Bengaluru Rain: ಬಿಸಿಲಿನ ಬೇಗೆಗೆ ಬೆಂದಿದ್ದ ಬೆಂಗ್ಳೂರಿಗೆ ತಂಪೆರೆದ ಮಳೆರಾಯ
ಬೆಂಗಳೂರು, ನವೆಂಬರ್, 04: ರಾಜ್ಯದಲ್ಲಿ ನವೆಂಬರ್ 3ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆಯೇ ಇದೀಗ ಬಿಸಿಲಿನ ಬೇಗೆಗೆ ಬೆಂದಿದ್ದ ಸಿಲಿಕಾನ್ ಸಿಟಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇದ್ದು, ಮಧ್ಯಾಹ್ನ ಮೋಡ ಕವಿದಿದ್ದು, 3 ಗಂಟೆ ವೇಳೆಗೆ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಮೆಜೆಸ್ಟಿಕ್, ಕೋರಮಂಗಲ, ಮಲ್ಲೇಶ್ವರಂ, ಕೆ.ಆರ್. ಮಾರುಕಟ್ಟೆ, ವಿಧಾನಸೌಧ, ಶೇಶಾದ್ರಿಪುರಂ ಸೇರಿದಂತೆ ನಗರದ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ.

ಸತತವಾಗಿ 15 ನಿಮಿಷಗಳ ಕಾಲ ಸುರಿದ ಮಳೆಗೆ ನಗರದ ರಸ್ತೆಗಳಲ್ಲಿ ನೀರು ಹರಿದಿದೆ. ಇನ್ನು ಸಂಜೆ ವೇಳೆಗೆ ಭಾರೀ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆಯೂ ಇದೆ.
ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಇನ್ನು ನವೆಂಬರ್ 4ರಿಂದ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ದಕ್ಷಿಣ ಒಳನಾಡಿನ ಶಿವಮೊಗ್ಗ, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಚಾಮರಾಜನಗರ, ಮಂಡ್ಯ, ಕೋಲಾರ, ಮೈಸೂರು, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದ್ದು, ಇನ್ನಳಿದ ಜಿಲ್ಲೆಗಳಲ್ಲಿ ತಾಪಾಮಾನ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ನವೆಂಬರ್ 6 ರವರೆಗೆ ಕೇರಳದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮತ್ತು ಗಾಳಿಯ ವೇಗ 30-40 ಕಿ.ಮೀ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನವೆಂಬರ್ 3 ರಿಂದ 6ರವರೆಗೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸಚನೆ ನೀಡಿದೆ. ಶುಕ್ರವಾರ ಮತ್ತು ಶನಿವಾರ ಇಡುಕ್ಕಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಇನ್ನು ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರಿನಲ್ಲಿ ಶುಕ್ರವಾರ ಹಳದಿ ಅಲರ್ಟ್ ಘೋಷಿಸಲಾಗಿದೆ. ಇಡುಕ್ಕಿ ಹೊರತುಪಡಿಸಿ ಪತ್ತನಂತಿಟ್ಟ ಜಿಲ್ಲೆಗೆ ಶನಿವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.












Click it and Unblock the Notifications