Bengaluru Property: ಬೆಂಗಳೂರಿನಲ್ಲಿ ಆಸ್ತಿ ಮಾಲೀಕರಿಗೆ ಹೊಸ ಎಚ್ಚರಿಕೆ: ಈ ತಪ್ಪು ಮಾಡಿದರೆ 1 ಲಕ್ಷ ರೂ. ದಂಡ!
Bengaluru Property: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳಿಂದ ಇದೀಗ ಆಸ್ತಿದಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವವರ ಮೇಲೆ ಗಂಭೀರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದೀಗ ಮತ್ತೊಂದು ಬೃಹತ್ ಕಾರ್ಯಾಚರಣೆಯನ್ನು ಪಾಲಿಕೆಯ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕಟ್ಟಡ ತ್ಯಾಜ್ಯ ಚರಂಡಿಗೆ ಸುರಿದ ಮಾಲೀಕರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಈ ತಪ್ಪುಗಳನ್ನು ಮಾಡುವ ಆಸ್ತಿ ಮಾಲೀಕರಿಗೆ ಎಚ್ಚರಿಕೆ ಕೊಡಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೋರಮಂಗಲದ ಒಂದನೇ ಬ್ಲಾಕ್ ನ 6ನೇ ಮುಖ್ಯರಸ್ತೆಯಲ್ಲಿ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಈ ಕಟ್ಟಡದ ತ್ಯಾಜ್ಯಗಳನ್ನು ಪಾದಚಾರಿ ಮಾರ್ಗ ಹಾಗೂ ಚರಂಡಿಗೆ ಸುರಿದ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಆಗಸ್ಟ್ 19ರ ಬುಧವಾರ ಬೆಳಿಗ್ಗೆ ಪಾಲಿಕೆಯ ಬಿಟಿಎಂ ಲೇಔಟ್ ವಿಭಾಗದ ಮಾರ್ಷಲ್ ಪರಿಶೀಲನೆ ವೇಳೆ ಕಟ್ಟಡ ತ್ಯಾಜ್ಯವನ್ನು ಪಾದಚಾರಿ ಮಾರ್ಗ ಹಾಗೂ ಚರಂಡಿಗೆ ಸುರಿದಿರುವುದನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

Bengaluru Property: ಕಟ್ಟಡ ಮಾಲೀಕರಿಗೆ ಒಂದು ಲಕ್ಷ ದಂಡ
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸಾರ್ವಜನಿಕ ಪ್ರದೇಶದಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿದು ಚರಂಡಿ ಹಾಗೂ ಪಾದಚಾರಿ ಮಾರ್ಗ ಹಾನಿಗೊಳಿಸಿರುವ ಕಟ್ಟಡ ಮಾಲೀಕರಾದ ಶ್ರೀ ಡೇವಿಡ್ ಎಂಬುವವರಿಗೆ ಸ್ಥಳದಲ್ಲೇ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ, ಮಾಲೀಕರ ಸ್ವಂತ ಖರ್ಚಿನಲ್ಲಿ ತ್ಯಾಜ್ಯವನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ.
ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಡಿ ಆಸ್ತಿ ಮಾಲೀಕರು ತಮ್ಮ ಖಾಸಗಿ ಸ್ವತ್ತುಗಳಲ್ಲಿನ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸ್ಥಳಗಳನ್ನು ಗುರುತು ಮಾಡಲಾಗಿದೆ. ಹೀಗಿದ್ದರೂ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿಯುವುದು ಕಾನೂನು ಬಾಹಿರವಾಗಿದ್ದು, ಇನ್ನುಮುಂದೆ ನಿಯಮ ಬಾಹಿರವಾಗಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿಯುವವರಿಗೆ ಭಾರಿ ದಂಡ ವಿಧಿಸುವುದನ್ನು ಮುಂದುವರೆಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಾರ್ಷಲ್ ಸೂಪರ್ವೈಸರ್, ಮಾರ್ಷಲ್ ಹಾಗೂ ಆರೋಗ್ಯ ಪರಿವೀಕ್ಷಕರು ಇದ್ದರು.
ಪಾದಚಾರಿ ಮಾರ್ಗಗಳ ಅನಧಿಕೃತ ಒತ್ತುವರಿಯನ್ನು ತೆರವು ಕಾರ್ಯಕ್ಕೆ ವೇಗ
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ಸಹಾಯ ದೂರು, ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ, CSSIP ಹಾಗೂ CMIDP ಕಾಮಗಾರಿಗಳು ಹಾಗೂ ಇನ್ನಿತರೆ ವಿಷಯಗಳ ಕುರಿತು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಹೆಚ್ಚುವರಿ ಆಯುಕ್ತರಾದ ವೆಂಕಟಾಚಲಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ 235.75 ಕಿ.ಮೀ. ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು ಕಾರ್ಯ ಕೈಗೊಳ್ಳಲಾಗಿದ್ದು, ಉಳಿದ ಎಲ್ಲಾ ಆರ್ಟೀರಿಯಲ್ ಹಾಗೂ ಸಬ್-ಆರ್ಟೀರಿಯಲ್ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಅನಧಿಕೃತ ಒತ್ತುವರಿಯನ್ನು ತೆರವು ಕಾರ್ಯವನ್ನು ವಾರದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತೆರವುಗೊಳಿಸಿದ ಸ್ಥಳಗಳಲ್ಲಿ ಮರು ಅತಿಕ್ರಮಣವಾಗದಂತೆ ತಂಡ
ಪಾದಚಾರಿ ಮಾರ್ಗಗಳ ಅತಿಕ್ರಮಣ ಒತ್ತುವರಿ ತೆರವುಗೊಳಿಸಿದ ಬಳಿಕ ಅದೇ ಸ್ಥಳಗಳಲ್ಲಿಯೇ ಪುನಃ ಅಂಗಡಿ, ತಾತ್ಕಾಲಿಕ ಮಳಿಗೆ ಅಥವಾ ಬೀದಿ ಬದಿ ವ್ಯಾಪಾರಿಗಳು ಬಂದು ವ್ಯಾಪಾರ ಚಟುವಟಿಕೆ ಮುಂದುವರಿಸುತ್ತಿರುವುದು ಕಂಡುಬಂದಿದ್ದು, ಈ ಕುರಿತು ಸಂಬಂಧಪಟ್ಟ ಸಹಾಯಕ ಅಭಿಯಂತರರು, ಆರೋಗ್ಯ ಮೇಲ್ವಿಚಾರಕರು ಹಾಗೂ ಮಾರ್ಷಲ್ಗಳನ್ನೊಳಗೊಂಡ ತಂಡವನ್ನು ರಚಿಸಿ ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು. ಮರು ಅತಿಕ್ರಮಣ ಕಂಡುಬಂದಲ್ಲಿ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರಸುದಾರರಿಲ್ಲದ ಅನಾಥ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿದ 7 ದಿನಗಳ ನೋಟಿಸ್ ಅವಧಿ ಪೂರ್ಣಗೊಂಡಿದ್ದರೂ ತೆರವುಗೊಳಿಸದಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರುಗಳು ಅವುಗಳನ್ನು ಗುರುತಿಸಿ, ಟೋಯಿಂಗ್ ವ್ಯವಸ್ಥೆ ಮಾಡಿಕೊಂಡು ನಿಗಧಿಪಡಿಸಿರುವ ಲಕ್ಕಸಂದ್ರ ಸ್ಥಳದಲ್ಲಿ ತಕ್ಷಣವೇ ವಾಹನಗಳನ್ನು ಟೋಯಿಂಗ್ ಕಾರ್ಯ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.


Click it and Unblock the Notifications
