ಹೆದ್ದಾರಿ ದುರಂತದ ಬಳಿಕ ಅಧಿಕಾರಿಗಳು ಅಲರ್ಟ್, ಪೊಲೀಸರ ಜೊತೆಗೆ ಜಂಟಿ ಸಮೀಕ್ಷೆ | Bengaluru Road Incident
ಬೆಂಗಳೂರು ಬೆಳೆದಂತೆಲ್ಲಾ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ, ಬೆಂಗಳೂರು ಹೊರ ವಲಯ ಭಾಗದಲ್ಲಿ ಕೂಡ ಸಿಕ್ಕಾಪಟ್ಟೆ ಟ್ರಾಫಿಕ್ ಕಾಟ ಶುರುವಾಗಿದೆ. ಜನರು ನಗರ ಪ್ರದೇಶದಿಂದ ನೆಮ್ಮದಿ ಬಯಸುತ್ತಾ ಊರಿಂದ ಹೊರಗೆ ಮನೆ ಮಾಡಿದರೂ ಟ್ರಾಫಿಕ್ ಕಿರಿಕಿರಿ ಮಾತ್ರ ತಪ್ಪುತ್ತಿಲ್ಲ. ಇದರ ಜೊತೆಗೆ ಹೊರ ವಲಯಗಳಲ್ಲಿ ದುರಂತಗಳ ಸರಮಾಲೆ ಕೂಡ ಶುರುವಾಗಿದ್ದು, ಸರ್ಕಾರಕ್ಕೆ ಇದು ತಲೆನೋವು ಕೂಡ ತರಿಸಿದೆ. ಹೀಗಿದ್ದಾಗ ಫೆಬ್ರವರಿ 13 ಶುಕ್ರವಾರ ನಡೆದ ಘಟನೆ ಬೆಂಗಳೂರನ್ನು ಮಾತ್ರವಲ್ಲ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಘಟನೆ ನಂತರ ಅಧಿಕಾರಿಗಳು ಕೂಡ ಅಲರ್ಟ್ ಆಗಿ, ಮಹತ್ವದ ಸಮೀಕ್ಷೆಯನ್ನ ಇದೀಗ ಕೈಗೊಂಡಿದ್ದಾರೆ.
ಬೆಂಗಳೂರು ಹೊರವಲಯ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ಎಕ್ಸ್‌ಯುವಿ ಕಾರು ಹಾಗೂ ಬೈಕ್ ಸೇರಿದಂತೆ ಕ್ಯಾಂಟರ್ ನಡುವೆ ಸರಣಿ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಒಟ್ಟು 7 ಜನ ಜೀವ ಬಿಟ್ಟಿದ್ದರು, 6 ವಿದ್ಯಾರ್ಥಿಗಳು ಹಾಗೂ ಓರ್ವ ಉದ್ಯೋಗಿ ಬಲಿಯಾಗಿದ್ದರು. ಅಪಘಾತದ ಬೆನ್ನಲ್ಲೇ ಸ್ಥಳೀಯರು ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣದ ಬಗ್ಗೆ ಆಕ್ರೋಶ ಹೊರಹಾಕಿ, ತನಿಖೆ ನಡೆಸಲು ಒತ್ತಾಯ ಮಾಡಿದ್ದರು. ಹೀಗಾಗಿ ಘಟನೆ ಬಳಿಕ ಅಧಿಕಾರಿಗಳು ಕೂಡ ಅಲರ್ಟ್ ಆಗಿರುವ ರೀತಿ ಕಂಡುಬಂದಿದ್ದು, ಈಗ ಮಹತ್ವದ ಸಮೀಕ್ಷೆ ನಡೆಸಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಸಮೀಕ್ಷೆ ನಡೆಸಿ ಅಪಘಾತ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ.

ವಿದ್ಯಾರ್ಥಿಗಳು ಅಪಘಾತಕ್ಕೆ ಬಲಿಯಾಗಿದ್ದರು
ಹೊಸಕೋಟೆ & ದಾಬಸ್‌ಪೇಟೆ ಹೆದ್ದಾರಿ ಕಳಪೆ ನಿರ್ಮಾಣ ಮತ್ತು ವಿನ್ಯಾಸದ ಕುರಿತು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಘಾತಕ್ಕೆ ಬಲಿಯಾದವರಲ್ಲಿ ಬೈಕ್ ಸವಾರ ಸ್ಥಳೀಯರಾಗಿದ್ದರೆ, ಇನ್ನುಳಿದ ವಿದ್ಯಾರ್ಥಿಗಳು ಬೆಂಗಳೂರು ನಗರದವರು. ಪಿಯು ವಿದ್ಯಾರ್ಥಿಗಳ ಕಾರು ಅತಿವೇಗದಲ್ಲಿದ್ದ ಕಾರಣಕ್ಕೆ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ತನಿಖೆ ನಡೆಯುತ್ತಿದೆ. ಅಪಘಾತದಲ್ಲಿ ಬಲಿಯಾಗಿರುವ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಬೆಂಗಳೂರಿನ ನಿವಾಸಿಗಳು. ಈ ಪೈಕಿ ಕೊತ್ತನೂರು ನಿವಾಸಿ & ಆರ್.ವಿ. ಕಾಲೇಜು ವಿದ್ಯಾರ್ಥಿ ಅಶ್ವಿನ್ ನಾಯರ್, ಎಚ್‌ವಿಆರ್ ಲೇಔಟ್‌ನ ವಿದ್ಯಾರ್ಥಿಗಳಾದ ಅರ್ಹನ್ ಶರೀಫ್, ಅಯನ್ ಅಲಿ, ಭರತ್, ಈತನ್ ಜಾರ್ಜ್, ಫರ್ಹಾನ್ ಅಪಘಾತಕ್ಕೆ ಬಲಿಯಾಗಿದ್ದರು.
ಅಪಘಾತ ನಡೆದ ಸ್ಥಳದಲ್ಲಿ ಎಎಸ್‌ಪಿ ವೆಂಕಟೇಶ್ ಪ್ರಸನ್ನ ನೇತೃತ್ವದಲ್ಲಿ, ಅಧಿಕಾರಿಗಳಿಂದ ಜಾಯಿಂಟ್ ಸರ್ವೆ ನಡೆಸಲಾಗಿದೆ. ಈ ಜಂಟಿ ಸಮೀಕ್ಷೆಯಲ್ಲಿ ಅಪಘಾತ ಸಂಭವಿಸಿದ ಜಾಗದ ಇಂಚಿಂಚು ಪ್ರದೇಶ ಪರಿಶೀಲನೆ ನಡೆದಿದೆ. ಜೊತೆಗೆ ಪಿಡಬ್ಲುಡಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆಯ ವೇಳೆ ಹಾಜರಿದ್ದರು, ಘಟನೆಗೆ ಅಧಿಕಾರಿಗಳು ಮೂಲ ಕಾರಣ ಹುಡುಕುತ್ತಿದ್ದು ಒಂದೇ ವರ್ಷದಲ್ಲಿ ಸಾಲು ಸಾಲು ದುರಂತ ಈ ಜಾಗದಲ್ಲಿ ಸಂಭವಿಸಿದೆ. ನಿನ್ನೆ ಮೃತಪಟ್ಟ 7 ಜನರೂ ಸೇರಿದಂತೆ ಈ ವರ್ಷದಲ್ಲೇ ಒಟ್ಟು 8 ಸಾವು ಸಂಭವಿಸಿರುವುದು ಆತಂಕವನ್ನ ಹೆಚ್ಚು ಮಾಡಿದೆ. ಇದೇ ಕಾರಣಕ್ಕೆ ಈಗ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನ್ಯಾಷನಲ್ ಹೈವೆ ಅಥಾರಿಟಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಕ್ಕಳನ್ನು ಕಳೆದುಕೊಂಡ ಪೋಷಕರ ಕಣ್ಣೀರು
ಹೊಸಕೋಟೆ & ದಾಬಸ್‌ಪೇಟೆ ಹೆದ್ದಾರಿಯಲ್ಲಿ ಮಕ್ಕಳು ಜೀವ ಕಳೆದುಕೊಂಡ ಸುದ್ದಿ ಪೋಷಕರನ್ನು ತೀವ್ರ ನೋವಿಗೆ ತಳ್ಳಿದೆ. ವಿದ್ಯಾರ್ಥಿಗಳ ಪೋಷಕರಿಗೆ ಬೆಳ್ಳಂಬೆಳಗ್ಗೆ ಈ ಸಾವಿನ ಸುದ್ದಿಯು ತಲುಪಿತ್ತು, ಮಕ್ಕಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಏನೂ ತಪ್ಪು ಮಾಡದೆ ತನ್ನ ಪಾಡಿಗೆ ತಾನು ಕೆಲಸಕ್ಕೆ ಹೊರಟಿದ್ದ ಉದ್ಯೋಗಿ ಕೂಡ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಗಗನ್ ಕೆಲಸಕ್ಕೆ ಹೋಗುವಾಗ ಕಾರು ಗುದ್ದಿ ಪ್ರಾಣ ಬಿಟ್ಟಿದ್ದಾರೆ. ಹೀಗಾಗಿ ಈ ಘಟನೆ ಬಗ್ಗೆ ಸೂಕ್ತ ತನಿಖೆಯನ್ನ ನಡೆಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಈ ಒತ್ತಡಗಳ ನಡುವೆ ಖಡಕ್ ತನಿಖೆ ಶುರು ಮಾಡಿದ್ದಾರೆ ಪೊಲೀಸರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.












Click it and Unblock the Notifications