Bengaluru Second Airport: ಎರಡನೇ ಏರ್‌ಪೋರ್ಟ್ ಸ್ಥಳ ಫೈನಲ್; ರೇಸ್‌ನಿಂದ ನೆಲಮಂಗಲ ಔಟ್!
ಬೆಂಗಳೂರು, ನವೆಂಬರ್ 20: ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಈಗಾಗಲೇ ಅದರ ಸಾಮರ್ಥ್ಯವನ್ನು ಮೀರಿರುವುದರಿಂದ, ಮುಂದಿನ ಹತ್ತು ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಹೀಗಾಗಿ ಎರಡನೇ ವಿಮಾನ ನಿಲ್ದಾಣ ಅಗತ್ಯ ಎಂದು ಸಿದ್ದರಾಮಯ್ಯ ಅವರ ಸರ್ಕಾರ ಭಾವಿಸಿದೆ. ಆದರೆ, ಸೂಕ್ತವಾದ ಭೂಮಿಯನ್ನು ಗುರುತಿಸುವುದೇ ಸರಕಾರಕ್ಕೆ ಅತೀ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ವರದಿ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಸ್ಥಳವನ್ನು ಫೈನಲ್ ಮಾಡಿದೆ. ಈಗಾಗಲೇ ಶಾರ್ಟ್ ಲಿಸ್ಟ್ ಆಗಿದ್ದ ಮೂರು ಸ್ಥಳಗಳ ಪೈಕಿ ನೆಲಮಂಗಲ - ಕುಣಿಗಲ್ ರಸ್ತೆ ಔಟ್ ಆಗಿದ್ದು, ಹೊಸ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಬೆಂಗಳೂರು ದಕ್ಷಿಣದಲ್ಲಿಯೇ ನಿರ್ಮಾಣವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಇತ್ತ ತಮಿಳುನಾಡಿನ ಏರ್‌ಪೋರ್ಟ್‌ಗೆ ಸೆಡ್ಡು ಹೊಡೆಯುವ ತಂತ್ರಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲಿಯೇ ಹೊಸ ವಿಮಾನ ನಿಲ್ದಾಣ ನಿರ್ಮಾಣ ಆಗಲಿದೆ.

ಬೆಂಗಳೂರು ನಗರದ ಎರಡನೇ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣದಲ್ಲೇ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮೂರು ಸ್ಥಳಗಳ ಬಗ್ಗೆ ಸರ್ಕಾರ ವರದಿಯನ್ನು ನೀಡಿತ್ತು. ಇದರ ಬೆನ್ನಲ್ಲೇ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಮೂಲಕ ಮೂರು ಸ್ಥಳಗಳ ಪೈಕಿ ನೆಲಮಂಗಲ ಬಳಿಯ ಸ್ಥಳ ರೇಸ್‌ನಿಂದ ಔಟ್ ಆಗಿದ್ದು, ಕನಕಪುರ ರಸ್ತೆಯಲ್ಲಿಯೇ ಹೊಸ ಏರ್‌ಪೋರ್ಟ್ ನಿರ್ಮಾಣವಾಗುವುದು ಖಚಿತ ಎನ್ನಲಾಗಿದೆ.
ಈಗಾಗಲೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಮೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿತ್ತು. ಇವುಗಳಲ್ಲಿ ಎರಡು ಸ್ಥಳಗಳು ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಕನಕಪುರ ರಸ್ತೆಯಲ್ಲಿವೆ. ಒಂದು ಕಗ್ಗಲಿಪುರ ಸಮೀಪ ಮತ್ತು ಇನ್ನೊಂದು ಹಾರೋಹಳ್ಳಿ ಬಳಿ ಗುರುತಿಸಲಾಗಿದೆ. ಮತ್ತೊಂದು ಸ್ಥಳವು ಕುಣಿಗಲ್ ರಸ್ತೆಯ ನೆಲಮಂಗಲದ ಬಳಿ ಇದೆ. ಈ ಮೂರು ಸ್ಥಳಗಳನ್ನು ಎಎಐ ಅಧ್ಯಯನ ನಡೆಸಿತ್ತು. ಕಳೆದ ಏಪ್ರಿಲ್ ನಲ್ಲಿ ವರದಿಯನ್ನು ಕೂಡ ಸಲ್ಲಿಸಿತ್ತು. ಆದರೆ, ವರದಿಯಲ್ಲಿ ಯಾವುದೇ ಸ್ಥಳವೂ ಸಹ ಫೈನಲ್ ಮಾಡಿರಲಿಲ್ಲ. ಈ ಮೂರು ಸ್ಥಳವೂ ಸಾಕಷ್ಟು ಸವಾಲುಗಳನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಎರಡನೇ ವಿಮಾನ ನಿಲ್ದಾಣವನ್ನ ನೆಲಮಂಗಲ ಭಾಗದಲ್ಲಿ ನಿರ್ಮಿಸುವುದು ಬಹಳ ಕಷ್ಟಕರವಾಗಿದೆ. ಏಕೆಂದರೆ, ನೆಲಮಂಗಲ ಭಾಗದಲ್ಲಿ ಕಲ್ಲಿನ ಗುಡ್ಡಗಳಿದ್ದು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ನೆಲವನ್ನು ಸಮತಟ್ಟು ಮಾಡಲು ಭಾರಿ ಪ್ರಮಾಣದ ಖರ್ಚು ಮಾಡಬೇಕಾಗುತ್ತದೆ. ಇನ್ನು ಕನಕಪುರ ರಸ್ತೆಯ ಚೂಡಹಳ್ಳಿ ಮತ್ತು ಸೋಮನಹಳ್ಳಿ ಭಾಗದಲ್ಲೂ ಕಲ್ಲಿನ ಭೂಪ್ರದೇಶ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಾಮೀಪ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಪ್ರದೇಶದಲ್ಲಿ ಪರಿಸರ ಇಲಾಖೆಯ ಅನುಮತಿ ಪಡೆಯುವುದು ಮತ್ತು ರಕ್ಷಣಾ ಇಲಾಖೆಯ ವಾಯುಪ್ರದೇಶದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ಬೆಂಗಳೂರು ದಕ್ಷಿಣದ ಕನಕಪುರ ರಸ್ತೆಯಲ್ಲೇ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ.












Click it and Unblock the Notifications