Bengaluru Property: ಬೆಂಗಳೂರಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಬ್ರೇಕ್ - ಆಸ್ತಿದಾರರಿಗೆ ಹೊಸ ಎಚ್ಚರಿಕೆ
Bengaluru Property: ಬೆಂಗಳೂರಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೊಸ ಎಚ್ಚರಿಕೆ ಕೊಟ್ಟಿದೆ. ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ಯಲಹಂಕ ಮಿನಿ ವಿಧಾನಸೌಧದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ, ಫ್ಲೈಓವರ್, ಅಂಡರ್‌ಪಾಸ್, ಕೆರೆ ಅಭಿವೃದ್ಧಿ, ಬೀದಿ ದೀಪ, ನೀರು ಸರಬರಾಜು, ಸ್ವಚ್ಛತೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಕುರಿತಂತೆ ಸಮಗ್ರ ಚರ್ಚೆ ನಡೆಸಲಾಯಿತು. ಯಲಹಂಕ ಫ್ಲೈಓವರ್ ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು. ಉತ್ತಮ ಗುಣಮಟ್ಟದ ಲೈಟಿಂಗ್ ಹಾಗೂ ಮಾದರಿ ಫ್ಲೈಓವರ್ ನಿರ್ಮಾಣ ಮಾಡುವಂತೆ ತಿಳಿಸಿದರು.

ಯಲಹಂಕ ರೈಲ್ವೆ ಸ್ಟೇಷನ್‌ನಿಂದ ಜಕ್ಕೂರುವರೆಗೆ ಹೊಸ ರಸ್ತೆ ನಿರ್ಮಾಣ ಮಾಡುವ ಕುರಿತು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಅತಿದೊಡ್ಡ ರೈಲ್ವೆ ಟರ್ಮಿನಲ್ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಅಗಲವಾದ ರಸ್ತೆ, ಅಂಡರ್‌ಪಾಸ್ ಹಾಗೂ ಫ್ಲೈಓವರ್ ನಿರ್ಮಾಣದ ಅಗತ್ಯವಿದೆ ಎಂದು ಅವರು ತಿಳಿಸಿದರು.
Bengaluru Property: ಅನಧಿಕೃತ ಕಟ್ಟಡ ನಿರ್ಮಾಣಗಳಿಗೆ ಅವಕಾಶ ಬೇಡ
ನಕ್ಷೆ ಅನುಮೋದನೆ ಇಲ್ಲದೆ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಹಾಗೂ ಖಾಸಗಿ ಸಂಸ್ಥೆಗಳ ನಿರ್ಮಾಣ ಕಾಮಗಾರಿಗಳೂ ಕಾನೂನುಬದ್ಧವಾಗಿಯೇ ನಡೆಯಬೇಕು ಎಂದು ಸೂಚಿಸಲಾಗಿದೆ. ನಕ್ಷೆ ಅನುಮೋದನೆ ಇಲ್ಲದೆ ಹಾಗೂ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಮುಂದಾದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ ಸರ್ಕಾರಿ ಕಟ್ಟಡಗಳು, ಸಮುದಾಯ ಭವನಗಳು, ಈಜುಕೊಳಗಳು, ಶೌಚಾಲಯಗಳ ನಿರ್ವಹಣೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಸುಧಾರಣೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ಇನ್ನು 51 ಅಂಗಡಿಗಳನ್ನು ಒಳಗೊಂಡ ಫುಡ್ ಕೋರ್ಟ್ ಮತ್ತು ಫುಡ್ ಸ್ಟ್ರೀಟ್ ಅಭಿವೃದ್ಧಿ ಕುರಿತು ಶಾಸಕರು ಚರ್ಚಿಸಿ, ವಿವಿಧ ರೀತಿಯ ಆಹಾರ ಮಳಿಗೆಗಳಿಗೆ ಅವಕಾಶ ಕಲ್ಪಿಸಿ, ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ಮಾದರಿ ಫುಡ್ ಸ್ಟ್ರೀಟ್ ನಿರ್ಮಾಣ ಮಾಡುವಂತೆ ತಿಳಿಸಲಾಗಿದೆ. ಅಲ್ಲಾಳಸಂದ್ರ ಕೆರೆಯ ನಿರ್ವಹಣೆಯನ್ನು ಶಾಸಕರು ಪ್ರಶಂಸಿಸಿ, ಇತರ ಕೆರೆಗಳು, ಉದ್ಯಾನವನಗಳು ಹಾಗೂ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು. ಅಗತ್ಯವಿದ್ದಲ್ಲಿ ಅನುದಾನ ಒದಗಿಸುವ ಭರವಸೆಯನ್ನೂ ನೀಡಿದರು.
ಮುಂದುವರಿದು ಬೀದಿ ದೀಪಗಳ ನಿರ್ವಹಣೆ ಕುರಿತು ಮಾಹಿತಿ ಪಡೆದ ಶಾಸಕರು, ಎಲ್ಲಾ ಬೀದಿ ದೀಪಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಹಾಗೂ ವಿದ್ಯುತ್ ಉಳಿತಾಯದೊಂದಿಗೆ ಉತ್ತಮ ಗುಣಮಟ್ಟದ ಲೈಟಿಂಗ್ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. BWSSB ವತಿಯಿಂದ ರಸ್ತೆ ಅಗೆದು ಕಾಮಗಾರಿ ನಡೆಸುವ ವಿಚಾರವಾಗಿ ಚರ್ಚೆ ನಡೆಸಿದ ಶಾಸಕರು, ಇಲಾಖೆಗಳ ನಡುವೆ ಸಮನ್ವಯತೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಕೆಲವು ಮಾಂಸ ಹಾಗೂ ಮೀನಿನ ಅಂಗಡಿಗಳು ಮಾಂಸದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಖಾಲಿ ಜಾಗಗಳಲ್ಲಿ ಎಸೆಯುತ್ತಿರುವುದು ಕಂಡುಬಂದಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಲವಾರು ವ್ಯಾಪಾರಸ್ಥರು ಅಂಗಡಿ ಮುಂಭಾಗದ ಫುಟ್‌ಪಾತ್‌ಗಳನ್ನು ಪಾರ್ಕಿಂಗ್ ಹಾಗೂ ಇತರೆ ಉದ್ದೇಶಗಳಿಗೆ ಬಳಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದ ಶಾಸಕರು, ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಡುವಂತೆ ಸೂಚಿಸಿದರು.
ಸಭೆಯಲ್ಲಿ ನಗರ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಆರ್. ಲತಾ, ಅಪರ ಆಯುಕ್ತರು (ಕಂದಾಯ - ಪ್ರಭಾರ)ಪಲ್ಲವಿ, ಮುಖ್ಯ ಎಂಜಿನಿಯರರಾದ ಯಮುನಾ, ಕಾರ್ಯಪಾಲಕ ಎಂಜಿನಿಯರರು, ಅರಣ್ಯ, ಆರೋಗ್ಯ, ತೋಟಗಾರಿಕೆ, ಪಶುಪಾಲನಾ ವಿಭಾಗಗಳ ಅಧಿಕಾರಿಗಳು, BWSSB, BESCOM ಹಾಗೂ ಸಂಚಾರ ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.












Click it and Unblock the Notifications