Bangaluru: ಯುವತಿ ಕಾರಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
ಬೆಂಗಳೂರು ಫೆಬ್ರವರಿ 23: ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದ ಪ್ರೇಮಿಯೊಬ್ಬ ಯುವತಿ ಒಪ್ಪಿಗೆ ನೀಡದಿದ್ದಕ್ಕೆ ಆಕೆಯ ಕಾರಿಗೆ ಬೆಂಕಿ ಹಚ್ಚಿ ಹುಚ್ಚಾಟವನ್ನು ಮೆರೆದಿದ್ದಾನೆ. ಬೆಂಗಳರಿನಲ್ಲಿ ರಾಹುಲ್ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಕೋಪಗೊಂಡ ರಾಹುಲ್ ಆಕೆಯ ಕಾರಿಗೆ ಬೆಂಕಿ ಹಚ್ಚಿದ್ದಾನೆ.
ಹೌದು.. ಬೆಂಗಳೂರಿನ ಸುಬ್ರಹ್ಮಣ್ಯಪುರದ ಶ್ರೀನಿಧಿ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಯುವತಿಯ ಕಾರು ಹಾಗೂ ಬೈಕ್‌ಗೆ ರಾಹುಲ್ ಎಂಬಾತ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಈ ಕೃತ್ಯವನ್ನು ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಕಾರು ಬೈಕ್‌ಗೆ ಬೆಂಕಿ ಹಚ್ಚಿದ ಬೆನ್ನಲ್ಲೆ ಪಾರ್ಕಿಂಗ್‌ನಲ್ಲಿ ಇದ್ದ ಉಳಿದ ಕಾರುಗಳಿಗೂ ಹಾನಿಯಾಗಿದೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ದಟ್ಟವಾದ ಬೆಂಕಿ ಕೆನ್ನಾಲಿಗೆಗೆ ಘಟನಾ ಸ್ಥಳದಲ್ಲಿ ಇದ್ದ ಬೇರೊಂದು ಕಾರು ಕೂಡ ಸುಟ್ಟಿದೆ. ಸಾಮಾನ್ಯವಾಗಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು ಇರುತ್ತಾರೆ. ಈ ಘಟನಾ ಸ್ಥಳದಲ್ಲಿಯೂ ಕೂಡ ಸೆಕ್ಯೂರಿಟಿ ಗಾರ್ಡ್ ಇದ್ದರು. ಆದರೂ ಕೂಡ ಅವರ ಕಣ್ಣೆದುರೇ ಯುವಕ ಕಾರಿಗೆ ಬೆಂಕಿ ಹಚ್ಚಿ ದರ್ಪ ತೋರಿದ್ದಾನೆ.
ಸುಬ್ರಹ್ಮಣ್ಯಪುರದ ಶ್ರೀನಿಧಿ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ನಾಲ್ಕು ಜನ ಯುವಕರ ಗುಂಪು ಕೈಯಲ್ಲಿ ಲಾಂಗ್ ಹಾಗೂ ಮಚ್ಚುಗಳನ್ನು ಹಿಡಿದುಕೊಂಡಿತ್ತು. ಈ ಯುವರು ಅಪಾರ್ಟ್‌ಮೆಂಟ್ ಗೇಟ್ ಬಳಿ ಇದ್ದ ಸೆಕ್ಯೂರಿಟಿ ಗಾರ್ಡ್‌ಗೆ ಲಾಂಗ್ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾರೆ. ಆಗ ಸೆಕ್ಯೂರಿಟಿ ಗಾರ್ಡ್ ಹೆದರಿಕೊಂಡಿದ್ದಾರೆ.
ಈ ಯುವಕರ ಗುಂಪು ಯುವತಿಯ ಫೋಟೋ ತೋರಿಸಿ ಆಕೆಯ ಕಾರು ಯಾವುದು ಎಂದು ಸೆಕ್ಯೂರಿಟಿ ಗಾರ್ಡ್‌ಗೆ ಪ್ರಶ್ನೆ ಮಾಡಿದ್ದಾರೆ. ಹೆದರಿಕೊಂಡ ಸೆಕ್ಯೂರಿಟಿ ಗಾರ್ಡ್ ಯುವತಿಯ ಕಾರನ್ನು ತೋರಿಸಿದ್ದಾರೆ. ಆಗ ಆ ಯುವಕರು ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿ ಹಾಕಿದ್ದಾರೆ. ಅಷ್ಟಾದರೂ ಬಿಡದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ.

ಬೆಂಕಿ ಹೊತ್ತಿ ಉರಿದಾಗ ಅಪಾರ್ಟ್‌ಮೆಂಟ್ ಜನ ಬೆಚ್ಚಿ ಬಿದ್ದಿದ್ದಾರೆ. ನೀರಿನಿಂದ ಬೆಂಕಿ ಆರಿಸಲು ಪ್ರಯತ್ನಪಟ್ಟಿದ್ದಾರೆ. ಜೊತೆಗೆ ಅಗ್ನಿ ಶಾಮಕದಳ ಸಿಬ್ಬಂದಿಗೂ ಕರೆ ಮಾಡಿ ಸಹಾಯ ಬೇಡಿದ್ದರು. ಪೆಟ್ರೋಲ್ ಸುರಿದ ಕಾರಣ ಯುವತಿಯ ಕಾರು, ಬೈಕ್ ಹಾಗೂ ಪಕ್ಕದಲ್ಲಿ ಮತ್ತೊಂದು ಕಾರು ಸುಟ್ಟು ಕರಕಲಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಇದ್ದ ಜನ ಆತಂಕಕಗೊಂಡು ಹೊರಗಡೆ ಓಡಿ ಬಂದಿದ್ದಾರೆ. ಬೆಂಕಿ ಧಗಧಗಿಸಿದ್ದರಿಂದ ಅಪಾರ್ಟ್‌ಮೆಂಟ್ ತುಂಬೆಲ್ಲಾ ದಟ್ಟ ಹೊಗೆ ಆವರಿಸಿ ಕೆಲ ಹೊತ್ತು ಭಯದ ವಾತಾವರಣ ಸೃಷ್ಟಿಯಾಗಿತ್ತು. ಕೆಲ ಗಂಟೆಗಳ ಬಳಿಕ ಬೆಂಕಿ ನಂದಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಬಳಿಕ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ. ಕಾರಿಗೆ ಬೆಂಕಿ ಹಚ್ಚಲು ಪ್ರೀತಿಯೊಂದೇ ಕಾರಣನಾ ಅಥವಾ ಬೇರೆ ಕಾರಣ ಏನಾದ್ರು ಇತ್ತಾ ಎನ್ನುವ ಬಗ್ಗೆ, ಎಲ್ಲಾ ಆಯಾಮಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆ ಬಳಿಕ ರಾಹುಲ್ ತಲೆಮರಿಸಿಕೊಂಡಿದ್ದು ಪೊಲೀಸರು ಆರೋಪಿ ಹುಡುಕಾಟವನ್ನು ಚುರುಕುಗೊಳಿಸಿದ್ದಾರೆ.












Click it and Unblock the Notifications