Bengaluru Parking: ಪಾರ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ; ಖಾಲಿ ನಿವೇಶನಕ್ಕೆ 100% ಆಸ್ತಿ ತೆರಿಗೆ ವಿನಾಯಿತಿ

ಬೆಂಗಳೂರಿನಲ್ಲಿ ಪಾರ್ಕಿಂಗ್ ನೀತಿ ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರ ನಗರಾಭಿವೃದ್ಧಿ ಇಲಾಖೆಯು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಬೆಂಗಳೂರು ನಗರದಲ್ಲಿ 1.28 ಕೋಟಿಗಿಂತ ಹೆಚ್ಚು ನೋಂದಾಯಿತ ವಾಹನಗಳಿದ್ದು, ಜೊತೆಗೆ ಬೇರೆಡೆ ನೋಂದಾಯಿತವಾಗಿ ಬೆಂಗಳೂರಿನಲ್ಲಿ ಬಳಕೆಯಾಗುತ್ತಿರುವ ಅಂದಾಜು 15-20 ಲಕ್ಷ ವಾಹನಗಳಿವೆ. ಹೀಗಾಗಿ ಬೆಂಗಳೂರಿನಲ್ಲಿ ಸುಮಾರು 1.5 ಕೋಟಿ ವಾಹನಗಳಿವೆ. ವಾಹನಗಳು ಸುಮಾರು ಶೇ.95ರಷ್ಟು ಅವಧಿಯಲ್ಲಿ, ಮನೆಗಳು, ಕಚೇರಿಗಳು ಅಥವಾ ಇತರೆ ಸ್ಥಳಗಳಲ್ಲಿ ನಿಲ್ಲಿಸಲಾಗಿರುತ್ತದೆ. ಇದರಿಂದಾಗಿ ಪಾರ್ಕಿಂಗ್ ನಿರ್ವಹಣೆಯು ನಗರದ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿ 2021ರಲ್ಲಿ ಪಾರ್ಕಿಂಗ್ ನೀತಿಯನ್ನು ಸರ್ಕಾರ ರೂಪಿಸಿದೆ. ಅದರಂತೆ ಕರಡು ನಿಯಮಗಳನ್ನು ರಚಿಸಿದ್ದು, ಸಾರ್ವಜನಿಕರ ಹಾಗು ಜನಪ್ರತಿನಿಧಿಗಳ ಸಲಹೆಗಳನ್ನು ಆಹ್ವಾನಿಸಿದೆ ಎಂದು ಹೇಳಲಾಗಿದೆ.

ನಗರದ ರಸ್ತೆಗಳ ಕೊರತೆ, ಕಿರಿದಾದ ರಸ್ತೆಗಳು ಮತ್ತು ಹೆಚ್ಚುತ್ತಿರುವ ಸಂಚಾರ ದಟ್ಟಣೆಯು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿವೆ. ವಾಹನಗಳ ಸಂಚಾರಕ್ಕಾಗಿ ನಿರ್ಮಿಸಲಾದ ರಸ್ತೆಗಳ ಬಹು ಭಾಗ ವಾಹನಗಳ ನಿಲುಗಡೆಗಷ್ಟೇ ಸೀಮಿತವಾಗಿದೆ. ವಾಹನಗಳ ನಿಲುಗಡೆಯಿಂದಾಗಿ ರಸ್ತೆಯ ಸಂಚಾರ ಸಾಮರ್ಥ್ಯವು ಅರ್ಧದಷ್ಟು ಕಡಿಮೆಯಾಗುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣದ ಅವಧಿಯು ಹೆಚ್ಚುತ್ತಿದೆ.

Bengaluru Parking Major Change Parking Rules 100 Property Tax Exemption for Vacant Plots What New Rules

ವಾಹನಗಳ ಅವ್ಯವಸ್ಥಿತ ನಿಲುಗಡೆಯಿಂದ ಪಾದಚಾರಿಗಳಿಗೆ ಅಡ್ಡಿಯುಂಟಾಗುತ್ತಿರುವುದಲ್ಲದೆ, ಮಕ್ಕಳು, ವಯಸ್ಸಾದವರು, ಮಹಿಳೆಯರು ಮತ್ತು ಸಾಮಾನ್ಯ ಜನರಿಗೆ ಹೆಚ್ಚಿನ ತೊಂದರೆಯಾಗು ಪಾದಚಾರಿಗಳ ಓಡಾಟಕ್ಕೆ ಆಗುವ ಅಡ್ಡಿಯಿಂದ ವಾಹನಗಳ ಬಳಕೆಯನ್ನು ದಿನೇದಿನೇ ಹೆಚ್ಚಿಸುತ್ತಿದೆ. ಸ್ಥಳೀಯರ, ಮಕ್ಕಳು ಮತ್ತು ವಯಸ್ಸಾದವರ ಸುರಕ್ಷಿತ ಬಳಕೆಗಾಗಿ ಇರುವ ವಸತಿ ಪ್ರದೇಶಗಳ ರಸ್ತೆಗಳು ಖಾಸಗಿ ವಾಹನಗಳ ಪಾಲಾಗುತ್ತಿವೆ. ಸಾರ್ವಜನಿಕರೆಲ್ಲರಿಗೂ ಸೇರಿದ ರಸ್ತೆಗಳು ಬಹುತೇಕ ಖಾಸಗಿ ಉಪಯೋಗಕ್ಕೆ ಸೀಮಿತವಾಗಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೇಳಿದೆ.

ಮುಂದುವರಿದು ರಸ್ತೆಗಳು ಅಮೂಲ್ಯ ಸಾರ್ವಜನಿಕ ಆಸ್ತಿ. ಇವುಗಳ ಮೇಲೆ ಎಲ್ಲರಿಗೂ ಸಮಾನ ಹಕ್ಕಿದೆ. ಈ ಆಸ್ತಿಗಳು ಎಲ್ಲರಿಗೂ ಸಮಾನವಾಗಿ ಸಿಗಬೇಕಾದರೆ ಖಾಸಗಿ ವಾಹನಗಳ ನಿಲುಗಡೆಗಾಗಿ ಬಳಸುವುದನ್ನು ನಿಯಂತ್ರಿಸಬೇಕಾಗುತ್ತದೆ. ಖಾಸಗಿ ವಾಹನಗಳಿಗೆ ನಿಲುಗಡೆ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯು ಪ್ರಮುಖವಾಗಿ ವಾಹನ ಮಾಲೀಕರದ್ದಾಗಿದ್ದು, ಸಾರ್ವಜನಿಕ ಸ್ಥಳಗಳ ಮೇಲಿನ ಸಾರ್ವಜನಿಕರ ಹಕ್ಕುಗಳು, ಖಾಸಗಿ ನಿಲುಗಡೆಯ ಅಗತ್ಯಗಳಿಗೆ ಬಳಕೆ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳ ಬಳಕೆಯಲ್ಲಿ ವಾಹನ ಮಾಲೀಕರು ಮತ್ತು ವಾಹನ ಮಾಲೀಕರಲ್ಲದವರ ಹಕ್ಕುಗಳ ನಡುವೆ ಸಮತೋಲನ ಇರಬೇಕಾಗುತ್ತದೆ.

ನಿಲುಗಡೆ (parking) ಮತ್ತು ಸಂಚಾರ ಸವಾಲುಗಳಿಗೆ ಮಾರ್ಗೋಪಾಯಗಳು

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಲ್ಲಿ (Peak hour) ವಾಹನಗಳ ಸರಾಸರಿ ವೇಗ ಗಂಟೆಗೆ 15ಕಿ.ಮೀ. ಇದ್ದರೆ, ಸರ್ಕಾರಿ ಬಸ್‌ಗಳ ಸರಾಸರಿ ವೇಗ ಗಂಟೆಗೆ 10 ಕಿ.ಮೀ. ಇರುತ್ತದೆ. ಸಂಚಾರ ದಟ್ಟಣೆಯು ಹೆಚ್ಚಾಗುತ್ತಲಿದ್ದು, ಸಂಚಾರ ಹದಗೆಡಲು ಪ್ರಮುಖ ಕಾರಣಗಳಲ್ಲಿ ಅನಿಯಂತ್ರಿತ ವಾಹನ ನಿಲುಗಡೆಯು ಒಂದಾಗಿರುತ್ತದೆ.

ಈ ಸಮಸ್ಯೆಗಳ ಕುರಿತು 19 ಮಾರ್ಚ್ 20260 ಅಂದಿನ ಉಪಮುಖ್ಯಮಂತ್ರಿ ಹಾಗೂ ಪ್ರಸ್ತುತ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ, ಬೆಂಗಳೂರಿನ ಎಲ್ಲಾ ಚುನಾಯಿತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಚರ್ಚಿಸಲಾಯಿತು. ಸದರಿ ಸಭೆಯಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂಬುದನ್ನು ಸರ್ವಾನುಮತದಿಂದ ನಿರ್ಧರಿಸಲಾಯಿತು. ಪಾರ್ಕಿಂಗ್ ನಿಯಂತ್ರಣ ಮಾಡಬೇಕಾದರೆ 'ಪಾರ್ಕಿಂಗ್ ನೀತಿ'ಯ ಅಗತ್ಯವಿದೆ.

ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಈ ಪಾರ್ಕಿಂಗ್ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿವೆ. ಬಹು-ಹಂತದ ಹಾಗೂ ಇತರ ರೀತಿಯ ಪಾರ್ಕಿಂಗ್ ಸೌಲಭ್ಯಗಳು ಅವಶ್ಯವಿವೆ. ಆದರೆ ರಸ್ತೆ-ಮೇಲಿನ ಅನಿಯಮಿತ ಪಾರ್ಕಿಂಗ್‌ ನಿಯಂತ್ರಣವಿಲ್ಲದೆ ಇಂತಹ ಸೌಲಭ್ಯಗಳು ಕಾರ್ಯಸಾಧ್ಯವಾಗುವುದಿಲ್ಲ. ಹೆಚ್ಚುವರಿ ಪಾರ್ಕಿಂಗ್ ಸಾಮರ್ಥ್ಯವನ್ನು ಸೃಜಿಸಲೂ ನಿಯಂತ್ರಣಾ ಚೌಕಟ್ಟಿನ ಅವಶ್ಯಕತೆಯಿದೆ.

Bengaluru Parking: ಹೊಸ ಪಾರ್ಕಿಂಗ್‌ ನೀತಿಗೆ ಕಾರಣ

* ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯಗಳನ್ನು ಹೆಚ್ಚಿಸಲು

* ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸೌಲಭ್ಯಗಳಾಗಿ ಪರಿವರ್ತಿಸಲು ಉತ್ತೇಜಿಸಲು;

* ಪಾರ್ಕಿಂಗ್‌ ಪದ್ಧತಿ ಅನುಪಾಲನೆಯನ್ನು ಪ್ರೋತ್ಸಾಹಿಸಲು;

* ಕಟ್ಟಡ ನಿಯಮಗಳ ಉಲ್ಲಂಘನೆ ಮತ್ತು ನಿಗದಿತ ಪಾರ್ಕಿಂಗ್ ಸ್ಥಳಗಳ ದುರ್ಬಳಕೆಯನ್ನು ತಡೆಯಲು;

* ರಸ್ತೆ-ಮೇಲಿನ ಪಾರ್ಕಿಂಗ್-ಅನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಹಾಗೂ ದರ ವಿಧಿಸಲು; ಮತ್ತು

* ಜಾರಿ ವ್ಯವಸ್ಥೆಯನ್ನು ಬಲಪಡಿಸಲು, ವಾಹನ ಮಾಲೀಕತ್ವ ಹೆಚ್ಚಿದಂತೆ ಸಮಸ್ಯೆಯೂ ಹೆಚ್ಚಳವಾಗಲಿದ್ದು, ಪಾರ್ಕಿಂಗ್ ನಿಯಂತ್ರಣವಿಲ್ಲದೆ ಹೋದಲ್ಲಿ, ಬೆಂಗಳೂರಿನ ದೀರ್ಘಕಾಲೀನ ಸುಸ್ಥಿರತೆ ಹಾಗೂ ವಾಸಯೋಗ್ಯತೆಯ ಮೇಲೆ ದುಷ್ಟ ಪರಿಣಾಮ ಉಂಟುಮಾಡುತ್ತದೆ. ಆದ್ದರಿಂದ ಸುಧಾರಣಾ ಬದಲಾವಣೆ ಅವಶ್ಯಕ.

ಕಟ್ಟಡಗಳಲ್ಲಿ ವಾಹನ ನಿಲುಗಡೆ ನಿಯಮಗಳ ಉಲ್ಲಂಘನೆ

ಕಟ್ಟಡ ನಿಯಮಾವಳಿಗಳಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಅಗತ್ಯವಿದ್ದರೂ ಸಹ ಕಳೆದ ಹಲವು ದಶಕಗಳಿಂದ ಹಲವಾರು ಕಟ್ಟಡಗಳನ್ನು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ಅಥವಾ ಪಾರ್ಕಿಂಗ್ ಜಾಗವನ್ನು ಬಿಡದೆ ನಿರ್ಮಿಸಲಾಗಿರುತ್ತದೆ. ಅನೇಕ ಕಟ್ಟಡಗಳಲ್ಲಿ ನಿಗಧಿಪಡಿಸಲಾದ ಪಾರ್ಕಿಂಗ್ ಸ್ಥಳಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಕರಡು ನಿಯಮಗಳು ಈ ದೀರ್ಘಕಾಲೀನ ಸಮಸ್ಯೆಗಳನ್ನು ಪರಿಹಾರ ಕ್ರಮಗಳನ್ನು ಪ್ರೋತ್ಸಾಹಿಸುವ, ನಿಯಂತ್ರಣ ಮತ್ತು ಜಾರಿ ವ್ಯವಸ್ಥೆಗಳ ಮೂಲಕ ಪರಿಹರಿಸುವ ಉದ್ದೇಶವನ್ನು ಹೊಂದಿರುತ್ತವೆ.

ಬೆಂಗಳೂರಿನ ಪ್ರಸ್ತುತ ಸಂಚಾರ ಮತ್ತು ಪಾರ್ಕಿಂಗ್ ಸವಾಲುಗಳಿಗೆ ಕಟ್ಟಡ ನಿಯಮಾವಳಿಗಳ ಉಲ್ಲಂಘನೆ, ಹೆಚ್ಚುವರಿ ನಿರ್ಮಾಣ, ಅಸಮರ್ಪಕ ಪಾರ್ಕಿಂಗ್, ಸಾಕಷ್ಟು ಅಗಲವಿಲ್ಲದ ರಸ್ತೆಗಳ ಪಕ್ಕದಲ್ಲಿ ಹೆಚ್ಚಿನ ಅಭಿವೃದ್ಧಿ ಹಾಗೂ ವಾಹನ ಮಾಲೀಕತ್ವದಲ್ಲಿನ ವೇಗದ ಬೆಳವಣಿಗೆ ಇವೆಲ್ಲವುಗಳೂ ಒಟ್ಟಾರೆ ಕಾರಣಗಳಾಗಿವೆ.

ಈ ಸಮಸ್ಯೆಗಳು ಹಲವು ದಶಕಗಳಿಂದಲೂ ಬೆಳೆದು ಬಂದಿದ್ದು, ಪ್ರಸ್ತುತ ಕಾರ್ಯಸಾಧ್ಯವಾಗುವಂತಹ ಮತ್ತು ಸುಸ್ಥಿರ ಪರಿಹಾರಗಳ ಜಾರಿ ಅನಿವಾರ್ಯ. ಇದಕ್ಕಾಗಿ ಕೆಲವು ಜನಪ್ರಿಯವಲ್ಲದ ಕಠಿಣ ಕ್ರಮಗಳು ಅವಶ್ಯ. ಆದರೆ ಸಾರ್ವಜನಿಕ ಹಿತಾಸಕ್ತಿ ಮತ್ತು ದೀರ್ಘಕಾಲೀನ ಪರಿಹಾರದ ದೃಷ್ಟಿಯಿಂದ ಇಂತಹ ಕ್ರಮಗಳು ಅತ್ಯಗತ್ಯವಾಗಿವೆ.

ಪ್ರಸ್ತಾವಿತ ಪಾರ್ಕಿಂಗ್ ನಿಯಮಗಳ ಹಿನ್ನೆಲೆ

ಕರ್ನಾಟಕ ಸರ್ಕಾರವು 2021ರ ಫೆಬ್ರವರಿ 02 ರಂದು ಸರ್ಕಾರಿ ಆದೇಶ ಸಂ. ಯುಡಿಡಿ 208 ಪಿ.ಆ‌ರ್.ಜೆ 2020ರ ಮೂಲಕ ಬೆಂಗಳೂರು ಪಾರ್ಕಿಂಗ್ ನೀತಿಯನ್ನು ಅನುಮೋದಿಸಿರುತ್ತದೆ. ಈ ನೀತಿಯ ಅನುಷ್ಟಾನಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ಕ್ಕಾಗಿ ಕರಡು ಪಾರ್ಕಿಂಗ್ ನಿಯಮಗಳನ್ನು ಪ್ರಸ್ತಾಪಿಸಿದೆ.

ನಗರ ಭೂ ಸಾರಿಗೆ ನಿರ್ದೇಶನಾಲಯವು (DULT) ಪ್ರಸ್ತುತ ಜಿಬಿಎ ವ್ಯಾಪ್ತಿಯಾದ ಹಿಂದಿನ ಬಿಬಿಎಂಪಿ ಪರಿಮಿತಿಗಳಲ್ಲಿ, ವ್ಯವಸ್ಥಿತ ಶುಲ್ಕ ಆಧಾರಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲು, ಬಿಬಿಎಂಪಿ, ಪ್ರಾದೇಶಿಕ ಸಾರಿಗೆ (RTO) ಮತ್ತು ಸಂಚಾರ ಪೊಲೀಸರೊಂದಿಗೆ ಸಮಾಲೋಚಿಸಿ ಆಗಸ್ಟ್ 2022ರಲ್ಲಿ ಪ್ರದೇಶ ಪಾರ್ಕಿಂಗ್ ಯೋಜನೆಗಳನ್ನು ಸಿದ್ಧಪಡಿಸಿರುತ್ತದೆ.

ಹಿಂದಿನ ಬಿಬಿಎಂಪಿಯು ಬೆಂಗಳೂರಿನಾದ್ಯಂತ ಸ್ಮಾರ್ಟ್ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದಕ್ಕಾಗಿ 2022ರ ಸೆಪ್ಟೆಂಬರ್ 7 ಮತ್ತು ಡಿಸೆಂಬರ್ 2 ರಂದು ಎರಡು ಬಾರಿ ಟೆಂಡರ್‌ಗಳನ್ನು ಆಹ್ವಾನಿ ತ್ತದೆ. ಪಾರ್ಕಿಂಗ್ ನಿರ್ವಹಣಾ ನಿಯಮಗಳ ಕೊರತೆ ಹಾಗು ಇತರೆ ಕಾರಣಗಳಿಗಾಗಿ ಸದರಿ ಟೆಂಡರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಬರಲಿಲ್ಲ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಥಾಪನೆಯಾದ ನಂತರ ಹಾಗೂ ಮಾರ್ಚ್ 19, 2026ರಂದು ನಡೆದ ಜನಪ್ರತಿನಿಧಿಗಳ ಸಭೆಯ ತೀರ್ಮಾನದ ಹಿನ್ನೆಲೆಯಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಸರ್ಕಾರವು, ವಿಶೇಷವಾಗಿ ಬೆಂಗಳೂರಿನ ನಿರಂತರ ಬೆಳವಣಿಗೆಯಿಂದಾದ ಪಾರ್ಕಿಂಗ್ ಮತ್ತು ಸಂಚಾರಿ ದಟ್ಟಣೆಯ ಸವಾಲುಗಳನ್ನು ಎದುರಿಸಲು, 2021ರ ಪಾರ್ಕಿಂಗ್ ನೀತಿಯಡಿ ನಿಯಮಗಳನ್ನು ರೂಪಿಸುವುದು ಅಗತ್ಯವೆಂದು ಪರಿಗಣಿಸಿದೆ.

ಪ್ರಸ್ತಾವಿತ ನಿಯಮಗಳನ್ನು ಜಿಬಿಎ, ಡಲ್ಟ್, ಡಿಟಿಸಿಪಿ, ಬಿಡಿಎ, ಬಿಎಂಆರ್‌ಸಿಎಲ್, ಬಿಎಂಟಿಸಿ ಮತ್ತು ಕೆ-ರೈಡ್ ಸೇರಿದಂತೆ ಸಂಬಂಧಪಟ್ಟ ಪಾಲುದಾರರೊಂದಿಗೆ ಸಮಾಲೋಚಿಸಿ ರೂಪಿಸಲಾಗಿದ್ದು, ಈ ನಿಯಮಗಳು ಸಂಪೂರ್ಣವಾಗಿ 2021ರಲ್ಲಿ ಅನುಮೋದಿಸಲಾದ ಪಾರ್ಕಿಂಗ್ ನೀತಿಯ ಆಧಾರದ ಮೇಲೆ ರೂಪಿಸಲಾಗಿದೆ.

ಪ್ರಸ್ತಾವಿತ ಪಾರ್ಕಿಂಗ್ ನಿಯಮಗಳ ಪ್ರಮುಖ ಅಂಶಗಳು

1)ಖಾಲಿ ನಿವೇಶನಗಳಿಗೆ ಆಸ್ತಿ ತೆರಿಗೆಯ ಪ್ರೋತ್ಸಾಹಕ (Incentives):

ರಸ್ತೆಯೇತರ ಪಾರ್ಕಿಂಗ್ ಸೌಲಭ್ಯವನ್ನು ಹೆಚ್ಚಿಸಲು ಮತ್ತು ಸಾರ್ವಜನಿಕ ರಸ್ತೆಗಳ ಮೇಲಿನ ಒತ್ತಡವನ್ನು ತಗ್ಗಿಸಲು, ಪ್ರಸ್ತಾವಿತ ನಿಯಮಗಳು ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಗಾಗಿ ಲಭ್ಯವಾಗುವಂತೆ ಮಾಡಲು ಪ್ರೋತ್ಸಾಹ ನೀಡುವುದು:

* ಶೇ.100ರಷ್ಟು ಆಸ್ತಿ ತೆರಿಗೆ ವಿನಾಯಿತಿ: ಬಹುಹಂತದ ಕಾರ್ ಪಾರ್ಕಿಂಗ್ (MLCP) ಅಥವಾ ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಒದಗಿಸುವ ಖಾಲಿ ನಿವೇಶನಗಳಿಗೆ ಆಸ್ತಿ ತೆರಿಗೆ ಸಂಪೂರ್ಣ ವಿನಾಯಿತಿ.

* ಶೇ.50ರಷ್ಟು ಆಸ್ತಿ ತೆರಿಗೆ ವಿನಾಯಿತಿ: ನೆಲ ಮಟ್ಟದ ಪಾರ್ಕಿಂಗ್‌ಗಾಗಿ ಬಳಸುವ ಖಾಲಿ ನಿವೇಶನಗಳಿಗೆ ಆಸ್ತಿ ತೆರಿಗೆಯಲ್ಲಿ ಶೇ.50ರಷ್ಟು ವಿನಾಯಿತಿ.

ಈ ಪ್ರೋತ್ಸಾಹಗಳೊಂದಿಗೆ ನಗರದಲ್ಲಿ ಹೆಚ್ಚುವರಿ ಪಾರ್ಕಿಂಗ್ ಸಾಮರ್ಥ್ಯವನ್ನು ಸೃಜಿಸುವುದಾಗಿ ಉದ್ದೇಶ ಹೊಂದಿದೆ.

2) ವೈಜ್ಞಾನಿಕ ಮತ್ತು ಶುಲ್ಕ- ಆಧಾರಿತ ಪಾರ್ಕಿಂಗ್‌ ವ್ಯವಸ್ಥೆ:

*ಪ್ರಸ್ತಾವಿತ ನಿಯಮಗಳು ವೈಜ್ಞಾನಿಕವಾಗಿ ರಚಿಸಲಾದ ಶುಲ್ಕ-ಆಧಾರಿತ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸುತ್ತವೆ.

*ಸಾರ್ವಜನಿಕ ಸಾರಿಗೆಯು ಖಾಸಗಿ ವಾಹನದ ಬಳಕೆಗೆ ಹೋಲಿಸಿದರೆ ಹೆಚ್ಚು ಆಕರ್ಷಕವಾಗುವಂತೆ ಮಾಡಲು ಪಾರ್ಕಿಂಗ್ ಶುಲ್ಕಗಳನ್ನು ನಿರ್ಧರಿಸುವುದು. ರಸ್ತೆಯ ವರ್ಗೀಕರಣ ಮತ್ತು ಪಾರ್ಕಿಂಗ್ ಸ್ಥಳದ ಅಂಶಗಳನ್ನು ಪರಿಗಣಿಸಿ ಶುಲ್ಕಗಳನ್ನು ನಿಗದಿಪಡಿಸುವುದು.

*ಸಾರ್ವಜನಿಕ ರಸ್ತೆಯೇತರ ಪಾರ್ಕಿಂಗ್ ಸೌಲಭ್ಯಗಳನ್ನು ದಿನನಿತ್ಯ ಬಳಸುವವರಿಗೆ ಮಾಸಿಕ ಪಾರ್ಕಿಂಗ್ ಪಾಸ್‌ಗಳ ವ್ಯವಸ್ಥೆಯನ್ನೂ ಸಹ ಕಲ್ಪಿಸುವುದು.

3) ರಸ್ತೆ-ಮೇಲೆ ಪಾರ್ಕಿಂಗ್ ಮಾಡುವುದರ ನಿಯಂತ್ರಣ:

ಸಂಚಾರ ದಟ್ಟಣೆ, ಪಾದಚಾರಿಗಳು ಮತ್ತು ಸಾರ್ವಜನಿಕ ಸಾರಿಗೆಗೆ ಉಂಟಾಗುವ ಅಡ್ಡಿಯನ್ನು ಕಡಿಮೆ ಮಾಡಲು ರಸ್ತೆ-ಮೇಲೆ ಪಾರ್ಕಿಂಗ್ ಮಾಡುವುದನ್ನು ನಿಯಂತ್ರಿಸುವುದು.

* ಹೆಚ್ಚಿನ ಸಂಚಾರವಿರುವ ಮಾರ್ಗಗಳಲ್ಲಿ ನಿಲುಗಡೆ ನಿಷೇಧ (No Parking): ಹೆಚ್ಚಿನ ಸಂಚಾರವಿರುವ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸುವುದು.

* ಸಂಚಾರಿ ದಟ್ಟಣೆ ಅವಧಿಯಲ್ಲಿ ನಿರ್ಬಂಧಗಳು: ಟ್ರಾಫಿಕ್ ಸುಧಾರಿಸಲು ಪ್ರಮುಖ ರಸ್ತೆಗಳಲ್ಲಿ ಗರಿಷ್ಠ ಸಂಚಾರಿ ಅವಧಿಯ ಪಾರ್ಕಿಂಗ್ ಮಾಡುವುದನ್ನು ನಿಯಂತ್ರಿಸುವುದು.

* ಸಾರಿಗೆ ಸೌಲಭ್ಯಗಳ ಸಮೀಪ ಪಾರ್ಕಿಂಗ್ ಮಾಡುವುದರ ನಿರ್ಬಂಧ: ನಿಗದಿತ ಬಹುಹಂತದ ಕಾರ್ ಪಾರ್ಕಿಂಗ್ ಸೌಲಭ್ಯಗಳ (MLCP) ಬಳಕೆಯನ್ನು ಉತ್ತೇಜಿಸಲು, ಅದರ ಸುತ್ತಮುತ್ತಲ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸುವುದು.
* ದೀರ್ಘಾವಧಿಯ ಪಾರ್ಕಿಂಗ್ ಮಾಡುವುದಕ್ಕೆ ಹೆಚ್ಚಿನ ಶುಲ್ಕ: ರಸ್ತೆಯ ಸ್ಥಳವನ್ನು ಆಕ್ರಮಿಸಿ ದೀರ್ಘಾವಧಿ ಪಾರ್ಕಿಂಗ್ ಮಾಡುವುದನ್ನು ತಡೆಯಲು ದೀರ್ಘಕಾಲೀನ ಪಾರ್ಕಿಂಗ್‌ಗಾಗಿ ಹೆಚ್ಚಿನ ಶುಲ್ಕ ವಿಧಿಸುವುದು.

4)ಕಠಿಣ ಜಾರಿಗೊಳಿಸುವಿಕೆ:

ಪಾಕಿ ಂಗ್ ನಿಯಮಗಳ ಯಶಸ್ವಿ ಅನುಷ್ಠಾನಕ್ಕೆ ಪರಿಣಾಮಕಾರಿ ಜಾರಿ ವ್ಯವಸ್ಥೆ ಅವಶ್ಯಕವಾಗಿರುತ್ತದೆ.

* ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಪಾಲಿಕೆಗಳ ವ್ಯಾಪ್ತಿಯೊಳಗೆ, ಸಕ್ಷಮ ಪ್ರಾಧಿಕಾರಗಳಾದ ಪೊಲೀಸ್ ಮತ್ತು ನಗರಪಾಲಿಕೆಗಳು ಪಾರ್ಕಿಂಗ್ ವಿನಿಯಮಗಳನ್ನು (Regulations) ಜಾರಿಗೊಳಿಸಲು ಅಧಿಕಾರವನ್ನು ನೀಡುವುದು.

ಜಿಬಿಎ ಪ್ರಸ್ತಾವಿತ ನಿಯಮಗಳು

* ಅನ್ವಯವಾಗುವ ಕಟ್ಟಡ ನಿಯಮಗಳಡಿ ಕಡ್ಡಾಯಗೊಳಿಸಿದ ಪಾರ್ಕಿಂಗ್ ವ್ಯವಸ್ಥೆಯನ್ನು ಒದಗಿಸಲು ವಿಫಲನಾದ; ಅಥವಾ

* ಗೊತ್ತುಪಡಿಸಲಾದ ಪಾರ್ಕಿಂಗ್ ಪ್ರದೇಶಗಳನ್ನು ಇತರೆ ಉದ್ದೇಶಗಳಿಗೆ ದುರ್ಬಳಕೆ ಮಾಡಿದ,
- ಕಟ್ಟಡ ಮಾಲೀಕರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದು.

* ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸಲು ಪಾರ್ಕಿಂಗ್ ಆದಾಯದ (Revenue) ವಿವರಗಳನ್ನು ನಿಯತಕಾಲಿಕವಾಗಿ ಪ್ರಕಟಿಸುವುದು. ಅಂಥ ಆದಾಯಗಳನ್ನು ಸಂಚಾರ ಸುಧಾರಣೆಗಳು, ಜಂಕ್ಷನ್ ಸುಧಾರಣೆಗಳು, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯಗಳಿಗೆ ಬಳಸಲಾಗುವುದು.

ಬಿಬಿಎಂಪಿ: 2021ರ ಪಾರ್ಕಿಂಗ್ ನೀತಿ

ಪ್ರಸ್ತಾವಿತ ಪಾರ್ಕಿಂಗ್ ನಿಯಮಗಳು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ 2021ರ ಪಾರ್ಕಿಂಗ್ ನೀತಿ ಆಧಾರಿತವಾಗಿವೆ. ಪ್ರಸ್ತಾಪಿತ ನಿಯಮಗಳು ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮತ್ತು ಬೆಂಗಳೂರಿನ ದೀರ್ಘಕಾಲದಿಂದ ಬಾಕಿ ಉಳಿದಿರುವ ಪಾರ್ಕಿಂಗ್ ಮತ್ತು ಸಂಚಾರಿ ಸವಾಲುಗಳನ್ನು ಪರಿಹರಿಸಲು ಅಗತ್ಯವಿರುವ ನಿಯಂತ್ರಣಾ ಚೌಕಟ್ಟನ್ನು ಬಲಪಡಿಸುವ ಉದ್ದೇಶ ಹೊಂದಿವೆ.

ಪಾರ್ಕಿಂಗ್ ನಿಯಂತ್ರಣಕ್ಕೆ ಅಸ್ತಿತ್ವದಲ್ಲಿರುವ ಪದ್ಧತಿಗಳಲ್ಲಿ ಬದಲಾವಣೆಗಳ ಅಂತೂ ಅತ್ಯಾವಶ್ಯಕ. ಜೊತೆಗೆ ಸಾರ್ವಜನಿಕ ರಸ್ತೆ, ಸ್ಥಳವನ್ನು ರಕ್ಷಿಸಲು, ಟ್ರಾಫಿಕ್ ಸುಧಾರಿಸಲು, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಮತ್ತು ಬೆಂಗಳೂರಿನ ಸುಸ್ಥಿರ ಅಭಿವೃದ್ಧಿಗಾಗಿ ಪರಿಣಾಮಕಾರಿ ನಿಯಮಗಳ ಜಾರಿ ಅನಿವಾರ್ಯ.

ಸಾರ್ವಜನಿಕ ಸಲಹೆಗಳಿಗೆ ಆಹ್ವಾನ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರದೇಶಕ್ಕಾಗಿ ಕರಡು ಪಾರ್ಕಿಂಗ್ ನಿಯಮಗಳನ್ನು ಸಾರ್ವಜನಿಕ ಸಲಹೆಗಳಿಗಾಗಿ ಆಗಸ್ಟ್ 10ರಂದು ಪ್ರಕಟಿಸಲಾಗಿದೆ. (https://udd.karnataka.gov.in/uploads/media_to_upload1788349636). ಇ-ಮೇಲ್ : [email protected]. 2026 ಸೆಪ್ಟೆಂಬರ್ 10 ಅಥವಾ ಅದಕ್ಕೂ ಮೊದಲು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಸಲ್ಲಿಸಬೇಕು ಎಂದು ಜಿಬಿಎ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+