕಾಮಗಾರಿ ನಡೆಸಬೇಕು. ರಾಜಕಾಲುವೆ ಮೇಲ್ಭಾಗದಲ್ಲಿ ಹಾಕಿರುವ ಅನಧಿಕೃತ ಸ್ಲ್ಯಾಬ್‌ಗಳು ಮತ್ತು ಅಡೆತಡೆಗಳನ್ನು ತೆರವುಗೊಳಿಸಿ, ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಪ್ರವಾಹದ ಸ್ಥಿತಿ ನಿರ್ಮಾಣವಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು.


Click it and Unblock the Notifications
