New Year: ಎಣ್ಣೆ ಏಟಲ್ಲಿ ಯಾರಾದ್ರೂ ಬಾಲ ಬಿಚ್ಚಿದ್ರೆ ಹೀಗ್ ಮಾಡಿ: ಬೌನ್ಸರ್‌ಗಳಿಗೆ ಪೊಲೀಸರ ಖಡಕ್ ಸೂಚನೆ
ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿಯ ಹೊಸ ವರ್ಷಾಚರಣೆಗೆ ಭರದ ಸಿದ್ಧತೆಗಳು ಗರಿಗೆದರಿವೆ. ಇನ್ನು ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸುವ ಹಿನ್ನೆಲೆ ಪೊಲೀಸರು ಕೂಡ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆ ಬೌನ್ಸರ್‌ಗಳಿಗೆ ಬೆಂಗಳೂರು ಪೊಲೀಸರು ವಿಶೇಷ ಸೂಚನೆಗಳನ್ನು ನೀಡಿದ್ದಾರೆ.
ಹೊಸ ವರ್ಷದಂದು ಬೆಂಗಳೂರಿನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಪಬ್‌ಗಳಲ್ಲಿ ಬೌನ್ಸರ್‌ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತದೆ. ಈ ಕಾರಣದಿಂದ ಬೌನ್ಸರ್‌ಗಳೊಂದಿಗೆ ಹೊಸ ವರ್ಷ ಆಚರಣೆ ಕುರಿತಾಗಿ ಪೊಲೀಸರು ವಿಶೇಷ ಸಭೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಹೆಚ್ಚು ಜನ ಸೇರುವ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿರುವ ಕ್ಲಬ್ ಹಾಗೂ ಪಬ್ಗಳಲ್ಲಿನ ಬೌನ್ಸರ್ಗಳು ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂಬುದರ ಕುರಿತಾಗಿ ಪೊಲೀಸರು ಸೂಚನೆಗಳನ್ನು ನೀಡಿದ್ದಾರೆ.
ವಿಶೇಷವಾಗಿ ಬೌನ್ಸರ್‌ಗಳಿಗೆ ಹೊಸ ವರ್ಷದಂದು ಯಾವ ರೀತಿ ಜನರೊಂದಿಗೆ ವರ್ತಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಬಾರ್, ರೆಸ್ಟೋರೆಂಟ್ ಹಾಗೂ ಪಬ್‌ಗಳಲ್ಲಿ ಮದ್ಯ ಸೇವಿಸಿ ಬರುವವರನ್ನು ಯಾವ ರೀತಿ ನಿಭಾಯಿಸಬೇಕು ಹಾಗೂ ಎಣ್ಣೆ ಅಮಲಿನಲ್ಲಿ ಜನರು ಅಸಭ್ಯವಾಗಿ ವರ್ತಿಸಿದರೆ, ಅವರ ಮೇಲೆ ನೇರವಾಗಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಅಂತವರನ್ನು ನೇರವಾಗಿ ಪೊಲೀಸರಿಗೆ ಒಪ್ಪಿಸುವಂತೆ ಖಡಕ್ ಆಗಿ ಹೇಳಿದ್ದಾರೆ.

ಬೆಂಗಳೂರು ಕೇಂದ್ರ ವಿಭಾಗದ ಪಬ್, ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರು, ಪಾರ್ಟಿ ಹಾಲ್ ಹಾಗೂ ಖಾಸಗಿ ಹೋಟೆಲ್ ಮ್ಯಾನೇಜರ್ಗಳ ಜೊತೆ ಪೊಲೀಸರು ವಿಶೇಷ ಸಭೆ ನಡೆಸಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಹೊಸ ವರ್ಷಾಚರಣೆಗೆ ಜಾರಿಯಾಗುವ ಮಾರ್ಗಸೂಚಿಯನ್ನು ಪಾಲಿಸುವ ಬಗ್ಗೆಯೂ, ಪಾರ್ಟಿಗಳನ್ನು ಆಯೋಜಿಸುವ ಬಗ್ಗೆ ಎಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಹೊಸ ವರ್ಷದ ನಿಮಿತ್ತ ಬೆಂಗಳೂರಿನ ಬೌನ್ಸರ್‌ಗಳೊಂದಿಗೆ ಸಭೆ ನಡೆಸಲಾಗಿದ್ದು, ಆ ದಿನ ಮನಬಂದಂತೆ ವರ್ತಿಸುವ ಸಾರ್ವಜನಿಕರ ಮೇಲೆ ಯಾವ ಕಾರಣಕ್ಕೂ ಹಲ್ಲೆಗೆ ಮುಂದಾಗಬಾರದು. ಬದಲಾಗಿ ಅವರಿಂಗೆ ಸಂಯಮದಿಂದ ವರ್ತಿಸಬೇಕು ಎಂದು ಸಲಹೆ ನೀಡಿರುವುದಾಗಿ ತಿಳಿದುಬಂದಿದೆ.

ಹೊಸವರ್ಷದ ಸಂಭ್ರಮದಲ್ಲಿ ಕೆಲವರು ಮದ್ಯ ಸೇವಿಸಿ, ಕೂಗಾಡುವುದು, ಚೀರಾಡುವುದು ಹಾಗೂ ರಸ್ತೆ ಮೇಲೆ ಬಂದು ಇತರರೊಂದಿಗೆ ಅನುಚಿತವಾಗಿ ವರ್ತಿಸುವುದು ಪ್ರತಿ ವರ್ಷವೂ ಸಾಮಾನ್ಯವಾಗಿದ್ದು, ಬೆಂಗಳೂರಿನಲ್ಲಿ ಇವುಗಳಿಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಬೌನ್ಸರ್‌ಗಳ ಜೊತೆಗೆ ವಿಶೇಷ ಸಭೆ ನಡೆಸಿ, ಸೂಚನೆ ನೀಡಿದ್ದಾರೆ.
ಹೊಸ ವರ್ಷಕ್ಕೆ ಹೆಸರುವಾಸಿಯಾಗಿರುವ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಅಂದು ಲಕ್ಷಾಂತರ ಮಂದಿ ಜನ ಸೇರುವುದರಿಂದ ಪೊಲೀಸರು ಕೂಡ ಹೈ ಅಲರ್ಟ್ ಆಗಿದ್ದಾರೆ. ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅಲ್ಲದೆ, ಆ ದಿನ ಈ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರು ನಿಯೋಜನೆಗೂ ಇಲಾಖೆ ಪ್ಲ್ಯಾನ್ ಮಾಡಿಕೊಂಡಿದೆ.












Click it and Unblock the Notifications