Bengaluru Property: ಪಾಲಿಕೆಯ ಎಲ್ಲ ಆಸ್ತಿಗಳ ಡಿಜಿಟಲೀಕರಣ, ಜಿಯೋ-ಟ್ಯಾಗಿಂಗ್‌ಗೆ ಸಿದ್ಧತೆ, ಪ್ರಾಪರ್ಟಿದಾರರಿಗೆ ಗುಡ್‌ನ್ಯೂಸ್
Bengaluru Property: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಆಸ್ತಿದಾರರಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಪಾಲಿಕೆಯ ಎಲ್ಲ ಆಸ್ತಿಗಳ ಸಮಗ್ರ ಡಿಜಿಟಲೀಕರಣ, ಜಿಯೋ-ಟ್ಯಾಗಿಂಗ್‌ಗೆ ಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಟ್ರಾಫಿಕ್ ಸಮಸ್ಯೆ ತಗ್ಗಿಸಲು ಮಾರೇನಹಳ್ಳಿ ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೂ ಚಿಂತನೆ ನಡೆಸಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಮಾರೇನಹಳ್ಳಿ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಾಣ, ಮಡಿವಾಳ ಕೆರೆ ಅಭಿವೃದ್ಧಿ, ಜಂಕ್ಷನ್‌ಗಳ ಅಭಿವೃದ್ಧಿ, ಪಾಲಿಕೆ ಹಾಗೂ ಸಾರ್ವಜನಿಕ ಆಸ್ತಿಗಳ ನಿರ್ವಹಣೆ ಕುರಿತಂತೆ ಚರ್ಚಿಸಲು ಬಿಬಿಎಂಪಿ ನಿವೃತ್ತ ಮುಖ್ಯ ಎಂಜಿನಿಯರರಾದ ಎಸ್. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ತಾಂತ್ರಿಕ ಸಲಹಾ ಸಮಿತಿ ಸಭೆ ಸೆಪ್ಟೆಂಬರ್ 30ರಂದು ನಡೆಯಿತು.

ಮಾರೇನಹಳ್ಳಿ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಚಿಂತನೆ
ಮಾರೇನಹಳ್ಳಿ ಜಂಕ್ಷನ್ 11ನೇ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಉಂಟಾಗುತ್ತಿದ್ದು ಇದನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮಾರೇನಹಳ್ಳಿ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಾಣ ಕುರಿತಂತೆ ಸಮಿತಿಯು ಸಾಧಕ ಬಾಧಕಗಳ ಕುರಿತು ಚರ್ಚಿಸಿತು. ಇದರಿಂದ ಸಿಲ್ಕ್ ಬೋರ್ಡ್ ನಿಂದ ಡಬಲ್ ಡೆಕ್ಕರ್ ಮೂಲಕ ಬರುವ ವಾಹನಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಮಿತಿಯು ತಿಳಿಸಿತು.
Bengaluru Property: ಆಸ್ತಿಗಳ ನಿಖರ ಜಿಯೋ-ಮ್ಯಾಪಿಂಗ್ ಹಾಗೂ ವರ್ಗೀಕರಣ
ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳು, ಆಸ್ಪತ್ರೆಗಳು, ಕ್ರೀಡಾಂಗಣಗಳು, ವಾಣಿಜ್ಯ ಮಳಿಗೆಗಳು, ಸಮುದಾಯ ಭವನಗಳು ಸೇರಿದಂತೆ 300ಕ್ಕೂ ಅಧಿಕ ಪ್ರಮುಖ ಸ್ಥಳಗಳು ಮತ್ತು ಸ್ವತ್ತುಗಳನ್ನು ಜಿಪಿಎಸ್ ಆಧಾರಿತ ಜಿಯೋ-ಲೊಕೇಶನ್ ಮೂಲಕ ಮ್ಯಾಪಿಂಗ್ ಮಾಡಲಾಗುತ್ತಿದೆ. ಪ್ರತಿಯೊಂದು ಆಸ್ತಿಯನ್ನು ವಾರ್ಡ್, ವಿಭಾಗ ಹಾಗೂ ಜೋನ್ ಮಟ್ಟದಲ್ಲಿ ಡಿಜಿಟಲ್ ನಕ್ಷೆಯೊಂದಿಗೆ ದಾಖಲಿಸಲಾಗುತ್ತಿದ್ದು, ಆಯಾ ಆಸ್ತಿಯ ವಿಸ್ತೀರ್ಣ, ಕಟ್ಟಡದ ಅಳತೆ, ಗಡಿ ಗುರುತುಗಳು ಮತ್ತು ಛಾಯಾಚಿತ್ರಗಳು ತಂತ್ರಾಂಶದಲ್ಲಿ ಲಭ್ಯವಾಗಲಿವೆ ಎಂದು ಸಮಿತಿ ತಿಳಿಸಿತು.
ಗುತ್ತಿಗೆ ಅವಧಿ ಪರಿಶೀಲನೆ ಹಾಗೂ ಆದಾಯ ಸೋರಿಕೆ ತಡೆಗೆ ಕ್ರಮ
ಪಾಲಿಕೆ ಆಸ್ತಿಗಳನ್ನು ಗುತ್ತಿಗೆ ಅಥವಾ ಬಾಡಿಗೆಗೆ ಪಡೆದಿರುವ ವಿವರಗಳು, ಗುತ್ತಿಗೆ ಕರಾರು ಪತ್ರಗಳು (MOU), ಅವಧಿ ಮುಕ್ತಾಯ ದಿನಾಂಕ ಹಾಗೂ ನಿಗದಿತ ಬಾಡಿಗೆ ದರಗಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದೆ. ಇದರಿಂದಾಗಿ ಗುತ್ತಿಗೆ ಅವಧಿ ಮುಗಿದ ಆಸ್ತಿಗಳನ್ನು ಪತ್ತೆಹಚ್ಚುವುದು, ನಿಯಮಾನುಸಾರ ಬಾಡಿಗೆ ದರ ಪರಿಷ್ಕರಿಸುವುದು ಮತ್ತು ಸಕಾಲದಲ್ಲಿ ಆದಾಯ ಸಂಗ್ರಹಿಸಲು ಸುಲಭವಾಗಲಿದೆ. ಅನಧಿಕೃತ ನಿರ್ವಹಣೆ ಹಾಗೂ ಆದಾಯ ಸೋರಿಕೆಗೂ ಸಹ ಇದು ಸಂಪೂರ್ಣ ಕಡಿವಾಣ ಹಾಕಲಿದೆ ಎಂದು ಸಮಿತಿ ತಿಳಿಸಿತು.
ತಳಮಟ್ಟದ ಪರಿಶೀಲನೆಗೆ ಮೊಬೈಲ್ ಆ್ಯಪ್ ಬಳಕೆ
ಕಚೇರಿಯಲ್ಲೇ ಕುಳಿತು ಪರಿಶೀಲನೆ ನಡೆಸುವುದರ ಜತೆಗೆ, ಸ್ಥಳ ಪರಿಶೀಲನೆ ನಡೆಸುವ ಅಧಿಕಾರಿಗಳಿಗಾಗಿ ವಿಶೇಷ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಎಂಜಿನಿಯರ್‌ಗಳು ಸ್ಥಳದಲ್ಲೇ ಭೇಟಿ ನೀಡಿ ಆಸ್ತಿಯ ವಸ್ತುಸ್ಥಿತಿ, ಫೋಟೋ ಮತ್ತು ದಾಖಲೆಗಳನ್ನು ಆ್ಯಪ್ ಮೂಲಕ ನವೀಕರಿಸಿ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಆಸ್ತಿಗಳ ಸಂಪೂರ್ಣ ಡಿಜಿಟಲ್ ರಿಜಿಸ್ಟರ್ ರೂಪಿಸುವ ಈ ಮಹತ್ವದ ಯೋಜನೆಯ ನಿರ್ವಹಣೆಯನ್ನು ಮುಂದಿನ ದಿನಗಳಲ್ಲಿ ಪಾಲಿಕೆಯ ಎಂಜಿನಿಯರ್‌ಗಳಿಗೆ ಸೂಕ್ತ ತರಬೇತಿ ನೀಡಿ ಹಸ್ತಾಂತರಿಸಲಾಗುವುದು ಎಂದು ಸಮಿತಿ ತಿಳಿಸಿದೆ.


Click it and Unblock the Notifications
