Namma Metro: ಮುಂದಿನ ತಿಂಗಳು ಕೆ.ಆರ್.ಪುರಂ- ವೈಟ್‌ಫಿಲ್ಡ್‌ವರೆಗೆ ಮೆಟ್ರೋ ಓಡಾಟ, ಅಧಿಕೃತ ಮಾಹಿತಿ ಇಲ್ಲಿದೆ
ಮುಂದಿನ ತಿಂಗಳು ಕೆ.ಆರ್.ಪುರಂ- ವೈಟ್‌ಫಿಲ್ಡ್‌ವರೆಗೆ ಮೆಟ್ರೋ ಓಡಾಟ ಆರಂಭಿಸಲಿದೆ. ಗಂಟೆಗೆ 80ಕಿ.ಮಿ.ವೇಗದಲ್ಲಿ ಪ್ರಾಯೋಗಿಕ ಸಂಚಾರ ಮುಗಿದಿದೆ. ಈ ಬಗೆಗಿನ ಅಧಿಕೃತ ಮಾಹಿತಿಗಾಗಿ ಮುಂದೆ ಓದಿ.
ಬೆಂಗಳೂರು, ಫೆಬ್ರವರಿ 13: ಬೆಂಗಳೂರು ನಗರದ ಬಹುನಿರೀಕ್ಷೆಯ ಮೆಟ್ರೋ ಮಾರ್ಗದಲ್ಲಿ ಮುಖ್ಯವಾದ ಕೆ.ಆರ್. ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಈ ಮಾರ್ಗದಲ್ಲಿ ರೈಲು ಕಾರ್ಯಾರಂಭ, ಪ್ರಯಾಣಿಕರ ಸಂಚಾರ ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಸದ್ಯ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಕೆ.ಆರ್. ಪುರಂ-ವೈಟ್‌ಫೀಲ್ಡ್ ಈ ಮೆಟ್ರೋ ಮಾರ್ಗದಲ್ಲಿ ಮುಂದಿನ ಮೂವತ್ತೇ ದಿನದಲ್ಲಿ ಮೆಟ್ರೋ ಸಂಚಾರ ಸೇವೆ ಲಭ್ಯವಾಗಲಿದೆ ಎಂದು ಸ್ವತಃ ಬಿಎಂಆರ್‌ಸಿಎಲ್ ಅಧಿಕಾರಿಗಳೇ ಖಚಿತಪಡಿಸಿದ್ದಾರೆ.
ಬೆಂಗಳೂರಲ್ಲಿ ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನ ಆರಂಭವಾದ ಫೆಬ್ರವರಿ 10ರಂದು ವಿಧಾನಸೌಧದಲ್ಲಿ ಮಾತನಾಡಿದ್ದ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು, ನೂತನ ಮೆಟ್ರೋ ಮಾರ್ಗದ ಆರಂಭ ಕುರಿತು ಮಾಹಿತಿ ನೀಡಿದ್ದರು.
ಅವರ ಪ್ರಕಾರ ಮುಂದಿನ ತಿಂಗಳ ಮಾರ್ಚ್ 15ರ ನಂತರ ವೈಟ್ ಫಿಲ್ಡ್‌ನಿಂದ ಕೆ.ಆರ್.ಪುರಂ ವರೆಗೆ ಸಾರ್ವಜನಿಕರು ಮೆಟ್ರೋದಲ್ಲಿ ಸಂಚರಿಸಬಹುದು ಎಂಬ ವಿಶ್ವಾಸ ವ್ಯಕ್ತವಾಗಿದೆ.

ಮಾರ್ಗ ಸುರಕ್ಷತಾ ತಪಾಸಣೆ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಈಗಾಗಲೇ ಈ ಮಾರ್ಗದ ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರಿಗೆ ದಾಖಲೆಪತ್ರ ಒಪ್ಪಿಸುವ ಪ್ರಕ್ರಿಯೆ ಆರಂಭವಾಗಿದೆ. ಸುರಕ್ಷತಾ ತಪಾಸಣೆ ಬಳಿಕ ಎಲ್ಲವು ಅಂತಿಮಗೊಳ್ಳಲಿದೆ. ಇನ್ನೊಂದು ವಾರದಲ್ಲಿ (ಫೆಬ್ರವರಿ 20) ಈ ಮಾರ್ಗದ ತಪಾಸಣೆ, ಪ್ರಾಯೋಗಿಕ ಸಂಚಾರ ನಡೆಯಬೇಕಿದೆ.

80 ಕಿಮಿ ವೇಗದಲ್ಲಿ ಹೈಸ್ಟೀಡ್ ಟ್ರಯಲ್ ರನ್
ನಮ್ಮ ಮೆಟ್ರೋವು ಹೈಸ್ಪೀಡ್ ಟ್ರಯಲ್ ರನ್ ನಡೆಸಿದೆ. ಈ ವೇಳೆ ಸುಮಾರು ಆರು ಬೋಗಿಇರುವ ಒಂದು ರೈಲು ಗಂಟೆಗೆ 80 ಕಿಲೋ ಮೀಟರ್ ವೇಗದಲ್ಲಿ ಚಲಿಸಿದೆ. ಮುಂದಿನ ವಾರ ಕೆಲವು ಸ್ಟ್ರೆಚ್‌ಗಳಲ್ಲಿ, ರೈಲನ್ನು ಗಂಟೆಗೆ 90 ಕಿಲೋ ಮೀಟರ್ ಸೇವಾ ಪ್ರಯೋಗಗಳನ್ನು ಪೂರ್ಣಗೊಳಿಸಲು BMRCL ಐದು ರೈಲು ಸೆಟ್ ನಿಯೋಜಿಸಿದೆ. ಈವರೆಗೆ ನಡೆದ ಒಂದಷ್ಟು ತಪಾಸಣೆಗಳು, ಸಂಚಾರಗಳ ಕುರಿತ ವರದಿ/ದಾಖಲೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೊಂದೇ ವಾರದಲ್ಲಿ ಎಲ್ಲವು ಅಂತಿಮ
ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತಾಧಿಕಾರಿಗಳು ಇನ್ನೊಂದೇ ವಾರದಲ್ಲಿ ಮಾರ್ಗ ಪರಿಶೀಲಿಸಲಿದ್ದಾರೆ. ಅವರು ತಪಾಸಣೆಗೈದ ಬಳಿಕ BMRCL ನಿಯಮದಂತೆ ಬಾಕಿ ಸೂಚನೆಗಳನ್ನು ಪಾಲಿಸಲಿದೆ. ಮೆಟ್ರೋ ಸಂಚಾರ ಸ್ಮಾರ್ಟ್ ಕಾರ್ಡ್, ಟಿಕೆಟ್ ವಹಿವಾಟುಗಾಗಿ ಗ್ರಾಹಕರಿಗೆ ಅನುಕೂಲವಾಗುವ ಅಗತ್ಯ ವ್ಯವಸ್ಥೆಯನ್ನು ಹಾಗೂ ಸ್ವಯಂಚಾಲಿತ ಶುಲ್ಕ ಸಂಗ್ರಹಿಸುವ ಗೇಟ್ (ಕ್ಯೂಆರ್ ಕೋಡ್) ಅನ್ನು ಸ್ಥಾಪನೆ ಕೆಲಸ ನಡೆಯುತ್ತಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದರು.
ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗೆ ಮೆಟ್ರೋ ಸಂಪರ್ಕಕ್ಕಾಗಿ ಅನುಕೂಲವಾಗಲು ಇತ್ತಿಚೇಗಷ್ಟೇ ವೆಬ್ ಗರ್ಡರ್ ತೆರೆಯಲಾಗಿದೆ. ಅದನ್ನು ಬೆಣ್ಣಿಗಾನಹಳ್ಳಿ ಬಳಿ ಬೆಂಗಳೂರು-ಸೇಲಂ ರೈಲ್ವೆ ಮಾರ್ಗದಲ್ಲಿ ಹಳಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಆದರೆ ಇದರಿಂದಾಗಿ 15 ಕಿಲೋ ಮೀಟರ್ (ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗೆ) ಮೆಟ್ರೋ ಲೈನ್ ಅನ್ನು ಏಕಕಾಲಕ್ಕೆ ತೆರೆಯುವುದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಮೆಟ್ರೋ ನಿಲ್ದಾಣಗಳು ಇವು
ಕೆಆರ್ ಪುರಂನಿಂದ ಬೈಯಪ್ಪನಹಳ್ಳಿವರೆಗಿನ ಮಾರ್ಗವು ಮೊದಲ ಹಂತವಾಗಿದೆ. ಈ ಕಾರಿಡಾರ್ ಯೋಜನೆಯಲ್ಲಿ ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸದರಮಂಗಲ, ನಲ್ಲೂರಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್‌ಪಾಳ್ಯ, ಸರಸ್ವತಿ ನಗರ ಹಾಗೂ ಕೆ.ಆರ್ ಪುರಂ ಮೆಟ್ರೋ ನಿಲ್ದಾಣಗಳು ಬರುತ್ತವೆ.
ಕೆಆರ್ ಪುರಂನಿಂದ ಬೈಯಪ್ಪನಹಳ್ಳಿವರೆಗಿನ ಮಾರ್ಗದಲ್ಲಿ 2.5 ಕಿಲೋ ಮೀಟರ್ ಉದ್ದದ ಕೆಲಸ ಪೂರ್ಣಗೊಳ್ಳಬೇಕಿದೆ. ಅದು ಜೂನ್‌ಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್‌ಗಳು ಓಡಾಡಲಿವೆ ಎಂದು ನಮ್ಮ ಮೆಟ್ರೋ ತಿಳಿಸಿದೆ.












Click it and Unblock the Notifications