1997ರ ನಂತರ ಅಕ್ಟೋಬರ್ ತಿಂಗಳಿನ ಗರಿಷ್ಠ ಮಳೆ ದಾಖಲಿಸಿದ ಬೆಂಗಳೂರು
ಬೆಂಗಳೂರು, ಅಕ್ಟೋಬರ್ 05: ಬೆಂಗಳೂರು ನಗರ ಭಾನುವಾರ, ಅಕ್ಟೋಬರ್ 3ರಂದು ಗರಿಷ್ಠ ಪ್ರಮಾಣದ ಮಳೆ ದಾಖಲಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ 1997ರ ನಂತರ ದಾಖಲಾದ ಗರಿಷ್ಠ ಮಳೆ ಪ್ರಮಾಣ ಇದಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಬಿಸಿಲು ಇದ್ದರೂ ಸಂಜೆ ವೇಳೆಗೆ ಗುಡುಗು ಮಿಂಚಿನೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಭಾರೀ ಮಳೆಯಾಗಿದೆ. ಭಾರೀ ಮಳೆಗೆ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಪಶ್ಚಿಮ ಹಾಗೂ ರಾಜರಾಜೇಶ್ವರಿ ನಗರ ವಲಯದಲ್ಲಿ ಅಧಿಕ ಮಟ್ಟದ ಹಾನಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಾದೇಶಿಕ ತಜ್ಞರು ಈ ಸಂಬಂಧ ಮಾಹಿತಿ ನೀಡಿದ್ದು, 'ಬೆಂಗಳೂರಿನಲ್ಲಿ ಭಾನುವಾರ ಒಟ್ಟಾರೆಯಾಗಿ 63.8 ಮಿ.ಮೀ. ಮಳೆಯಾಗಿದೆ. ಅದರಲ್ಲಿ ನಾಗರಭಾವಿ ಪ್ರದೇಶದಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ' ಎಂದು ತಿಳಿಸಿದ್ದಾರೆ. ನಾಗರಭಾವಿಯಲ್ಲಿ ಭಾನುವಾರ ಒಂದೇ ದಿನ 117 ಮಿ.ಮೀ. ಮಳೆಯಾಗಿದೆ. ಆರ್. ಆರ್. ನಗರ ವಲಯದಲ್ಲಿನ ಜ್ಞಾನಭಾರತಿ ವಾರ್ಡ್‌ನಲ್ಲಿ 115 ಮಿ. ಮೀ ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ ಮಾಹಿತಿ ಒದಗಿಸಿದೆ.

ರಾಜರಾಜೇಶ್ವರಿ ನಗರ, ನಗರದ ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿನ ಹಲವು ವಾರ್ಡ್‌ಗಳಲ್ಲಿ ಭಾನುವಾರ ತಡರಾತ್ರಿ 100 ಮಿ.ಮೀಗೂ ಹೆಚ್ಚಿನ ಮಳೆಯಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
1997ರ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 179 ಎಂಎಂ ಮಳೆ ದಾಖಲಾಗಿತ್ತು. ಆನಂತರ ಅಕ್ಟೋಬರ್ ತಿಂಗಳಿನಲ್ಲಿ ದಾಖಲಾದ ಅತಿ ಹೆಚ್ಚಿನ ಮಳೆ ಪ್ರಮಾಣ ಇದಾಗಿದೆ.ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹಲವು ವರ್ಷಗಳ ನಂತರ ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ದಾಖಲೆಯ ಮಳೆಯಾಗಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ಅಧಿಕಾರಿಗಳು ಕೂಡ ಹೇಳಿದ್ದಾರೆ.
ಭಾನವಾರ ರಾತ್ರಿ 11.50 ಸುಮಾರಿಗೆ ದಾಖಲಾದ ಮಾಹಿತಿಯಂತೆ ನಾಗರಭಾವಿ 113 ಮಿ. ಮೀ., ರಾಜಾಜಿನಗರ 107 ಮಿ. ಮೀ., ನಂದಿನಿ ಲೇಔಟ್ 85.5 ಮಿ. ಮೀ., ಲಕ್ಕಸಂದ್ರ 68 ಮಿ. ಮೀ., ಮಾರತ್‌ಹಳ್ಳಿ 63 ಮಿ. ಮೀ. ಕೋರಮಂಗಲದಲ್ಲಿ 54 ಮಿ.ಮೀ. ಮಳೆಯಾಗಿದೆ.

ಮರ ಬಿದ್ದು ವ್ಯಕ್ತಿ ಸಾವು:
ಭಾರೀ ಮಳೆಯಿಂದಾಗಿ ಮರ ಉರುಳಿ ಬಿದ್ದು ಬೆಂಗಳೂರಿನಲ್ಲಿ ಹಿರಿಯ ನಾಗರಿಕರೊಬ್ಬರು ಮೃತಪಟ್ಟಿರುವ ವರದಿಯಾಗಿದೆ. ಜಯನಗರದ ಸೌತ್ ಎಂಡ್‌ನಲ್ಲಿ ಮರ ಬಿದ್ದು 73 ವರ್ಷದ ವೃದ್ಧರೊಬ್ಬರು ಸೋಮವಾರ ಬೆಳಗ್ಗಿನ ಜಾವ ಮತಪಟ್ಟಿದ್ದಾರೆ. ಬಿಎಸ್ ನಾಗರಾಜ ಎಂದು ಅವರನ್ನು ಗುರುತಿಸಲಾಗಿದೆ. ಸೌತ್ ಎಂಡ್ ಸರ್ಕರ್ ಬಳಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಸಂದರ್ಭ ಮರ ಉರುಳಿ ಬಿದ್ದಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲ ನೀಡದೇ ಸಾವನ್ನಪ್ಪಿದ್ದಾರೆ.
ಮಳೆಯಿಂದಾದ ಅವಘಡಗಳು:
ಎಚ್‌ಎಎಲ್ ಸಮೀಪದ ರಮೇಶ್ ನಗರದಲ್ಲಿ ಹನ್ನೆರಡು ಅಡಿ ಎತ್ತರದ ಗೋಡೆ ಕುಸಿದು ಹತ್ತಕ್ಕೂ ಹೆಚ್ಚು ವಾಹನ ಜಖಂ ಆಗಿವೆ. ರಾಜರಾಜೇಶ್ವರಿನಗರದ ಐಡಿಯಂಲ್ ಹೋಂನಲ್ಲಿ ರಾಜ ಕಾಲುವೆ ನೀರು ನುಗ್ಗಿ ಶಿವಣ್ಣ ಎಂಬುವರ ಮನೆಗೆ ಹಾನಿಯಾಗಿದೆ. ಅಲ್ಲಿಯೇ, ರಾಜ ಕಾಲುವೆ ನೀರು ನುಗ್ಗಿ ರೈತ ಅಂದಾನಪ್ಪ ಎಂಬುವರಿಗೆ ಸೇರಿದ ಆರು ಮೇಕೆ ಮತ್ತು ಆರು ಎಮ್ಮೆಗಳು ನೀರಿಗೆ ಕೊಚ್ಚಿಕೊಂಡು ಹೋಗಿವೆ.
ಜೆ.ಪಿ. ನಗರದಲ್ಲಿ ಗೋದಾಮಿಗೆ ನೀರು ನುಗ್ಗಿದೆ. ಹೆಬ್ಬಾಳ, ಕುರುಬರಹಳ್ಳಿ, ಪೈಪ್‌ಲೈನ್ ರಸ್ತೆ, ಸಂಪಂಗಿರಾಮನಗರ, ಹಳೆ ವಿಮಾನ ನಿಲ್ದಾಣ ರಸ್ತೆ, ರಿಚ್ಮಂಡ್ ಟೌನ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಾಗರಭಾವಿಯ ಬಿಡಿಎ ಲೇಔಟ್, ಮಲ್ಲತ್ತಹಳ್ಳಿ, ರಾಮಮೂರ್ತಿ ನಗರ ಮುಂತಾದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.












Click it and Unblock the Notifications