ಮೊದಲಿನ ಸೌಂದರ್ಯಕ್ಕೆ ಮರಳಲಿದೆ ಪುಟ್ಟೇನಹಳ್ಳಿ ಕೆರೆ
ಬೆಂಗಳೂರು, ಮಾ. 31 : ಬೆಂಗಳೂರಿನ ಪುಟ್ಟೇನಹಳ್ಳಿ ಕೆರೆಗೆ ಕಾಯಕಲ್ಪ ನೀಡಲು ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. ನೀರು ಬತ್ತಿ ಬರಿದಾಗುತ್ತಿರುವ ಕೆರೆ ಮತ್ತೆ ಹಳೆ ಸೌಂದರ್ಯದಿಂದ ಶೀಘ್ರವೇ ನಳನಳಿಸಲಿದೆ.
ಜೆಪಿ ನಗರದ ಕೆರೆ ಸಮೀಪದಲ್ಲಿರುವ ದೊಡ್ಡ ಕಾಂಪ್ಲೆಕ್ಸ್, ಅಪಾರ್ಟ್ ಮೆಂಟ್ ನ ನೀರನ್ನು(ಶುದ್ಧೀಕರಿಸಿ) ಕೆರೆಗೆ ಬಿಡಲು ಯೋಜನೆ ರೂಪಿಸಲಾಗಿದೆ. ಕೆರೆ ಸಮೀಪ ಇರುವ 18 ಅಂತಸ್ತಿನ 1.998 ಅಪಾರ್ಟ್ ಮೆಂಟ್ ಗಳನ್ನು ಹೊಂದಿರುವ ಕಟ್ಟಡದ ನೀರನ್ನು ಕೆರೆಗೆ ಹಾಯಿಸಲಾಗುವುದು. ಒಂದು ದಿನಕ್ಕೆ ಸುಮಾರು ಸಾವಿರ ಕಿಲೋ ಲೀಟರ್ ಗೂ ಅಧಿಕ ನೀರು ಕೆರೆಗೆ ಪೂರಣವಾಗಲಿದೆ. [ಯಡಿಯೂರು ಕೆರೆ ಮೇಲೊಂದು ಪಕ್ಷಿ ನೋಟ]

ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನ ಆಚಾರ್ಯ, ಶುದ್ಧೀಕರಿಸಿದ ನೀರನ್ನು ಕೆರೆಗೆ ಬಿಡಲು ಅನುಮತಿ ನೀಡಲಾಗಿದೆ. ಈ ಕ್ರಮದಿಂದ ಮುಂದಿನ ಆರು ತಿಂಗಳು ಇಲ್ಲವೇ ವರ್ಷದಲ್ಲಿ ಕೆರೆ ಮೊದಲಿನ ಸ್ಥಿತಿಗೆ ತಲುಪಬಹುದು. ಬೆಂಗಳೂರಿನ ಇತರ ಕೆರೆಗಳಲ್ಲೂ ಇಂಥ ಯೋಜನೆ ಅಳವಡಿಸುವ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಈಗಾಗಲೇ ಮೌಖಿಕ ಆದೇಶ ನೀಡಲಾಗಿದ್ದು ಲಿಖಿತ ಆದೇಶವನ್ನು ಎರಡು ದಿನದಲ್ಲಿ ನೀಡಲಾಗುವುದು. ಪೈಲೆಟ್ ಮಾದರಿಯ ಕಾರ್ಯಾಚರಣೆ ಮೂಲಕ ನೀರು ಹಾಯಿಸಲಾಗುವುದು ಎಂದು ತಿಳಿಸಿದರು.

ನೀರು ಶುದ್ಧೀಕರಣ ಘಟಕವೊಂದನ್ನು ಇಲ್ಲಿ ಸ್ಥಾಪಿಸಿ ಅದಕ್ಕೆ ಸೆನ್ಸಾರ್ ಅಳವಡಿಸಿ ಪ್ರತಿದಿನದ ಆಗು ಹೋಗುಗಳನ್ನು ನೋಡಿಕೊಳ್ಳಲಾಗುವುದದು ಎಂದು ತಿಳಿಸಿದರು.
ಈ ಸುದ್ದಿ 'ಪುಟ್ಟೇನಹಳ್ಳಿ ನೆಬರ್ ಹುಡ್ ಲೆಕ್ ಇಂಪ್ರುವ್ ಮೆಂಟ್ ಟ್ರಸ್ಟ್' ಗೆ ಅತ್ಯಂತ ಸಂತಸ ತಂದಿದೆ. ಸುಮಾರು 10 ಎಕರಗೂ ಅಧಿಕ ವ್ಯಾಪ್ತಿಯ ಕೆರೆ ಉಳಿವಿಗೆ ಸಂಘಟನೆ ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ.

ಕೆರೆಯಲ್ಲಿ ಸದ್ಯ ಒಂದೆರಡು ಅಡಿಗಳಷ್ಟು ನೀರಿಲ್ಲ. ಪಕ್ಷಿಗಳಿಗೆ, ವಿವಿಧ ತಳಿಯ ಮೀನಿಗಳಿಗೆ ಆಶ್ರಯ ತಾಣವಾಗಿದ್ದ ಕೆರೆ ಹಿಂದಿನ ವೈಭವಕ್ಕೆ ಮರಳಬೇಕು ಎಂದು ಟ್ರಸ್ಟ್ ಅಧ್ಯಕ್ಷೆ ಉಷಾ ರಾಜಗೋಪಾಲನ್ ಹೇಳುತ್ತಾರೆ.
ಈ ರೀತಿಯಲ್ಲೇ ಮಹಾನಗರದ ಇತರ ಕೆರೆಗಳ ಅಭಿವೃದ್ಧಿಗೂ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಮುಂದಾದರೆ ಅದಕ್ಕಿಂತ ಉತ್ತಮ ಬೆಳವಣಿಗೆ ಇನ್ನೊಂದಿಲ್ಲ.












Click it and Unblock the Notifications