Bengaluru Rains: ನಗರಾದ್ಯಂತ ವ್ಯಾಪಕ ಮಳೆ ದಾಖಲು, 2 ದಿನ ಯೆಲ್ಲೋ ಅಲರ್ಟ್ ಘೋಷಣೆ, ವಿವರ
ಬೆಂಗಳೂರು, ಆಗಸ್ಟ್ 09: ಕರ್ನಾಟಕದಾದ್ಯಂತ ಬಿರುಸುಗೊಂಡಿರುವ ಮುಂಗಾರು ಮಳೆ ರಾಜಧಾನಿ ಬೆಂಗಳೂರಿನಲ್ಲಿ ಅಬ್ಬರಿಸಲು ಶುರುವಿಟ್ಟುಕೊಂಡಿದೆ. ಶನಿವಾರ ಮಧ್ಯಾಹ್ನವೇ ಯಶವಂತಪುರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜೋರು ಮಳೆ ದಾಖಲಾಗಿದೆ. ಪೂರ್ವ ವಲಯದ ಹಾಗೂ ಯಲಹಂಕ ವಲಯ, ಟಿ ದಾಸರಹಳ್ಳಿ, ವಿದ್ಯಾರಣ್ಯಪುರ, ಶಂಕರಮಠ ಸೇರಿದಂತೆ ವ್ಯಾಪ್ತಿಯಲ್ಲಿ ಉತ್ತಮ ಮಳೆ (ಇಂದು ಸಂಜೆ 5ಗಂಟೆವರೆಗಿನ ಮಾಹಿತಿ ಪ್ರಕಾರ) ಆಗಿದ್ದು, ಮುಂದಿನ ಮೂರು ದಿನ ಇದೇ ರೀತಿ ವ್ಯಾಪಕ ಮಳೆಯ ಲಕ್ಷಣಗಳು ಇವೆ.
ನಗರಾದ್ಯಂತ ತಂಪು ವಾತಾವರಣ ಕಂಡು ಬಂದಿದೆ. ಈವರೆಗೆ ಜಿಟಿ ಜಿಟಿ ರೂಪದಲ್ಲಿ ಸುರಿಯುತ್ತಿದ್ದ ಮಳೆ ಇದೀಗ ಬಿರುಸುಗೊಂಡಿದೆ. ನೆನ್ನೆಯಿಂದ ಅಲ್ಲಲ್ಲಿ ಚದುರಿದಂತೆ ಆದ ಸೋನೆ ಮಳೆ ಇಂದು ಮಟ ಮಟ ಮಧ್ಯಾಹ್ನವೇ ಬಿರುಗಾಳಿ ಸಮೇತ ದಾಖಲಾಗಿದೆ. ಬೆಂಗಳೂರು ನಗರದ ಅನೇಕ ಭಾಗಗಳಲ್ಲಿ ಇಂದು ತಡರಾತ್ರಿವರೆಗೆ ವ್ಯಾಪಕ ಮಳೆ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ನಿರೀಕ್ಷೆ ಇದೆ.

ಬೆಂಗಳೂರಿನ ಯಲಹಂಕ ವಲಯದ ಚೌಡೇಶ್ವರಿ ಬಡಾವಣೆ, ಪೂರ್ವ ವಲಯದ ದೇವರ ಜೀವನಹಳ್ಳಿ, ಗಂಗಾನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಉತ್ತಮ ಮಳೆ ಆಗಿದೆ. ನಾಗಸಂದ್ರ, ಎಚ್‌ಆರ್‌ಬಿಆರ್, ಕೋರಮಂಗಳ, ಎಲೆಕ್ಟ್ರಾನಿಕ ಸಿಟಿ, ಹೊರ ಮಾವು, ರಾಜಮಹಲ್ ಗುಟ್ಟಹಳ್ಳಿ, ಸಂಜಯ್‌ನಗರ, ಹೆಬ್ಬಾಳ, ನಾಗವಾರ, ಹೆಸರಘಟ್ಟ ಸೇರಿದಂತೆ ವಿವಿಧೆಡೆ ಮಳೆ ಜೋರಾಗಿತ್ತು. ರಸ್ತೆಗಳಲ್ಲಿ ವಾಹನಗಳ ಸಂಚಾರ ಮಳೆಯಿಂದಾಗಿ ನಿಧಾನಗತಿಯಲ್ಲಿತ್ತು. ಇನ್ನೂ ಬೆಂಗಳೂರು ನಗರದಲ್ಲಿ ಹಗುರ ಮಳೆ ಆಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಆಗಲಿದ್ದು, ಹವಾಮಾನ ಇಲಾಖೆ ಭಾನುವಾರ ಮತ್ತು ಸೋಮವಾರ ಎರಡು ದಿನ ಯೆಲ್ಲೋ ಅಲರ್ಟ್ ನೀಡಿದೆ.
50ಕಿಮೀ. ವೇಗದ ಗಾಳಿ ಸಹಿತ ಭಾರೀ ಮಳೆ
ಇನ್ನೂ ಬೆಂಗಳೂರು ನಗರಾದ್ಯಂತ ಗರಿಷ್ಠ ತಾಪಮಾನ 29 ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಳೆ ಪ್ರದೇಶಗಳಲ್ಲಿ ಬಿಸಿಲಿನ ದರ್ಶನ ಅಪರೂಪವಾಗಿದೆ. ಚಳಿ ಹಾಗೂ ತಂಪಿನ ವಾತಾವರಣ ಕಂಡು ಬಂದಿದೆ. ನಾಳೆ ಮತ್ತು ನಾಡಿದ್ದು, ದೇವನಹಳ್ಳಿ, ಚೆನ್ನರಾಯಪಟ್ಟಣ, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಗಂಟೆಗೆ 40-50ಕಿಲೋ ಮೀಟರ್ ವೇಗದ ಗಾಳಿ ಸಹಿತ ಜೋರು ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರ ಮುನ್ಸೂಚನೆ ನೀಡಿದೆ.












Click it and Unblock the Notifications