Bengaluru Rain: ಆಗಸ್ಟ್‌ನಲ್ಲಿ ಶೇ 40 ಮಳೆ ಕೊರತೆ- ಬೆಂಗಳೂರಿನ ತಾಪಮಾನ ಹೆಚ್ಚಳ, ವರದಿ, ವಿವರ
ಬೆಂಗಳೂರು, ಆಗಸ್ಟ್ 16: ವಾಡಿಕೆಯಂತೆ ಆಗಸ್ಟ್ ತಿಂಗಳು ಬೆಂಗಳೂರಿನಲ್ಲಿ ಭಾರೀ ಮಳೆಯಾಗಬೇಕಿತ್ತು. ಆದರೆ, ಈ ಬಾರಿ ಮಳೆಯ ಕೊರತೆ ಎದ್ದು ಕಾಣುತ್ತಿದೆ. ಈ ಆಗಸ್ಟ್‌ನಲ್ಲಿ ಒಣ ಹವೆಯ ವಾತಾವರಣವಿದೆ. ಬೆಂಗಳೂರು ಬಿಸಿಲಿನ ತಾಪದಿಂದ ತತ್ತರಿಸುತ್ತಿದೆ. ಈ ತಿಂಗಳು ಶೇ 40 ಕ್ಕಿಂತ ಹೆಚ್ಚು ಮಳೆಯ ಕೊರತೆ ಇದೆ. ಇದರಿಂದಾಗಿ ಬಿಸಿಲಿನ ತಾಪವು ಹೆಚ್ಚುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮುಂದಿನ ವಾರ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರಿಯಲಿದೆ. ಪ್ರತ್ಯೇಕ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ನೈಋತ್ಯ ಮಾನ್ಸೂನ್ ಕರ್ನಾಟಕದಲ್ಲಿ ದುರ್ಬಲವಾಗಿದೆ. ದಕ್ಷಿಣ ಕರ್ನಾಟಕದ ಕರಾವಳಿ ಮತ್ತು ಒಳಭಾಗಗಳಲ್ಲಿ ಮಳೆ ದಾಖಲಾಗಿದೆ. ಆದರೆ, ಅಲ್ಲಿಯೂ ಕೊರತೆ ಎದ್ದು ಕಾಣುತ್ತಿದೆ' ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೋಶದ ಅಂಕಿಅಂಶಗಳ ಪ್ರಕಾರ, ಆಗಸ್ಟ್ ಮೊದಲ ವಾರದಲ್ಲಿ ಸಾಮಾನ್ಯ ಮಳೆ ( 24.3 ಮಿಮೀ ) ಬಿದ್ದಿದೆ. ಬೆಂಗಳೂರು ನಗರದಲ್ಲಿ ಕೇವಲ 10.8 ಮಿಮೀ ಮಳೆಯಾಗಿದೆ.
ಆಗಸ್ಟ್ 5 ರ ವರೆಗೆ ಗರಿಷ್ಠ 26 ರಿಂದ 27 ಡಿಗ್ರಿ ಸೆಲ್ಸಿಯಸ್ ವರೆಗೆ ದಿನದ ತಾಪಮಾನ ದಾಖಲಾಗಿದೆ. ಈಗ ನಗರದಲ್ಲಿ ಪ್ರಸ್ತುತ 29 ರಿಂದ 30 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.

ನಗರವು ಬಿಸಿಲಿನ ಶಾಖದಿಂದ ತತ್ತರಿಸಿದೆ. ಆದಾಗ್ಯೂ, ಆಗಸ್ಟ್ ಕೊನೆಯ ವಾರದ ವೇಳೆಗೆ ಮಾನ್ಸೂನ್ ಮಳೆ ಬೀಳುವ ಮುನ್ಸೂಚನೆ ಇದೆ. ಪರಿಸ್ಥಿತಿಯು ಸುಧಾರಿಸುವ ಸಾಧ್ಯತೆಯಿದೆ ಎಂದು ಹವಾಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.












Click it and Unblock the Notifications