ಮೊದಲ ಬಾರಿ ಬೆಂಗಳೂರಲ್ಲಿ 5012 ಹೊಸ ಕೋವಿಡ್ ಪ್ರಕರಣ ದಾಖಲು
ಬೆಂಗಳೂರು, ಅಕ್ಟೋಬರ್ 07: ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಒಂದೇ ದಿನ 5012 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಕರ್ನಾಟಕದಲ್ಲಿ ಹೆಚ್ಚು ಸೋಂಕಿತರು ಇರುವುದು ಬೆಂಗಳೂರಿನಲ್ಲಿಯೇ.
ಮಂಗಳವಾರದ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 5012 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,57,241.
ಬಿಬಿಎಂಪಿ ಮಾಹಿತಿ ಪ್ರಕಾರ ಅಕ್ಟೋಬರ್ 5ರಂದು 34,336 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಅಕ್ಟೋಬರ್ 4ರಂದು 27,757 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು.

"ಅಕ್ಟೋಬರ್ 4ರ ಕೆಲವು ಮಾದರಿಗಳ ಪರೀಕ್ಷೆ ವರದಿಗಳು ಸೇರಿದ್ದರಿಂದ ನಗರದಲ್ಲಿ 5012 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ" ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಬೆಂಗಳೂರು ನಗರದ ಪಾಸಿಟಿವಿಟಿ ಪ್ರಮಾಣ ಶೇ 13.69ರಷ್ಟಿದೆ. ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಶೇ 18ರಷ್ಟು ಪ್ರಕರಣ ಪತ್ತೆಯಾಗಿದೆ. ದಕ್ಷಿಣದಲ್ಲಿ ಶೇ 16 ಮತ್ತು ಪೂರ್ವದಲ್ಲಿ ಶೇ 15ರಷ್ಟು ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ 3107 ಪುರುಷರು ಮತ್ತು 1095 ಮಹಿಳೆಯರು ಸೇರಿದ್ದಾರೆ. ಬೆಂಗಳೂರು ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 55,736.
ಕರ್ನಾಟಕದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 6,57,705. ಬೆಂಗಳೂರು ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,57,241. ಇದುವರೆಗೂ 198369 ಜನರು ನಗರದಲ್ಲಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 55736. ಇದುವರೆಗೂ ಒಟ್ಟು ಮೃತಪಟ್ಟವರು 3135.












Click it and Unblock the Notifications