Bengaluru News: ಶಿಲ್ಪಾ ನಾಗ್‌ಗೆ ನೂತನ ಆಯುಕ್ತರ ಜವಾಬ್ದಾರಿ; ಹೋಟೆಲ್ ಈಜುಕೊಳದಲ್ಲಿ ಇಬ್ಬರು ವಿದೇಶಿಗರ ಸಾವು
ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ನೂತನ ಆಯುಕ್ತರಾಗಿ ಶಿಲ್ಪಾ ನಾಗ್ ಸಿ.ಟಿ., ಐಎಎಸ್ ಅವರು ಅಕ್ಟೋಬರ್ 31ರ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಸ್ಥಾನಾಂತರಗೊಂಡ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ., ಐಎಎಸ್ ಅವರು ಅಧಿಕಾರ ಹಸ್ತಾಂತರಿಸಿ ಶುಭಹಾರೈಸಿದ್ದಾರೆ. ಡಾ. ರಾಜೇಂದ್ರ ಕೆ.ವಿ.ಅವರು ಕೇಂದ್ರ ಸರ್ಕಾರದ ನಿಯೋಜನೆ (Central Deputation) ಮೇರೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಶಿಲ್ಪಾ ನಾಗ್ ಅವರು ನೂತನ ಆಯುಕ್ತರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಡಾ. ರಾಜೇಂದ್ರ ಕೆ.ವಿ.ರವರು, ನೂತನ ಆಯುಕ್ತರಿಗೆ ಪಾಲಿಕೆಯ ಗುರಿ, ಕೆಲಸಗಳ ಪ್ರಗತಿ ಹಾಗೂ ಸವಾಲುಗಳ ಕುರಿತಂತೆ ವಿವರಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿರುವ ʼವಾರ್ಡ್ ಒನ್ʼ ಅಭಿಯಾನ, ಇ-ಖಾತಾ ಓಪನ್ ಹೌಸ್ ಕಾರ್ಯಕ್ರಮ ಸೇರಿದಂತೆ ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಅಭಿಯಾನ, ಸಿಎಂಐಡಿಪಿ, ಸಿಎಸ್ಎಸ್ಐಪಿ ಕಾಮಗಾರಿಗಳು, ಜಂಕ್ಷನ್ ಅಭಿವೃದ್ಧಿ ಉಪಕ್ರಮ ಮತ್ತಿತರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಒಳನೋಟ ನೀಡಿದರು.

ಕಾಮಗಾರಿ ವಿಭಾಗ, ಕಂದಾಯ, ತೋಟಗಾರಿಕೆ, ಆರೋಗ್ಯ, ವಿದ್ಯುತ್, ಅರಣ್ಯ, ಪಶುಪಾಲನೆ, ಕಲ್ಯಾಣ, ಘನತ್ಯಾಜ್ಯ ನಿರ್ವಹಣೆ, ಕೆರೆ, ವಿಶೇಷ ವಿಭಾಗ, ಜಾಹೀರಾತು, ಎಸ್ಟೇಟ್, ಮಾರುಕಟ್ಟೆ, ಟಿವಿಸಿಸಿ, ಟೌನ್ ವೆಂಡಿಂಗ್ ಸೇರಿದಂತೆ ಪಾಲಿಕೆಯ ಎಲ್ಲ ವಿಭಾಗಗಳು ಹಾಗೂ ಮುಖ್ಯಸ್ಥರನ್ನು ಪರಿಚಯಿಸಿ, ವಿಭಾಗಗಳ ಕೆಲಸ ಕಾರ್ಯಗಳು ಹಾಗೂ ಸಾಧಕ-ಬಾಧಕ ಕುರಿತಂತೆ ನೂತನ ಆಯುಕ್ತರ ಗಮನಕ್ಕೆ ತರಲಾಯಿತು.
ನೂತನ ಆಯುಕ್ತರು ಮಾತನಾಡಿ, ಪಾಲಿಕೆಯ ಗುರಿ ಮತ್ತು ಸವಾಲುಗಳ ಕುರಿತಂತೆ ಮಾರ್ಗದರ್ಶನಕ್ಕಾಗಿ ನಿರ್ಗಮಿತ ಆಯುಕ್ತರಿಗೆ ಕೃತಜ್ಞತೆ ತಿಳಿಸಿದರು. ಸವಾಲುಗಳಿದ್ದಲ್ಲಿ ಕೆಲಸ ಮಾಡಲು ಹುಮ್ಮಸ್ಸು ದೊರೆಯುತ್ತದೆ. ಪಾಲಿಕೆಯ ಅಭಿವೃದ್ಧಿಗೆ ಆಯುಕ್ತರು ಅಡಿಗಲ್ಲು ಹಾಕಿದ್ದು, ಮುಂದುವರಿಯಲು ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದು, ಸಂತೋಷ ತಂದಿದೆ. ಅಭಿವೃದ್ಧಿಯತ್ತ ಸಾಗುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ತಂಡವಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.
ಶ್ವಾನಗಳ ಮೈಕ್ರೋ ಚಿಪ್ಪಿಂಗ್ ಕಾರ್ಯಕ್ರಮವನ್ನು ಪೈಲೆಟ್ ಆಗಿ ಆರಂಭಿಸುವಂತೆ ಹಾಗೂ ಕಲ್ಯಾಣ ವಿಭಾಗಕ್ಕೆ ಸಂಬಂಧಿಸಿದಂತೆ ಡೇಟಾ ಎಂಟ್ರಿ ಕೆಲಸವನ್ನು ಶೀಘ್ರವಾಗಿ ಮುಗಿಸುವಂತೆ ನೂತನ ಆಯುಕ್ತರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನ 5 ಸ್ಟಾರ್ ಹೋಟೆಲ್‌ನ ಈಜುಕೊಳದಲ್ಲಿ ಇಬ್ಬರು ವಿದೇಶಿಗರು ಸಾವು
ಇನ್ನು ಬೆಂಗಳೂರಿನ ಹಲಸೂರಿನ ಪಂಚತಾರಾ ಹೋಟೆಲ್‌ನ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ. ಶುಕ್ರವಾರ ಸಂಜೆ ಹೋಟೆಲ್‌ನ ಮೂರನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಜರ್ಮನಿ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ (57) ಮತ್ತು ಸ್ಲೋವಾಕಿಯಾ ಮೂಲದ ಜುರಾಜ್ ಹೊರ್ವತ್ (45) ಎಂದು ಗುರುತಿಸಲಾಗಿದೆ. ಅಲೆಕ್ಸಾಂಡರ್ ಅವರು ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರೆ, ಜುರಾಜ್ ಅವರು ಐಬಿಎಂ ಕಂಪನಿಯಲ್ಲಿ ಯೋಜನಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.
ಗಾಯಗೊಂಡವರನ್ನು ಅಮೆರಿಕದ ಮ್ಯಾಥ್ಯೂ ಡೆಸಾಂಟಿಸ್ (41) ಮತ್ತು ಹೋಟೆಲ್‌ನ ಪೂಲ್ ಅಟೆಂಡೆಂಟ್ ರಾಹುಲ್ ತಿವಾರಿ (28) ಎಂದು ಗುರುತಿಸಲಾಗಿದೆ. ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶದಿಂದ ತೊಂದರೆಗೆ ಸಿಲುಕಿದ್ದವರನ್ನು ರಕ್ಷಿಸಲು ಮುಂದಾದಾಗ ಇಬ್ಬರೂ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Click it and Unblock the Notifications
