Bengaluru Second Airport: ಈ ಭಾಗದಲ್ಲಿ ಬೆಂಗಳೂರು 2ನೇ ವಿಮಾನ ನಿಲ್ದಾಣ ನಿರ್ಮಾಣ ಆಗಲ್ಲ!
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ನಿಂತಲ್ಲೇ ನಿಂತಿದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣಗಳ ಅಭಿವೃದ್ಧಿ ಪ್ರಾಧಿಕಾರದ ತಂಡವು ಬೆಂಗಳೂರಿಗೆ ಬಂದು ಈಗಾಗಲೇ ಅಧ್ಯಯನ ಮಾಡಿಕೊಂಡು ಹೋಗಿದೆ. ಆದರೆ, ಇಲ್ಲಿಯ ವರೆಗೆ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಯಾವುದೇ ಅಪ್ಡೇಟ್ಸ್ ಬಂದಿಲ್ಲ. ಅಲ್ಲದೇ ಬೆಂಗಳೂರಿನ ವಿಮಾನ ನಿಲ್ದಾಣಕ್ಕಿಂತ ನೆರೆಯ ತಮಿಳುನಾಡಿನ ಹೊಸೂರಿನಲ್ಲೇ ವಿಮಾನ ನಿಲ್ದಾಣ ಪ್ರಕ್ರಿಯೆಗಳು ವೇಗವಾಗಿ ನಡೆದಿವೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪ್ಲ್ಯಾನ್ ಹಾಗೂ ಕೇಂದ್ರದಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಪ್ರಭಾವವೂ ಕಾರಣ ಎಂದು ಹೇಳಲಾಗುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಆದರೆ, ಡಿ.ಕೆ ಶಿವಕುಮಾರ್ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ಟಕ್‌ಆಫ್ ಫೈಟ್ ನಡೆಯುತ್ತಿದೆ. ಈ ಕಾರಣಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಫೈನಲ್ ಮಾಡಿರುವ ಕನಕಪುರ ಹಾಗೂ ಮಾಗಡಿ ರೋಡ್ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಅನುಮಾನ ಅಂತಲೇ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಪ್ರಕ್ರಿಯೆ ವಿಳಂಬವಾಗುತ್ತಿದೆ ಅಂತಲೂ ಹೇಳಲಾಗುತ್ತಿದೆ.

ಇನ್ನು ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರ ಬಂದಾಗ ಖುದ್ದು ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ ದೇವೇಗೌಡ ಅವರು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಅಲ್ಲದೇ ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆ ಇದೆ ಎಂದಿದ್ದರು. ಇದೇ ಸಂದರ್ಭದಲ್ಲಿ ತಮಿಳುನಾಡಿನ ಸಂಸದರು ಸಹ ನಮಗೂ ವಿಮಾನ ನಿಲ್ದಾಣದ ಅವಶ್ಯಕತೆ ಇದೆ ಎಂದಿದ್ದರು. ಆದರೆ, ಕೇಂದ್ರ ಸರ್ಕಾರವು ಬೆಂಗಳೂರಿನ ಅಭಿವೃದ್ಧಿ ಹಾಗೂ ಬೆಂಗಳೂರಿನ ವೇಗವನ್ನು ನೋಡಿದಾಗ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅವಶ್ಯಕತೆ ಇದೆ ಎಂದು ಒಪ್ಪಿಕೊಂಡಿತ್ತು. ಅಲ್ಲದೇ ಪ್ರಸ್ತಾವನೆ ಸಲ್ಲಿಕೆ ಮಾಡಿದರೆ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕ್ರಿಯೆಯನ್ನು ವೇಗಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರವೇ ಹೇಳಿತ್ತು.
ಇದೀಗ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಕೆ ಮಾಡಿ, ಕೇಂದ್ರ ತಂಡ ಅಧ್ಯಯನ ಮಾಡಿ ಒಂದೂವರೆ ತಿಂಗಳ ಮೇಲಾದರೂ ಸಹ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಇದರಲ್ಲಿ ರಾಜಕೀಯವಾಗಿ ಕ್ರೆಡಿಟ್ ತೆಗೆದುಕೊಳ್ಳುವ ಪ್ಲ್ಯಾನ್ ಕ್ಲಾಶ್‌ಸಹ ಆಗುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications