Property: ರಿಯಲ್ ಎಸ್ಟೇಟ್‌ನಲ್ಲಿ ವೇಗವಾಗಿ ಬೆಳೆಯುತ್ತಿದೆ ಬೆಂಗಳೂರಿನ ಈ ಪ್ರದೇಶ, ಎಷ್ಟಿದೆ ಇಲ್ಲಿನ ಭೂಮಿ ಬೆಲೆ?
ಬೆಂಗಳೂರು ಬೆಳೆಯುತ್ತಿರುವ ಹಿನ್ನೆಲೆ ನಾಲ್ಕು ದಿಕ್ಕಲ್ಲೂ ತನ್ನ ವ್ಯಾಪ್ತಿಯನ್ನ ವಿಸ್ತರಿಸಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಲವು ಪ್ರದೇಶಗಳು ಕೂಡ ಅಭಿವೃದ್ಧಿ ಹೊಂದುತ್ತಿದೆ. ಮೊದಲೆಲ್ಲ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಮಾತ್ರವೇ ರಿಯಲ್ ಎಸ್ಟೇಟ್ ಉದ್ಯಮ ಜೋರಾಗಿ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಸೈಲೆಂಟ್ ಆಗಿದ್ದ ಏರಿಯಾಗಳಲ್ಲೂ ರಿಯಲ್ ಎಸ್ಟೇಟ್ ಸದ್ದು ಮಾಡುತ್ತಿದೆ. ಸದ್ಯ ನಗರದ ಹೊರವಲಯದ ಭೂಮಿ ಕೂಡ ಭರ್ಜರಿ ಡಿಮ್ಯಾಂಡ್‌ನಲ್ಲಿದೆ. ಆದರೆ, ಈ ಒಂದು ಪ್ರದೇಶವು ಬೆಂಗಳೂರಿನ ರಿಯಲ್ ಎಸ್ಟೇಟ್ ಕೇಂದ್ರವಾಗಿ ದಿಢೀರ್ ಬದಲಾಗಿದೆ ಎಂದು ವರದಿಯಾಗಿದೆ. ಹಾಗಾದ್ರೆ ಯಾವುದು ಆ ಜಾಗ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿ ದಶಕಗಳು ಕಳೆದಿದ್ದರೂ ಈ ಭಾಗದ ಸುತ್ತಮುತ್ತಲಿನ ಪ್ರದೇಶ ಗ್ರಾಮೀಣ ಪ್ರದೇಶವಾಗಿಯೇ ಉಳಿದಿತ್ತು. ದಿನೇ ದಿನೇ ಇದೀಗ ನಗರೀಕರಣಕ್ಕೆ ಒಳಪಟ್ಟಿರುವ ಈ ಪ್ರದೇಶವು ಇದೀಗ ರಿಯಲ್ ಎಸ್ಟೇಟ್‌ನ ಕೇಂದ್ರ ಭಾಗ ಎಂದೇ ಕರೆಸಿಕೊಳ್ಳುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೇವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶವು ಪಕ್ಕಾ ಹಳ್ಳಿ ಶೈಲಿಯಲ್ಲೇ ಇತ್ತು. ಆದರೆ, ಇಂದು ಹೊಸ ಬೆಂಗಳೂರಿನಂತೆ ಸ್ವರೂಪ ಬದಲಿಸಿಕೊಂಡಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಹೂಡಿಕೆಗಳಿಂದಾಗಿ ದೇವನಹಳ್ಳಿ ಇದೀಗ ರಿಯಲ್ ಎಸ್ಟೇಟ್ ಕೇಂದ್ರವಾಗಿ ರೂಪಾಂತರಗೊಳ್ಳುತ್ತಿದೆ. ಉದ್ಯಮಿಗಳು ದೇವನಹಳ್ಳಿಯನ್ನು ಬೆಂಗಳೂರಿನ ಗುರುಗ್ರಾಮ ಎಂದೇ ಕರೆಯುತ್ತಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ), ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (ಎಸ್‌ಟಿಆರ್‌ಆರ್), ಐಟಿ ಮತ್ತು ಬಿಸಿನೆಸ್ ಪಾರ್ಕ್‌ಗಳು, ಕೈಗಾರಿಕಾ ಪ್ರದೇಶಗಳು, ಟೌನ್‌ಶಿಪ್‌ಗಳು, ಅಪಾರ್ಟ್‌ಮೆಂಟ್ ಸೇರಿದಂತೆ ಹಲವು ಉದ್ಯಮಗಳು ಇದೀಗ ದೇವನಹಳ್ಳಿ ಭಾಗದಲ್ಲಿ ಯಥೇಚ್ಛವಾಗಿ ಹೂಡಿಕೆ ಮಾಡಲು ಮುಗಿಬಿದ್ದಿವೆ. ಇದರಿಂದಾಗಿ ದೇವನಹಳ್ಳಿಯು ಕ್ರಮೇಣವಾಗಿ ಪ್ರಮುಖ ಹೂಡಿಕೆ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದು ಗುರುಗ್ರಾಮದಂತೆ ವ್ಯಾಪಾರ ಮತ್ತು ವಸತಿ ತಾಣವಾಗುವ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಮೂಲಸೌಕರ್ಯ ವಿಸ್ತರಣೆ, ಉದ್ಯೋಗ ಸೃಷ್ಟಿ ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಆಸ್ತಿ ಮೌಲ್ಯ ಶೇ 20ರವರೆಗೆ ಏರಿಕೆ
ಕಳೆದ ಎರಡು ವರ್ಷಗಳಲ್ಲೇ ದೇವನಹಳ್ಳಿಯ ಆಸ್ತಿ ಮೌಲ್ಯವು ಶೇ 15ರಿಂದ 20ರವರೆಗೆ ಏರಿಕೆಯಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳು ಹಾಗೂ ಮುಂಬರಲಿವ ಟೆಕ್ ಪಾರ್ಕ್‌ಗಳೇ ಕಾರಣ ಎನ್ನಲಾಗಿದೆ. ದೇವನಹಳ್ಳಿ ಪ್ರದೇಶದಲ್ಲಿ ಆಸ್ತಿ ದರಗಳು ಕೂಡ ವಾರ್ಷಿಕವಾಗಿ ಶೇ. 8ರಿಂದ 12ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಕ್ರೆಡೈ) ಕೂಡ ಅಭಿಪ್ರಾಯಪಟ್ಟಿದೆ.
ದೇವನಹಳ್ಳಿಯು ಪ್ರಮುಖ ಆರ್ಥಿಕ ಮತ್ತು ವಸತಿ ತಾಣವಾಗುವ ಹಾದಿಯಲ್ಲಿದ್ದು, ಹೂಡಿಕೆಯಲ್ಲಿ ದಾಪುಗಾಲಿಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ದೇವನಹಳ್ಳಿಯು ಬೆಂಗಳೂರಿನ ಹೊಸ ಗುರುಗ್ರಾಮವಾಗುವ ಸಾಧ್ಯತೆ ಇದೆ ಎಂದು ಹೋಲಿಕೆ ಮಾಡಲಾಗಿದೆ. ದೇವನಹಳ್ಳಿಯ ಆಸ್ತಿ ಬೆಲೆಗಳು ಕಳೆದ ಆರು ವರ್ಷಗಳಲ್ಲಿ ಶೇ 49ರಷ್ಟು ಏರಿಕೆ ಕಂಡಿದೆ. 2019ರಲ್ಲಿ ಪ್ರತಿ ಚದರ ಅಡಿಗೆ 4,982 ಇದ್ದ ದರವು 2024ರ ಜುಲೈನಲ್ಲಿ ಪ್ರತಿ ಚದರ ಅಡಿಗೆ 7,400ಕ್ಕೆ ಏರಿದೆ.

ಇನ್ನು ದೇವನಹಳ್ಳಿ ಸುತ್ತಮುತ್ತ ಹಲವು ಬಿಲ್ಡರ್ ಸಂಸ್ಥೆಗಳು ಮುಗಿಲೆತ್ತರದ ಅಪಾರ್ಟ್‌ಮೆಂಟ್‌ಗಳನ್ನು ಈಗಾಗಲೇ ನಿರ್ಮಿಸಿವೆ. ಇದರ ಬೆಲೆ ₹1 ಕೋಟಿಯಿಂದ ಪ್ರಾರಂಭವಾಗಿ ₹4-5 ಕೋಟಿ ರೂಪಾಯಿಗೂ ಹೆಚ್ಚಿದೆ. ಮಾಲ್‌ಗಳು, ವಿಲ್ಲಾಗಳು, ಮನರಂಜನಾ ಕೇಂದ್ರಗಳು ಮತ್ತು ಇತರ ಆಧುನಿಕ ಸೌಕರ್ಯಗಳೊಂದಿಗೆ ಟೌನ್‌ಶಿಪ್‌ಗಳು ಕೂಡ ಇಲ್ಲಿಗೆ ಲಗ್ಗೆ ಇಟ್ಟಿವೆ. ಕಳೆದ ವರ್ಷ 2 ಬಿಎಚ್‌ಕೆ ಬಾಡಿಗೆ ಅಪಾರ್ಟ್‌ಮೆಂಟ್ ತಿಂಗಳಿಗೆ 18,000 ರೂಪಾಯಿ ಇತ್ತು, ಇದೀಗ ತಿಂಗಳ ಬಾಡಿಗೆ 25,000 ರೂಪಾಯಿ ತಲುಪಿದೆ ಎಂದು ವರದಿಯಾಗಿದೆ.












Click it and Unblock the Notifications