ಸರ್ಕಾರದ ಹೊಣೆಗೇಡಿತನದಿಂದ ಬೆಂಗಳೂರಿಗೆ ದುಸ್ಥಿತಿ: ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 08: ರಾಜಕಾಲುವೆ ಮತ್ತು ಕೆರೆಗಳ ಹೂಳು ತೆಗೆಯಿಸದೆ, ಒತ್ತುವರಿ ತೆರವುಗೊಳಿಸದೆ ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಮತ್ತು ಸರ್ಕಾರ ಹೊಣೆಗೇಡಿಯಾಗಿದ್ದರಿಂದಲೇ ಸಿಲಿಕಾನ್ ಸಿಟಿಯ ನಿವಾಸಿಗಳು ಈ ಮಳೆಯಲ್ಲಿ ಹೈರಾಣಾಗಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸರ್ಕಾರದ ನಿರ್ಲಕ್ಷ್ಯತೆಯ ಪರಿಣಾಮ ಮಹಾನಗರದ ಜನತೆ ಅಪಾರ ನಷ್ಟ ಅನುಭವಿಸಿದ್ದಾರೆ. ಮಳೆ, ಪ್ರವಾಹದ ಕಾರಣಕ್ಕೆ ಸಂಭವಿಸಿದ ಅನಾಹುತಗಳಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡುವುದರಲ್ಲೂ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಸರ್ಕಾರಕ್ಕೆ ಬೆಂಗಳೂರು ನಿವಾಸಿಗಳು ಛೀಮಾರಿ ಹಾಕುತ್ತಿರುವುದು ಸರಿಯಾಗಿದೆ ಎಂದು ಎಂದು ಅವರು ಕಿಡಿ ಕಾರಿದ್ದಾರೆ.
Recommended Video
ಮಳೆಯಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಅಹವಾಲು ಮತ್ತು ಕಷ್ಟಗಳನ್ನು ಕೇಳಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಸರ್ಕಾರ ತನ್ನ ಅವಧಿಯಲ್ಲಿ ಆಗುತ್ತಿರುವ ಅನಾಹುತಗಳಿಗೆಲ್ಲಾ ಹಿಂದಿನ ಸರ್ಕಾರ ಕಾರಣ ಎನ್ನುವ ನೆಪ ಹೇಳುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಉಂಡಾಡಿ ಗುಂಡನಂತೆ ಮೈಗಳ್ಳರಾಗಿದ್ದಾರೆ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ 1953 ಒತ್ತುವರಿ ಪ್ರಕರಣಗಳನ್ನು ಪತ್ತೆ ಹಚ್ಚಿ 1300 ಒತ್ತುವರಿಗಳನ್ನು ತೆರೆವುಗೊಳಿಸಿದ್ದೆವು. ಈ ದಾಖಲೆಗಳು ಸರ್ಕಾರದ ಬಳಿಯಲ್ಲೇ ಇವೆ. ಮುಖ್ಯಮಂತ್ರಿ ಮತ್ತು ಮಂತ್ರಿಗಳು ಮೈಗಳ್ಳತನ ಬಿಟ್ಟು ಗಮನಿಸಲಿ. ನಮ್ಮ ಸರ್ಕಾರದ ಅವಧಿಯಲ್ಲಿ ಒತ್ತುವರಿ ತೆರವುಗೊಳಿಸಿದ್ದು ಮಾತ್ರವಲ್ಲದೆ ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿ ಯೋಜನೆಗಳನ್ನು ಮಾಡಿದ್ದರಿಂದ ಚಿಕ್ಕಬಳ್ಳಾಪುರ, ಕೋಲಾರ, ಆನೇಕಲ್‍ನ ಕೆರೆಗಳಿಗೆ ಜೀವ ಬಂದಿದೆ. ಮೊದಲು 2000 ಅಡಿಗಳಿಗೆ ಬೋರ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಈಗ 200-300 ಅಡಿಗಳಿಗೆಲ್ಲಾ ಬೋರ್ ನೀರು ದೊರಕುತ್ತಿದೆ.
ಈ ಭಾಗದ ಜನರನ್ನು ಕೇಳಿದರೆ ನಮ್ಮ ಸರ್ಕಾರದ ಅವಧಿಯಲ್ಲಾದ ಕೆಲಸಗಳನ್ನು ಅವರೇ ಸರ್ಕಾರಕ್ಕೆ ತೋರಿಸುತ್ತಾರೆ. ಈ ಎರಡು ವ್ಯಾಲಿ ಯೋಜನೆಗಳು ಆಗದೇ ಇದ್ದಿದ್ದರೆ ಈ ಮಳೆಗೆ ಬೆಂಗಳೂರಿನ ಪ್ರವಾಹ ಪರಿಸ್ಥಿತಿ, ಅನಾಹುತಗಳ ಪ್ರಮಾಣ ಇನ್ನೂ ವಿಪರೀತ ಆಗಿರುತ್ತಿತ್ತು. ಅನಾಹುತಗಳಿಗೆಲ್ಲಾ ಹಿಂದಿನ ಸರ್ಕಾರದ ಮೇಲೆ ಹೇಳುವ ಮುಖ್ಯಮಂತ್ರಿ ಬೊಮ್ಮಾಯಿ ಅವರು, ರಾಜಕಾಲುವೆ ಹೂಳೆತ್ತಲು ಸಾವಿರಾರು ಕೋಟಿ ಕೊಟ್ಟಿದ್ದೇವೆ ಎನ್ನುತ್ತಾರೆ. ಇಲ್ಲಿ ಕೆಲಸಗಳೇ ಆಗಿಲ್ಲ. ಹಾಗಾದರೆ ನೀವು ಕೊಟ್ಟ ದುಡ್ಡು ಯಾರ ಜೇಬು ಸೇರಿತು. ಕೆಲಸ ಆಗಿದ್ದರೆ ಇಷ್ಟೊಂದು ಅನಾಹುತ ಆಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ರಾಜಕಾಲುವೆ ಮೇಲೆ ರಸ್ತೆ ನಿರ್ಮಿಸಿರುವುದನ್ನು ನಾನು ಕಣ್ಣಾರೆ ನೋಡಿದೆ. ಶ್ರೀಮಂತರಿಗೆ ಅನುಕೂಲ ಮಾಡಿಕೊಡಲು ಖಾಸಗಿ ವ್ಯಕ್ತಿ ರಾಜಕಾಲುವೆ ಮೇಲೆ ರಸ್ತೆ ಮಾಡಿದ್ದಾನೆ. ಸುಮ್ನೆ ಮಾಡಿಬಿಡ್ತಾನಾ? ಇದರಿಂದ ಮಂತ್ರಿಗಳಿಗೆ, ಶಾಸಕರಿಗೆ ಎಷ್ಟು ಸಿಕ್ಕಿದೆ ಎನ್ನುವುದನ್ನು ಬಹಿರಂಗಗೊಳಿಸಲಿ. ಐಟಿ ಕಂಪನಿಗಳು ಬೆಂಗಳೂರಿನ ಈ ಹೊತ್ತಿನ ದುಸ್ಥಿತಿಯಿಂದ ಬೇಸತ್ತು ಡಬ್ಬಲ್ ಎಂಜಿನ್ ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಸಿದ್ದಾರೆ. ಇವೆಲ್ಲವನ್ನೂ ನಾನು ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ.

ಸರ್ಕಾರ ಉತ್ತರ ನೀಡಲಿ. ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸಗಳನ್ನು ಮತ್ತು ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರ ಮಾಡಿರುವ ಕೆಲಸಗಳನ್ನೂ ಜನರ ಮುಂದಿಡಲಿ ಎಂದು ಸಿದ್ದರಾಮಯ್ಯ ಹೇಳಿದರು.
ಮಳೆ ಅನಾಹುತಗಳ ಪ್ರದೇಶಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಮಂತ್ರಿ ರಾಮಲಿಂಗಾರೆಡ್ಡಿ ಸೇರಿ ಪಕ್ಷದ ಹಲವು ಮುಖಂಡರು ಸಿದ್ದರಾಮಯ್ಯ ಅವರೊಂದಿಗೆ ಉಪಸ್ಥಿತರಿದ್ದರು.












Click it and Unblock the Notifications