Namma Metro: ಇಂದಿನಿಂದ ಯೆಲ್ಲೋ ಲೈನ್‌ನಲ್ಲಿ 4ನೇ ಮೆಟ್ರೋ ಪರೀಕ್ಷೆ: 20 ನಿಮಷಕ್ಕೊಂದು ರೈಲು ಸಂಚಾರ ಶೀಘ್ರ
ಬೆಂಗಳೂರು, ಆಗಸ್ಟ್ 15: ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್ ಪ್ರಯಾಣಿಕರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ಮಂಗಳವಾರ ರಾತ್ರಿ ನಾಲ್ಕನೇ ರೈಲಿನ ಒಂದು ಬೋಗಿ ನಗರದ ಹೆಬ್ಬಗೋಡಿ ಮೆಟ್ರೋ ಡಿಪೋಗೆ ಆಗಮಿಸಿತ್ತು. ಬುಧವಾರ ಉಳಿದ 5 ಬೋಗಿಗಳು ಪಶ್ಚಿಮ ಬಂಗಾರದ ಟಿಟಾಗಢನಿಂದ ಆಗಮಿಸಿವೆ. ಈ ರೈಲುಗಳ ಪರೀಕ್ಷೆ ಇಂದಿನಿಂದಲೇ ಆರಂಭವಾಗಲಿದೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.
ಹೌದು, ಮೂರು ರೈಲುಗಳಿಂದ ಹಳದಿ ಮಾರ್ಗ ಆಗಸ್ಟ್ 11ರಿಂದ ಸೇವೆ ಆರಂಭಿಸಿದೆ. ಪ್ರತಿ 25 ನಿಮಿಷಗಳಿಗೆ ಒಂದು ರೈಲು ಆವರ್ತನದೊಂದಿಗೆ ಪ್ರಯಾಣಿಕರು ಸೇವೆ ಪಡೆಯುತ್ತಿದ್ದಾರೆ. ಇಂದಿನಿಂದ ಈ ಹೊಸ ನಾಲ್ಕನೇ ರೈಲಿನ ಪರೀಕ್ಷೆಗಳು ನಡೆಸಿ ಅದು ಪೂರ್ಣಗೊಳ್ಳುತ್ತಿದ್ದಂತೆ ಅದನ್ನು ಸೇವೆ ನಿಯೋಜಿಸಲಾಗುವುದು. ಆಗ ಹಳದಿ ಮಾರ್ಗದಲ್ಲಿ ಪ್ರತಿ 25 ನಿಮಿಷಕ್ಕೆ ಬದಲಾಗಿ 20 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ಮಾಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಯೊಬ್ಬರು ತಿಳಿಸಿದರು.

ವಿವಿಧ ಪರೀಕ್ಷೆಗಳ ಬಳಿಕ ವಾಣಿಜ್ಯ ಕಾರ್ಯಾಚರಣೆ
ಹಳದಿ ಮಾರ್ಗದ ನಾಲ್ಕನೇ ರೈಲು ಸೆಟ್ ಅನ್ನು ಡಿಪೋದಲ್ಲಿ ಲಾರಿಯಿಂದ ಅನ್‌ಲೋಡ್ ಮಾಡಲಾಗಿದೆ. ಇಂದು ಶುಕ್ರವಾರ ಗ್ಯಾಂಗ್‌ವೇ ಫಿಟ್‌ಮೆಂಟ್ ಮೂಲಕ ಒಂದು ಪೂರ್ಣ ರೈಲಾಗಿ ಜೋಡಿಸುವ ಕಾರ್ಯ ನಡೆಯಲಿದೆ. ಬಳಿಕ ಸ್ಥಿರ ಪರೀಕ್ಷೆ ಸೇರಿದಂತೆ ಒಟ್ಟು ಸುಮಾರು ಇಪ್ಪತ್ತಕ್ಕೂ ಹೆಚ್ಚು ಪರೀಕ್ಷೆಗಳು ನಡೆಸಲಾಗುತ್ತದೆ. ಅದಕ್ಕಾಗಿ ಇನ್ಸ್‌ಪೆಕ್ಷನ್ ಬೇ ಲೈನ್ (ಐಬಿಎಲ್) ಗೆ ರೈಲು ಒಯ್ಯಲಾಗುತ್ತದೆ. ಡೈನಾಮಿಕ್ ಪರೀಕ್ಷೆ, ಲೋಡ್ ಟೆಸ್ಟ್, ಸಿಗ್ನಲಿಂಗ್ ಟೆಸ್ಟ್, ಚಾಲಕ ರಹಿತ, ಚಾಲಕ ಸಹಿತ ಸೇರಿದಂತೆ ಅಗತ್ಯ ಎಲ್ಲ ಪರೀಕ್ಷೆಗಳನ್ನು ಮುಂದಿನ ಎರಡು ವಾರದಲ್ಲಿ ನಡೆಸಲಾಗುತ್ತದೆ.
ಮೊನ್ನೆಯಷ್ಟೇ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಿದ್ದರಿಂದ ಹಗಲು ಹೊತ್ತಿನಲ್ಲಿ 4ನೇ ರೈಲಿನ ಪರೀಕ್ಷೆ ನಡೆಸಲು ಆಗುವುದಿಲ್ಲ. ಬದಲಾಗಿ ರಾತ್ರಿ ಹೊತ್ತು ಪರೀಕ್ಷೆಗಳನ್ನು ನಡೆಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಮುಂದಿನ ಎರಡು ವಾರಗಳ ಕಾಲ ಈ ರೈಲಿನ ಪರೀಕ್ಷೆ ನಡೆಸಲಾಗುತ್ತದೆ. ಈ ವಿಚಾರವಾಗಿ ಮೆಟ್ರೋದ ರೋಲಿಂಗ್ ಸ್ಟಾಕ್ ಹಾಗೂ ಸಿಗ್ನಲಿಂಗ್ ಸಿಬ್ಬಂಧಿ, ಅಧಿಕಾರಿಗಳು ಶ್ರಮಿಸಲಿದ್ದಾರೆ.
ನಾಲ್ಕನೇ ರೈಲಿನಿಂದ ಮತ್ತಷ್ಟು ಅನುಕೂಲ
ಇದೆಲ್ಲ ಪರೀಕ್ಷೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೂಡಲೇ ನಾಲ್ಕನೇ ರೈಲನ್ನು ಸಹ ವಾಣಿಜ್ಯ ಕಾರ್ಯಾಚರಣೆಗೆ ನಿಯೋಜಿಸಲು ಮೆಟ್ರೋ ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಹಾಲಿ ಮೂರೇ ರೈಲುಗಳಿಂದ ತ್ರಾಸದಾಯ ಸೇವೆ ನೀಡಲಾಗುತ್ತಿದೆ. ನಾಲ್ಕನೇ ರೈಲಿನಿಂದ ಈ ತ್ರಾಸು ತುಸು ಕಡಿಮೆಯಾಗಲಿದೆ. ಅಕ್ಟೊಬರ್ ತಿಂಗಳಿನಿಂದ ಬೆಂಗಳೂರಿಗೆ ಪ್ರತಿ ತಿಂಗಳಿಗೆ ಎರಡು ರೈಲು ಸೆಟ್‌ಗಳು ಟಿಟಾಗರ್‌ನಿಂದ ಬರುವ ನಿರೀಕ್ಷೆ ಇದೆ.
BMRCL ಈಗಾಗಲೇ ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಅದರಂತೆ 36 ರೈಲು ಸೆಟ್ ಗಳನ್ನು (216 ಬೋಗಿಗಳು) ಪೂರೈಕೆಗೆ ಮಾಡುವುದಾಗಿ ಕಂಪನಿ ತಿಳಿಸಿದೆ. ಈ ಬೋಗಿ ತಯಾರಿಕೆಯು ಪಶ್ಚಿಮ ಬಂಗಾಳದ ಟಿಟಾಗಢನಲ್ಲಿ ನಡೆಯುತ್ತಿದೆ. ಅಲ್ಲಿಂದ ಲಾರಿ ಮೂಲಕ ಬೆಂಗಳೂರಿಗೆ ಬರಲಿವೆ. ಸ್ವೀಕರಿಸುವ ಒಟ್ಟು ರೈಲುಗಳಲ್ಲಿ 15 ರೈಲುಗಳ ಹಳದಿ ಮಾರ್ಗದಲ್ಲಿ ಸಂಚರಿಸಲಿವೆ. ಉಳಿದವುಗಳು ಪಿಂಕ್ ಮಾರ್ಗಕ್ಕೆ ನಿಯೋಜಿಸುವ ಸಾಧ್ಯತೆ ಇದೆ.












Click it and Unblock the Notifications