ನಿರ್ಮಾಪಕ ಶಂಕರೇಗೌಡನ "ಒನ್ ಲವ್" ಡ್ರಗ್ ಸ್ಟೋರಿ ಕಹಾನಿ !
ಬೆಂಗಳೂರು, ಮಾರ್ಚ್ 24 : ಒನ್ ಲವ್ ಬೇಕು ಅಂದ್ರೆ ಸಾಕು ಹುಡುಗಿ ಬಂದು ಎದುರು ನಿಲ್ಲುತ್ತಿರಲಿಲ್ಲ. ಬದಲಿಗೆ ಕೈಗೆ ಮಾದಕ ವಸ್ತು ಸೇರುತ್ತಿತ್ತು. ಅದರ ನಶೆಯಲ್ಲಿ ಗಂಟೆಗಟ್ಟಲೇ ತೇಲಾಡುತ್ತಿದ್ದರು. ಇದಕ್ಕಾಗಿ ಭರ್ಜರಿ ಪಾರ್ಟಿಗಳು ಆಯೋಜನೆಯಾಗುತ್ತಿದ್ದವು !
Recommended Video
ಹೌದು. ಚಿತ್ರ ನಿರ್ಮಾಪಕ ಶಂಕರೇಗೌಡನ ಡ್ರಗ್ ಕಹಾನಿ ಇದು. ಬಿಗ್ ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ಬಂಧನದ ಜಾಡು ಹಿಡಿದು ಗೋವಿಂದಪುರ ಪೊಲೀಸರು ಡ್ರಗ್ ಜಾಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಡ್ರಗ್ ಡೀಲಿಂಗ್, ಡ್ರಗ್ ಪಾರ್ಟಿ ಆಯೋಜನೆ ಹಾಗೂ ಸೇವನೆ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಿರ್ಮಾಪಕ ಶಂಕರೇಗೌಡ ಅವರನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹದಿನಾಲ್ಕು ದಿನ ವಶಕ್ಕೆ ಪಡೆದಿದ್ದಾರೆ. ಶಂಕರೇಗೌಡನನ್ನು ವಿಚಾರಣೆ ನಡೆಸಿದಾಗ ಒನ್ ಲವ್ ಡ್ರಗ್ ಸ್ಟೋರಿ ಕಹಾನಿ ಹೊರಗೆ ಬಿದ್ದಿದೆ.
ಬಂಧಿತ ಆರೋಪಿ ಶಂಕರೇಗೌಡ ಬೆಂಗಳೂರಿನಲ್ಲಿ ಹೈಫೈ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಪ್ರತಿ ಪಾರ್ಟಿಗೂ ಡ್ರಗ್ ಪೆಡ್ಲರ್ಸ್ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು. ಮೊದಲನೇ ಮಹಡಿಯಲ್ಲಿ ಗುಂಡು, ತುಂಡು ಮೋಜು ಮಸ್ತಿ ಮಾಡುತ್ತಿದ್ದರು. ಕೆಳ ಮಹಡಿಯಲ್ಲಿ ಮಾದಕ ಲೋಕದ ನಶೆ ತುಂಬಿಕೊಳ್ಳುತ್ತಿತ್ತು. ಹಳೇ ಗಿರಾಕಿಗಳಿಗೆ ಮಾತ್ರ ನೆಲ ಮಹಡಿಗೆ ಪ್ರವೇಶ ಇರುತ್ತಿತ್ತು. ಹೀಗೆ ನಾನಾ ಪಾರ್ಟಿ ಆಯೋಜನೆ, ಡ್ರಗ್ ಸೇವನೆ, ಡ್ರಗ್ ಪೂರೈಕೆ ಆರೋಪದಲ್ಲಿ ಚಿತ್ರ ನಿರ್ಮಾಪಕ ಶಂಕರೇಗೌಡ ಸಿಕ್ಕಿಬಿದ್ದಿದ್ದಾರೆ.

ಇನ್ನು ಮಾದಕ ವಸ್ತುಗಳನ್ನು ಕೋಡ್ ವರ್ಕ್ ಇಟ್ಟುಕೊಂಡು ಪೂರೈಕೆ ಮಾಡುತ್ತಿದ್ದರು. ಒನ್ ಲವ್ ಎನ್ನುವ ಕೋಡ್ ವರ್ಡ್ ಇಟ್ಟುಕೊಂಡಿದ್ದರು. ಇದೇ ಕೋಡ್ ವರ್ಡ್ ಮೂಲಕ ಮಸ್ತಾನ್ ಡ್ರಗ್ ಪೂರೈಕೆ ಮಾಡುತ್ತಿದ್ದ. ಈ ಕುರಿತ ವಾಟ್ಸಪ್ ಚಾಟಿಂಗ್, ಮೆಸೆಜ್ ದಾಖಲೆಗಳನ್ನು ಗೋವಿಂದಪುರ ಪೊಲೀಸರು ಸಂಗ್ರಹಿಸಿದ್ದಾರೆ.

ಅಲ್ಲದೇ ಶಂಕರೇಗೌಡನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅಗತ್ಯ ಬಿದ್ದರೆ ಆತನ ಕೂದಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ ಡೀಲಿಂಗ್‌ನ್ನು ಸಿಸಿಬಿ ಪೊಲೀಸರು ಬಯಲಿಗೆ ಎಳೆದಿದ್ದರು. ಇತ್ತೀಚೆಗಷ್ಟೇ ರಚನೆಯಾದ ಹೊಸ ಠಾಣೆ ಗೋವಿಂದಪುರ. ಈ ಠಾಣೆಯ ಪೊಲೀಸ್ ಸಿಬ್ಬಂದಿ ಬಿಗ್ ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರನ ಜಾಡು ಹಿಡಿದು ಸ್ಯಾಂಡಲ್ ವುಡ್ ಡ್ರಗ್ ಡೀಲ್ ಎರಡನೇ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications