Bengaluru Rain: ಬೆಂಗಳೂರಿನಲ್ಲಿ ಅಬ್ಬರದ ಮಳೆ ಯಾವಾಗ ಆರಂಭ? ಹವಾಮಾನ ಇಲಾಖೆ ಹೇಳೋದೇನು?
Bengaluru Rain: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಲ್ಲದೆ ಬಿಸಿಲಿನ ಬೇಗೆಯಿಂದ ಜನರು ಬೇಸತ್ತು ಹೋಗಿದ್ದಾರೆ. ನಗರದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿರುವುದರಿಂದ ಜನರು ಮನೆಯಿಂದ ಹೊರಗಡೆ ಬರಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಮತ್ತೊಂದೆಡೆ ಹಲವೆಡೆ ನೀರಿನ ಹಾಹಾಕಾರವೂ ಶುರುವಾಗಿಬಿಟ್ಟಿದೆ. ಇದೆಲ್ಲದರ ನಡುವೆಯೂ ಮೇ ನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಜನರು ಸೆಖೆ ತಾಳಲಾರದೇ ಮನೆಯಿಂದ ಹೊರಬಂದರೂ ಬಿಸಿಲಿನ ಝಲ ಬಿಡುತ್ತಿಲ್ಲ. ಆದ್ದರಿಂದ ಅಬ್ಬರದ ಮಳೆ ಯಾವಾಗ ಬರುತ್ತದೆಯೋ ಎಂದು ಮೋಡ ನೋಡುತ್ತಾ ಬಕಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಇನ್ನು ಇಂದು (ಏಪ್ರಿಲ್ 27) ಕೂಡ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಇದರ ನಡುವೆಯೂ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.

ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ 38 ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇನ್ನು ಕೆಲವು ದಿನಗಳ ಕಾಲ ರಾಜ್ಯದಲ್ಲಿ ಬಿಸಿಲಿನ ವಾತಾವರಣವೇ ಮುಂದುವರೆಯಲಿದ್ದು, ಮೇ ಮೊದಲ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ.
ಇನ್ನು ಏಪ್ರಿಲ್ 30ರವರೆಗೂ ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೀದರ್, ವಿಜಯನಗರ, ಗದಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ, ಕೊಪ್ಪಳದಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ತಿಳಿಸಿದರು.
ಮೇ ಮೊದಲ ವಾರದಲ್ಲಿ ಬೆಂಗಳೂರು ನಗರ, ವಿಜಯಪುರ, ಹಾಸನ, ಚಿತ್ರದುರ್ಗ, ರಾಯಚೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೀದರ್, ಕಲಬುರಗಿ, ಕೋಲಾರ, ಯಾದಗಿರಿ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications