Bengaluru Property: ಬೆಂಗಳೂರಿನ 13,600 ಆಸ್ತಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ನೋಟಿಸ್, ಕಾರಣವೇನು ?
Bengaluru Property: ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿ ಹಾಗೂ ಆಸ್ತಿ ವಿವರವನ್ನು ತಪ್ಪಾಗಿ ಹಂಚಿಕೊಂಡಿರುವ ಆಸ್ತಿದಾರರ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹದ್ದಿನ ಕಣ್ಣಿರಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ 2ನೇ ಸುತ್ತಿನ ಜಿಪಿಎಸ್ ಆಧಾರಿತ ಆಸ್ತಿ ಪರಿಶೀಲನೆ ಮತ್ತು ಮನೆ-ಮನೆ ಸಮೀಕ್ಷೆ ಪ್ರಕ್ರಿಯೆ ಚುರುಕುಗೊಂಡಿದ್ದು ಕೆಲವು ಆಸ್ತಿದಾರರಿಗೆ ನಡುಕ ಶುರುವಾಗಿದೆ. ಇನ್ನು ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಬಿಸಿ ಮುಟ್ಟಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ.
ಬೆಂಗಳೂರಿನಲ್ಲಿ 2ನೇ ಸುತ್ತಿನ ಜಿಪಿಎಸ್ ಆಧಾರಿತ ಆಸ್ತಿ ಪರಿಶೀಲನೆ ನಂತರ 23,600 ಆಸ್ತಿಗಳಲ್ಲಿ 688 ಕೋಟಿ ರೂಪಾಯಿ ಮೌಲ್ಯದ ಆಸ್ತಿ ತೆರಿಗೆ ವಂಚನೆಯನ್ನು ಪತ್ತೆ ಮಾಡಲಾಗಿದೆ. ಎರಡನೇ ಸುತ್ತಿನಲ್ಲಿ ಸುಮಾರು 13,600 ಆಸ್ತಿಗಳಲ್ಲಿ 318 ಕೋಟಿ ರೂಪಾಯಿ ವಂಚನೆ ನಡೆದಿದ್ದರೆ, ಮೊದಲ ಸುತ್ತಿನಲ್ಲಿ ಸುಮಾರು 10,000 ಆಸ್ತಿಗಳಲ್ಲಿ 370 ಕೋಟಿ ರೂ. ಕಡಿಮೆ ಆಸ್ತಿ ತೆರಿಗೆ ಪಾವತಿ ಆಗಿದೆ ಎನ್ನುವುದನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಇನ್ನು ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳಿಗೆ ಆಸ್ತಿ ತೆರಿಗೆಯಿಂದ ಸಂಗ್ರಹವಾಗುವ ಆದಾಯವು ಪ್ರಮುಖ ಆದಾಯ ಮೂಲವಾಗಿದೆ. ಹೀಗಾಗಿ, ಆಸ್ತಿ ತೆರಿಗೆ ಸಂಗ್ರಹ ವಿಷಯವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಗಂಭೀರವಾಗಿ ಪರಿಗಣಿಸಿದೆ.
ಸಾವಿರಾರು ಆಸ್ತಿ ಮಾಲೀಕರಿಗೆ ನೋಟಿಸ್
ಇನ್ನು ಬೆಂಗಳೂರಿನಲ್ಲಿ ತಪ್ಪಾದ ಆಸ್ತಿ ವಿವರ ನೀಡಿರುವ ಸಾವಿರಾರು ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎಚ್ಚರಿಕೆ ನೋಟಿಸ್ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎರಡನೇ ಸುತ್ತಿನಲ್ಲಿ ಸುಮಾರು 67,000 ಮತ್ತು ಮೊದಲ ಸುತ್ತಿನಲ್ಲಿ ಸುಮಾರು 49,000 ನೋಟಿಸ್‌ಗಳನ್ನು ನಿಯಮ ಉಲ್ಲಂಘನೆ ಮಾಡಿರುವ ಹಾಗೂ ತಪ್ಪು ಮಾಹಿತಿ ನೀಡಿರುವ ಆಸ್ತಿದಾರರಿಗೆ ನೀಡಿದೆ. ಹೆಚ್ಚಿನ ಆಸ್ತಿಗಳ ಮಾಲೀಕರು ಬೆಂಗಳೂರಿನಲ್ಲಿ ಸರಾಸರಿ ಐದು ವರ್ಷಗಳ ಕಾಲ ಕಡಿಮೆ ತೆರಿಗೆ ಪಾವತಿ ಮಾಡಿರುವುದು ಈ ತನಿಖೆಯಲ್ಲಿ ಬಹಿರಂಗವಾಗಿದೆ. ಹೀಗಾಗಿ, ಈ ರೀತಿ ಆಸ್ತಿ ತೆರಿಗೆ ಪಾವತಿ ವಿಚಾರದಲ್ಲಿ ವಂಚನೆ ಮಾಡಿರುವ ಆಸ್ತಿದಾರರಿಗೆ ಪ್ರತಿ ಹಣಕಾಸು ವರ್ಷದಲ್ಲೂ ನೋಟಿಸ್ ಜಾರಿ ಮಾಡಲಾಗಿದೆ. ಇದೀಗ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ.
ನೋಟಿಸ್, SMS ಮತ್ತು IVRS ಮೂಲಕ ಆಸ್ತಿ ಮಾಲೀಕರಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ. ನೋಟಿಸ್ ಸ್ವೀಕರಿಸಿದ ಆಸ್ತಿದಾರರು ಆನ್‌ಲೈನ್ ಪೋರ್ಟಲ್ ಮೂಲಕ 15 ದಿನಗಳಲ್ಲಿ ಪ್ರತಿಕ್ರಿಯಿಸಬಹುದು ಅಥವಾ ಮೇಲ್ಮನವಿ ಸಲ್ಲಿಸಬಹುದು. ಆಸ್ತಿದಾರರಿಗೆ ನಿರ್ದಿಷ್ಟವಾಗಿ ನಿಗದಿ ಮಾಡಿದ ಆಸ್ತಿ ತೆರಿಗೆ ಪಾವತಿ ವೆಬ್‌ಸೈಟ್ ಮೂಲಕ ಅನ್ವಯವಾಗುವ ಬಡ್ಡಿ ಮತ್ತು ದಂಡದ ಜೊತೆಗೆ ಬಾಕಿಗಳನ್ನು ಸಹ ಪಾವತಿಸಬಹುದಾಗಿದೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಆಸ್ತಿ ಹರಾಜು
ಇನ್ನು ಬೆಂಗಳೂರಿನಲ್ಲಿ ಸುದೀರ್ಘ ಅವಧಿಯಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿದಾರರ ಆಸ್ತಿಗಳನ್ನು ಹರಾಜು ಹಾಕುವುದಕ್ಕೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 437 ಕೋಟಿ ರೂಪಾಯಿ ತೆರಿಗೆ ಬಾಕಿ ಇದೆ. ಬೆಂಗಳೂರಿನ 7 ಸಾವಿರಕ್ಕೂ ಹೆಚ್ಚು ಆಸ್ತಿದಾರರಿಂದ ಆಸ್ತಿ ತೆರಿಗೆ ಬಾಕಿ ಇದೆ. ಹೀಗಾಗಿ, ಸುದೀರ್ಘ ಅವಧಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆಸ್ತಿ ಹರಾಜು ಮಾಡುವುದು ಅಂತಿಮ ಆಯ್ಕೆಯಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications