Praveen Sood: ಬೆಂಗಳೂರು ಪೋಷಕರೇ ಎಚ್ಚರ, ನಿಮ್ಮ ಮಕ್ಕಳನ್ನು CBI ಬಂಧಿಸಿದೆ ಎಂದು ಪಾಕಿಸ್ತಾನದಿಂದ ಕರೆ ಬರುತ್ತೆ...
ಬೆಂಗಳೂರು, ಅಕ್ಟೋಬರ್ 24: ತಂತ್ರಜ್ಞಾನ ಹೆಚ್ಚಿದಂತೆಲ್ಲ ಒಂದು ಕಡೆ ಒಳಿತಾದರೆ, ಮತ್ತೊಂದು ಕಡೆ ಅದರ ದುರುಪಯೋಗ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಇಂಟರ್‌ನೆಟ್ ಯುಗದಲ್ಲಿ ಸೈಬರ್ ವಂಚನೆಗಳು ಹೊಸ ಹೊಸ ಸ್ವರೂಪದಲ್ಲಿ ತಲೆ ಎತ್ತುತ್ತಿವೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಪೋಷಕರಿಗೆ ಪಾಕಿಸ್ತಾನ ಸಂಖ್ಯೆಯಿಂದ (92...) ವಾಟ್ಸಾಪ್ ಕಾಲ್ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ.
ಹೌದು, ಕೇಂದ್ರ ತನಿಖಾ ದಳ (CBI) ಅಧಿಕಾರಿಗಳು, ದೆಹಲಿ ಪೊಲೀಸರು ಎಂದು ಹೇಳಿಕೊಂಡು ಪೋಷಕರಿಗೆ ಕರೆ ಮಾಡುತ್ತಿದ್ದಾರೆ. ಇತ್ತೀಚೆಗೆ ಪೋಷಕರೊಬ್ಬರಿಗೆ ಈ 92 316 5788678 ಸಂಖ್ಯೆಯಿಂದ ವಾಟ್ಸಾಪ್ ಕರೆ ಮಾಡಿ ಹಣ ಸುಲಿಗೆಗೆ ಯತ್ನಿಸಿದ ಘಟನೆ ಬುಧವಾರ (ಅಕ್ಟೋಬರ್ 23) ಬೆಂಗಳೂರಿನಲ್ಲಿ ನಡೆದಿದೆ. ಅವರು ವಿವೇಕ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಪರ್ಯಾಸವೆಂದರೆ, ಈ ವಿವೇಕ್ ನಗರ ಠಾಣೆಯ ಪೊಲೀಸರೊಬ್ಬರೇ ಇಂಥದ್ದೊಂದು ಕರೆ ಸ್ವೀಕರಿಸಿ Rs 5000 ಹಣ ಕಳೆದಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಂದರೆ ಇಂತಹ ಬೆದರಿಕೆ, ಸೈಬರ್ ವಂಚನೆ, ಅಸುರಕ್ಷತೆ ವಿರುದ್ಧ ಕೇಂದ್ರವಾಗಲಿ, ರಾಜ್ಯ ಸರ್ಕಾರವಾಗಲಿ ಹೋರಾಡಲು ಶಕ್ತವಿಲ್ಲವೆ? ಎಂದು ಪೋಷಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ದೂರು ಸ್ವೀಕರಿಸಿದ ಠಾಣೆ ಪೋಲೀಸರು ಆ ವಾಟ್ಸಾಪ್ ಸಂಖ್ಯೆಯನ್ನು ಬ್ಲಾಕ್ ಮಾಡುವಂತೆ ಸೂಚಿಸಿದ್ದಾರೆ.
CBI ಪ್ರವೀಣ್ ಸೂದ್ ಹೆಸರಿನಲ್ಲಿ ವಂಚನೆಗೆ ಯತ್ನ
ಬೆಂಗಳೂರು ಪೋಷಕರನ್ನು ಟಾರ್ಗೆಟ್ ಮಾಡಿರುವ ವಂಚಕರು ಪಾಕಿಸ್ತಾನ ನಂಬರ್‌ನಿಂದ ವಾಟ್ಸಪ್ ಕಾಲ್ ಮಾಡುತ್ತಿದ್ದಾರೆ. ಅವರ 92 316 5788678 ಸಂಖ್ಯೆಯ ವಾಟ್ಸಾಪ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರ ಫೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.

ನೋಡುತ್ತಿದ್ದಂತೆ ನಿಜವಾಗಿಯೂ ಸಿಬಿಐ ನಿರ್ದೇಶಕರೇ ಕರೆ ಮಾಡಿದ್ದಾರೆ ಎಂದು ನಂಬುವಂತೆ ಮಾತನಾಡುತ್ತಾರೆ. ಪೋಷಕರನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದಾರೆ. ಇದರಿಂದ ಅದೇಷ್ಟೋ ಪೋಷಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ವಾಟ್ಸಾಪ್ ಕರೆ ಮಾಡಿ ಹೇಳುವುದೇನು?
ನೆನ್ನೆ ಬುಧವಾರ (ಅಕ್ಟೋಬರ್ 23) ಬೆಂಗಳೂರಿನ ಖಾಸಗಿ ಕಂಪನಿಯು ಮಹಿಳಾ ಉದ್ಯೋಗಿಯೊಬ್ಬರಿಗೆ ಕರೆ ಮಾಡಿರುವ ವಂಚಕರು ತಾವು ದೆಹಲಿ ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ನಿಮ್ಮ ಮಗನನ್ನು ಡ್ರಗ್ಸ್ ಕೇಸಿನಲ್ಲಿ ಬಂಧಿಸಿದ್ದೇವೆ. ಮಗನನ್ನು ಬಿಡಲು ಸಾವಿರಾರು ರೂಪಾಯಿ ಹಣ ಕೂಡಲೇ ಟ್ರಾನ್ಸ್‌ಫರ್ ಮಾಡುವಂತೆ ಸೂಚಿಸಿದ್ದಾರೆ. ವಾಟ್ಸಾಪ್ ಕರೆ ಕಟ್ ಮಾಡಿದಂತೆ ಎಚ್ಚರಿಕೆ ನೀಡಿದ್ದಾರೆ. ಕರೆ ಕಟ್ ಮಾಡಿದರೆ ಮೇಲಿಂದ ಮೇಲೆ ಹತ್ತಾರು ಬಾರಿ ಕರೆ ಮಾಡಿ ಬೆದರಿಸಿದ್ದಾರೆ.
ಕೂಡಲೇ ಮಹಿಳಾ ಉದ್ಯೋಗಿಯು ಕರೆ ಕಟ್ ಮಾಡಿ ಮಗನಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಅವರ ಮಗ ತರಗತಿಯಲ್ಲಿ ಕುಳಿತಿರುವುದಾಗಿ ತಿಳಿಸಿದ್ದು ಕೇಳಿ ಅವರಿಗೆ ಧೈರ್ಯ ಬಂದಂತಾಗಿದೆ. ಕೂಡಲೇ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಕ್ಕಳ ವಿಚಾರದಲ್ಲಿ ಏನಾಗಿಬಿಡತ್ತೋ ಎಂದು ಎಂಥವರಿಗಾದರೂ ಸಹಜವಾಗಿಯೇ ಒಂದಷ್ಟು ಭಯ ಕಾಡುತ್ತದೆ. ಆ ಭಯದಲ್ಲಿ ಅನೇಕ ಪೋಷಕರು ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರ್ಕಾರಗಳು, ಪೊಲೀಸ್ ಇಲಾಖೆ ಪರಿಣಾಮಕಾರಿ ತುರ್ತು ಕ್ರಮವಹಿಸಬೇಕಿದೆ.
ಬೆಂಗಳೂರಿನಲ್ಲಿ ಈ ಘಟನೆಗಳು ಮರುಕಳಿಸುತ್ತಲೇ ಇವೆ
ಯಾರೋ ಒಬ್ಬರಿಗೆ ಮಾತ್ರವಲ್ಲ ಕಳೆದ ಒಂದೆರಡು ವಾರಗಳಲ್ಲಿ ಇಂತಹ ವಾಟ್ಸಾಪ್ ಕರೆಗಳು ಅನೇಕ ಪೋಷಕರಿಗೆ ಬಂದಿವೆ. ಪೋಷಕರನ್ನೇ ಹುಡುಕಿ ಹುಡುಕಿ ಟಾರ್ಗೆಟ್ ಮಾಡಿ ಕರೆ ಮಾಡಲಾಗುತ್ತಿದೆ. ಇನ್ನೊಂದು ಪ್ರಕರಣದಲ್ಲಿ ಇದೇ ರೀತಿ ಕರೆ ಮಾಡಿ ನಿಮ್ಮ ಮಗನನ್ನು ಬಂಧಿಸಿದ್ದೇವೆ ಎಂದು ಬೆದರಿಸಿದ್ದಾರೆ. ಆದರೆ ಅವರ ಮಗ ಪಕ್ಕದ ಕೋಣೆಯಲ್ಲಿ ಮೊಬೈಲ್‌ನಲ್ಲಿ ಆಟವಾಡುತ್ತಿದ್ದರಂತೆ. ಹೀಗೆ ಸುಳ್ಳು ಕರೆ, ಬೆದರಿಕೆ ಮೂಲಕ ವಂಚಿಸುವ ಜಾಲ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ಆದ್ದರಿಂದ ಪೋಷಕರು ಯಾವುದೇ ಫೇಕ್ ಕಾಲ್ ಸ್ವೀಕರಿಸಬಾರದು. ಸ್ವೀಕರಿಸಿದರೂ ಧೈರ್ಯಗುಂದೇ, ಯಾವುದನ್ನು ನಂಬದೇ ಹತ್ತಿರ ಪೊಲೀಸ್ ಠಾಣೆಯ ಗಮನಕ್ಕೆ ತರುವಂತೆ 'ಒನ್ಇಂಡಿಯಾ ಕನ್ನಡ' ಮನವಿ ಮಾಡಿಕೊಂಡಿದೆ..












Click it and Unblock the Notifications