Digital Arrest: 18 ದಿನದಲ್ಲೇ ಬರೋಬ್ಬರಿ ₹11.8 ಕೋಟಿ ಕಳೆದುಕೊಂಡ ಬೆಂಗಳೂರು ಟೆಕ್ಕಿ; ಆಗಿದ್ದೇನು?
ತಂತ್ರಜ್ಞಾನ ಮುಂದುವರೆದಂತೆ ಮನುಷ್ಯನ ಕೆಲಸ ಸುಲಭವಾಗುತ್ತಿದೆ. ಅದೇ ತಂತ್ರಜ್ಞಾನ ಬಳಸಿಕೊಂಡು ವಂಚಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇತ್ತೀಚೆಗೆ 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಇದೇ ರೀತಿಯ ವಂಚನೆಗೆ ಬಲಿಯಾಗಿದ್ದು 18 ದಿನಗಳಲ್ಲಿ 11.8 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ವರದಿಯಾದ ಅತಿ ದೊಡ್ಡ ಸೈಬರ್ ಅಪರಾಧ ಇದಾಗಿದ್ದು, ನವೆಂಬರ್ 25 ರಿಂದ ಡಿಸೆಂಬರ್ 12ರ ನಡುವೆ ವಂಚನೆ ನಡೆದಿದೆ. ಹೆಬ್ಬಾಳದ ಜಿಕೆವಿಕೆ ಲೇಔಟ್‌ನಲ್ಲಿ ವಾಸವಾಗಿರುವ 39 ವರ್ಷದ ಸಾಫ್ಟ್‌ವೆರ್ ಇಂಜಿನಿಯರ್ ವಂಚನೆಗೆ ಒಳಗಾಗಿದ್ದು ಡಿಸೆಂಬರ್ 12ರಂದು ಈ ಸಂಬಂಧ ಈಶಾನ್ಯ ಸಿಇಎನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ವಂಚನೆ ನಡೆದಿದ್ದು ಹೇಗೆ?
ಸಾಮಾನ್ಯ ಪ್ರಕರಣಗಳಿಂತ ಈ ಪ್ರಕರಣದಲ್ಲಿ ಹೆಚ್ಚಿನ ಮೊತ್ತವನ್ನು ವಂಚಿಸಲಾಗಿದೆ. ನವೆಂಬರ್ 11ರಂದು ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (ಟ್ರಾಯ್) ಅಧಿಕಾರಿ ಎಂದು ಹೇಳಿಕೊಂಡಿರುವ ವಂಚಕ ಕರೆ ಮಾಡಿದ್ದು, ಟೆಕ್ಕಿಯ ಆಧಾರ್‌ಗೆ ಲಿಂಕ್ ಮಾಡಲಾದ ಸಿಮ್ ಕಾರ್ಡ್ ಅನ್ನು ಅಕ್ರಮ ಜಾಹೀರಾತುಗಳು ಮತ್ತು ಕಿರುಕುಳ ಸಂದೇಶಗಳಿಗಾಗಿ ಬಳಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಮುಂಬೈನ ಕೊಲಾಬಾ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೂಡ ಹೇಳಿದ್ದಾರೆ.
ಸ್ವಲ್ಪ ಸಮಯದ ಬಳಿಕ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿರುವ ಮತ್ತೊಬ್ಬ ವ್ಯಕ್ತಿ ಹಣ ವರ್ಗಾವಣೆಗಾಗಿ ಬ್ಯಾಂಕ್ ಖಾತೆ ತೆರೆಯಲು ನಿಮ್ಮ ಆಧಾರ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ಎಚ್ಚರಿಕೆ ನೀಡಿ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಸೂಚನೆ ಕೊಟ್ಟಿದ್ದಾನೆ.
ಆನ್‌ಲೈನ್ ಮುಖಾಂತರವೇ ತನಿಖೆ ನಡೆಸಲಾಗುತ್ತಿದ್ದು ಇದಕ್ಕೆ ಸಹಕರಿಸದೇ ಇದ್ದರೆ ಬಂಧಿಸಿ ವಿಚಾರಣೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಟೆಕ್ಕಿಗೆ ಸ್ಕೈಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲು ಸೂಚನೆ ಕೊಟ್ಟಿದ್ದು, ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತೊಯೊಬ್ಬ ಟೆಕ್ಕಿಗೆ ವಿಡಿಯೋ ಕರೆ ಮಾಡಿದ್ದು ತಾನು ಮುಂಬೈ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದು ನಿಮ್ಮ ಆಧಾರ್ ಬಳಸಿ ಉದ್ಯಮಿ ನರೇಶ್ ಗೋಯಲ್ ಬ್ಯಾಂಕ್ ಖಾತೆ ತೆರೆದು 6 ಕೋಟಿ ರೂಪಾಯಿ ವಹಿವಾಟು ಮಾಡಿದ್ದಾರೆ ಎಂದು ಹೇಳಿದ್ದಾರೆ.
ನವೆಂಬರ್ 25ರಂದು ಹಿರಿಯ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಮತ್ತೊಬ್ಬ ವಿಡಿಯೋ ಕರೆ ಮಾಡಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ, ತಪ್ಪಿದ್ದಲ್ಲಿ ಆ ವ್ಯಕ್ತಿಯ ಕುಟುಂಬವನ್ನು ಬಂಧಿಸುವುದಾಗಿ ಹೇಳಿದ್ದು. ಬಳಿಕ ನಕಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾರ್ಗಸೂಚಿ ಬಗ್ಗೆ ತಿಳಿಸಿದ್ದು ಪರಿಶೀಲನೆ ಮಾಡಲು ತಾನು ಹೇಳುವ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಟೆಕ್ಕಿಗೆ ಸೂಚನೆ ಕೊಟ್ಟಿದ್ದಾರೆ.
ಬಂಧನದ ಭೀತಿಯಲ್ಲಿದ್ದ ಟೆಕ್ಕಿ ಮೊದಲು ಒಂದು ಖಾತೆ 75 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದು ಕೆಲವು ದಿನಗಳ ನಂತರ ಇನ್ನೊಂದು ಖಾತೆಗೆ 3.41 ಕೋಟಿ ರೂಪಾಯಿ ವರ್ಗಾಯಿಸಿದ್ದಾರೆ. ಇದೇ ರೀತಿ ವಂಚಕರು ಹೇಳಿರುವ ವಿವಿಧ ಖಾತೆಗಳಿಗೆ 18 ದಿನಗಳಲ್ಲಿ 11.8 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವ ಸಂಗತಿ ಟೆಕ್ಕಿ ಗಮನಕ್ಕೆ ಬಂದಿದ್ದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಟೆಕ್ಕಿ ದೂರನ್ನು ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಅಪರಿಚಿತ ಸಂಖ್ಯೆಯಿಂದ ಬ್ಯಾಂಕ್ ಪ್ರತಿನಿಧಿ, ಆದಾಯ ತೆರಿಗೆ ಇಲಾಖೆ ಅಧಿಕಾರಿ, ಪೊಲೀಸರು ಎನ್ನುವ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಬ್ಯಾಂಕ್ ವಿವರ, ಹಣ ವರ್ಗಾವಣೆ ಬಗ್ಗೆ ಮಾಹಿತಿ ಕೇಳಿದರೆ ಅಥವಾ ಬೆದರಿಕೆ ಹಾಕಿದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Photo credit: This is an AI generated article image through WISE












Click it and Unblock the Notifications