Bengaluru Rent: ಗಗನಕ್ಕೇರುತ್ತಿದೆ ಬೆಂಗಳೂರಿನ ಮನೆಗಳ ಬಾಡಿಗೆ- ಜನರ ಮೇಲೆ ಹೊಸ ಹೊರೆ, ಅಂಕಿಅಂಶ, ಮಾಹಿತಿ, ವಿವರ
ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನಂತಹ ಮಹಾನಗರಗಳಲ್ಲಿ ಬಾಡಿಗೆ ಬೆಲೆಗಳು ಗಗನಕ್ಕೇರುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪ್ರತಿದಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರು ಬೆಂಗಳೂರಿನಲ್ಲಿ ಬಾಡಿಗೆ ಮನೆಗಳನ್ನು ಹಿಡಿಯುವುದು ಕಷ್ಟದ ಕೆಲಸವಾಗುತ್ತಿದೆ.
ಬೆಂಗಳೂರಿನ ಉಪನಗರವಾದ ಮಹದೇವಪುರದಲ್ಲಿ ಸಣ್ಣ ಒನ್ ಆರ್ ಕೆ ( ಒಂದು ರೂಮ್ ಮತ್ತು ಕಿಚ್ಚನ್ ) ಮನೆಯ ಬೆಲೆ 12,000 ರೂಪಾಯಿಗಳಾಗಿವೆ ಎಂದು ತಿಳಿದುಬಂದಿದೆ. ಇದು ಮಹಾನಗರದಲ್ಲಿ ಮನೆಗಳ ಬೇಡಿಕೆಯ ವಾಸ್ತವತೆಯನ್ನು ತೋರಿಸುತ್ತದೆ.

ಬೆಂಗಳೂರಿನ ಬಹುತೇಕ ಉಪನಗರಗಳಲ್ಲಿ ತಿಂಗಳಿಗೆ ಒನ್ ಆರ್‌ಕೆ ಬೆಲೆಯು 12,000 ರೂ.ಗಳಾಗಿವೆ. ಇದಕ್ಕೆ 50,000 ರುಪಾಯಿಗಳಿಂದ 1,00,000 ರೂಪಾಯಿಗಳ ವರೆಗೆ ಅಡ್ವಾನ್ಸ್ ಕೇಳಲಾಗುತ್ತಿದೆ.
ರೆಡ್‌ಇಟ್ ವೆಬ್‌ಸೈಟ್‌ನಲ್ಲಿ ಗುರುತಿಸಲಾಗದ ಒನ್ ಆರ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ಬೆಡ್‌ರೂಮ್ ತುಂಬಾ ಇಕ್ಕಟ್ಟಾಗಿದೆ ಎಂದು ಬಾಡಿಗೆದಾರರು ತಮ್ಮ ಆಕ್ರೋಶಗನ್ನು ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ಇಂತಹ ಬಾಡಿಗೆ ದರಗಳು ನ್ಯಾಯಸಮ್ಮತವೇ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಈ ಮನೆಯಲ್ಲಿ ಒಂದು ಸಣ್ಣ ಕಿಟಕಿ ಇದೆ. ಇದು ನೈಸರ್ಗಿಕ ಬೆಳಕಿನ ಏಕೈಕ ಮೂಲವಾಗಿದೆ. ಇದಕ್ಕೆ ತಿಂಗಳಿಗೆ ರೂ 12,000 ಬಾಡಿಗೆ ಮತ್ತು ರೂ 50,000 ಠೇವಣಿ ಇಡಬೇಕಾಗುತ್ತದೆ. ಇದು ಮನುಷ್ಯರು ಬದುಕಲು ಯೋಗ್ಯ ಸ್ಥಳವಲ್ಲ ಎಂದು ಬಾಡಿಗೆದಾರ ಮರುಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಳಕೆದಾರನೊಬ್ಬರು, 'ಇಲ್ಲಿ ಶೌಚಾಲಯವನ್ನು ಮಲಗುವ ಕೋಣೆಯಾಗಿ ಪರಿವರ್ತಿಸಲಾಗಿದೆ' ಎಂದು ನೇರವಾಗಿ ಕಾಮೆಂಟ್ ಮಾಡಿದ್ದಾರೆ.
ಇದು ಅನೇಕ ಬಾಡಿಗೆದಾರರು ಎದುರಿಸುತ್ತಿರುವ ಭೀಕರ ಪರಿಸ್ಥಿತಿಗಳನ್ನು ಎತ್ತಿ ತೋರಿಸುತ್ತದೆ ಎಂದು ಅನೇಕರು ಹೇಳಿದ್ದಾರೆ.
ರಿಯಲ್ ಎಸ್ಟೇಟ್ ಮಾರುಕಟ್ಟೆ ಮೇಲೆ ಕೋವಿಡ್ ಪರಿಣಾಮ
ಕೋವಿಡ್ ಸಾಂಕ್ರಾಮಿಕವು ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ತಜ್ಞರು ಹೇಳಿದ್ದಾರೆ. ಜನರು ಕಡಿಮೆ ಬಾಡಿಗೆ ಮತ್ತು ಹೆಚ್ಚು ವಿಶಾಲವಾದ ಸ್ಥಳಗಳನ್ನು ಅನ್ವೇಷಿಸಲು ಪ್ರಾರಂಭಿಸಿದ್ದಾರೆ. ಈ ಬದಲಾವಣೆಯು ದೊಡ್ಡ ನಗರಗಳಲ್ಲಿ ಬಾಡಿಗೆಗಳ ಬೆಲೆಗಳನ್ನು ಏರಿಸಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಚೇರಿಗೆ ಬಂದು ಕೆಲಸ ಮಾಡಲು ತಿಳಿಸಿದ ಕಂಪನಿಗಳು
ಇಷ್ಟು ದಿನಗಳ ಕಾಲ ವರ್ಕ್ ಫ್ರಂ ಹೋಮ್‌ನಲ್ಲಿದ್ದ ಐಟಿ ಉದ್ಯೋಗಿಗಳಿಗೆ ಕಚೇರಿಗೆ ಬರಲು ಬಹುತೇಕ ಕಂಪನಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಉದ್ಯೋಗಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಲವರು ಹೈಬ್ರಿಡ್ ವರ್ಕ್‌ನಲ್ಲಿ ಇರುವ ಕಾರಣ ಮೈಕ್ರೋ ಅಪಾರ್ಟ್‌ಮೆಂಟ್‌ಗಳ ಬಾಡಿಗೆ ಬೆಲೆಯು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ ಸಿಟಿ, ಮಹದೇವಪುರ, ವೈಟ್‌ಫಿಲ್ಡ್, ಕೆಆರ್ ಪುರಂ, ಮಡಿವಾಳ, ಕೋರಮಂಗಲ ಸೇರಿದಂತೆ ಹಲವಾರು ಏರಿಯಾಗಳಲ್ಲಿ ಬಾಡಿಗೆ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಪಿಜಿಗಳ ಬಾಡಿಗೆಯೂ ಹೆಚ್ಚಳ
ಬೆಂಗಳೂರಿನ ಪಿಜಿಗಳ ಬಾಡಿಗೆ ಬೆಲೆಯಲ್ಲಿಯೂ ಭಾರೀ ಹೆಚ್ಚಳ ಕಂಡುಬಂದಿದೆ. ಕೇಂದ್ರ ಸರ್ಕಾರವು ಪಿಜಿಗಳಿಗೆ ಜಿಎಸ್‌ಟಿ ಹೇರಿದ ಕಾರಣ ಬಾಡಿಗೆಗಳಲ್ಲಿ ಹೆಚ್ಚಳವಾಗಿದೆ.












Click it and Unblock the Notifications